ಸೆ. 25ರ ಜನತಾದರ್ಶನ ಕಾರ್ಯಕ್ರಮಕ್ಕೆ ವ್ಯವಸ್ಥಿತ ಸಿದ್ದತೆಗಳು- ಡಾ. ಆನಂದ್

(ನ್ಯೂಸ್ ಕಡಬ) newskadaba.com ಮಂಗಳೂರು, ಸೆ. 24. ಸರ್ಕಾರದ ನಿರ್ದೇಶನದಂತೆ ಇದೇ ತಿಂಗಳ 25ರಂದು ನಗರದ ಕುದ್ಮುಲ್ ರಂಗರಾವ್ ಪುರಭವನದಲ್ಲಿ ಜಿಲ್ಲಾ ಉಸ್ತುವಾರಿ ಸಚಿವರ ನೇತೃತ್ವದಲ್ಲಿ ಆಯೋಜಿಸಲಾಗುತ್ತಿರುವ ಜನತಾ ದರ್ಶನ ಕಾರ್ಯಕ್ರಮದಲ್ಲಿ ಯಾವುದೇ ಗೊಂದಲಗಳಿಗೆ ಆಸ್ಪದವಿಲ್ಲದಂತೆ ಸಾರ್ವಜನಿಕರ ಅಹವಾಲುಗಳನ್ನು ಸ್ವೀಕರಿಸಲು ಜಿಲ್ಲಾಡಳಿತ ಹಾಗೂ ಜಿಲ್ಲಾ ಪಂಚಾಯತ್ ನಿಂದ ವ್ಯವಸ್ಥಿತವಾದ ಸಿದ್ದತೆಗಳನ್ನು ಮಾಡಿಕೊಳ್ಳಲಾಗಿದ್ದು, ಸಂಬಂಧಿಸಿದ ಇಲಾಖೆಯ ಮುಖ್ಯಸ್ಥರು ಈ ದಿಸೆಯಲ್ಲಿ ಅಗತ್ಯ ಕ್ರಮವಹಿಸಬೇಕು ಎಂದು ಜಿಲ್ಲಾ ಪಂಚಾಯತ್ ನ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ. ಆನಂದ್ ಅವರು ತಿಳಿಸಿದರು. ಅವರು ನಗರದ ಜಿಲ್ಲಾ ಪಂಚಾಯತ್‍ನ ನೇತ್ರಾವತಿ ಸಭಾಂಗಣದಲ್ಲಿ ಈ ಕುರಿತು ಹಮ್ಮಿಕೊಳ್ಳಲಾಗಿದ್ದ ಪೂರ್ವ ಸಿದ್ದತಾ ಸಭೆಯಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದರು.


ಸೆ. 25ರಂದು ತಮ್ಮ ಅಹವಾಲುಗಳನ್ನು ಸಲ್ಲಿಸಲು ಆಗಮಿಸುವ ಸಾರ್ವಜನಿಕರಿಗೆ ಅನುಕೂಲ ಕಲ್ಪಿಸಿಕೊಡಲು ಮೂರು ಹಂತದ ಸಿದ್ದತೆಗಳನ್ನು ಮಾಡಿಕೊಳ್ಳಲಾಗಿದೆ. ಮೊದಲ ಹಂತದಲ್ಲಿ ಹೆಲ್ಪ್‍ ಡೆಸ್ಕ್ ತೆರೆಯಲಾಗುವುದು. ಅಹವಾಲು ಸಲ್ಲಿಸಲು ಬರುವ ಸಾರ್ವಜನಿಕರಿಗೆ ತಾವು ಸಲ್ಲಿಸುವ ಅಹವಾಲು ಯಾವ ಇಲಾಖೆಗೆ ಸಂಬಂಧಿಸಿದ್ದು ಎಂಬುದನ್ನು ಅಲ್ಲಿ ನಿಯೋಜಿಸಲಾಗಿರುವ ಸಿಬ್ಬಂದಿ ತಿಳಿಸಿಕೊಡುವರು. ಎರಡನೇ ಹಂತದಲ್ಲಿ ಸಾರ್ವಜನಿಕರು ನೀಡಿದ ಅರ್ಜಿಯನ್ನು ಪಡೆಯಲು ವಿವಿಧ ಇಲಾಖೆಗಳಿಗಾಗಿ ತೆರೆಯಲಾದ ಕೌಂಟರ್‍ ಗಳಿಗೆ ಕಳುಹಿಸಲಾಗುವುದು, ಸಂಬಂಧಿಸಿದ ಸಿಬ್ಬಂದಿ ಅಂದು ಬೆಳಿಗ್ಗೆ 8 ರಿಂದ 8.30ರೊಳಗೆ ಟೌನ್‍ ಹಾಲ್‍ ನಲ್ಲಿ ಹಾಜರಿರಬೇಕು, ತಮ್ಮ ಇಲಾಖೆ ವ್ಯಾಪ್ತಿಗೆ ಬರುವ ಅಹವಾಲುಗಳು, ಅವುಗಳಿಗೆ ಕೈಗೊಳ್ಳಲಾಗುವ ಪರಿಹಾರ, ಕೈಗೊಂಡಿರುವ ಕ್ರಮಗಳು, ಸರ್ಕಾರದ ಗಮನ ಸೆಳೆಯುವಂತಹ ಅರ್ಜಿಗಳಿದ್ದಲ್ಲಿ ಅವುಗಳನ್ನು ಸರ್ಕಾರದ ಮಟ್ಟದಲ್ಲಿ ಗಮನಕ್ಕೆ ತರುವುದು ಸೇರಿದಂತೆ ಈ ಬಗ್ಗೆ ಕಂಪ್ಯೂಟರ್‍ ನಲ್ಲಿ ಎಕ್ಸ್ ಎಲ್ ಶೀಟ್ ಓಪನ್ ಮಾಡಿಕೊಂಡು ಅರ್ಜಿಗಳಿಗೆ ಅನುಕ್ರಮವಾಗಿ ನಂಬರ್ ನೀಡಿ, ಅರ್ಜಿದಾರರ ಹೆಸರು, ಮೊಬೈಲ್ ನಂಬರ್ ಹಾಗೂ ಅವರ ಸಮಸ್ಯೆಗಳ ಸಂಕ್ಷಿಪ್ತ ವಿವರಣೆಯನ್ನು ಪಡೆಯಬೇಕು ಎಂದು ಸೂಚಿಸಿದರು.

ಮೂರನೇ ಹಂತದಲ್ಲಿ ಸಾರ್ವಜನಿಕರು ತಮ್ಮ ಸಮಸ್ಯೆ/ಅಹವಾಲುಗಳನ್ನು ಜಿಲ್ಲಾ ಉಸ್ತುವಾರಿ ಸಚಿವರಿಗೆ ಸಲ್ಲಿಸಿ ಅವರಿಗೆ ಮೌಖಿಕವಾಗಿ ತಿಳಿಸುವುದು. ಈ ಮೂರು ಹಂತಗಳಲ್ಲಿ ಯಾವುದೇ ರೀತಿಯ ಗೊಂದಲಗಳು, ಅವ್ಯವಸ್ಥೆ ಉಂಟಾಗಬಾರದು. ಸಂಬಂಧಿಸಿದವರು ನೀಡಿದ ಅರ್ಜಿಯ ಪತ್ತೆ ವಿಧಾನ ಸುಲಭವಾಗಿ ಆಗಬೇಕು ಎಕ್ಸ್‍ ಎಲ್ ಶೀಟ್ ನೊಂದಿಗೆ ಸಂಬಂಧಿಸಿದವರ ಮನವಿ/ಅಹವಾಲುಗಳನ್ನು ಪ್ರಸಕ್ತ ಚಾಲ್ತಿಯಲ್ಲಿರುವ ಸಾರ್ವಜನಿಕರ ಕುಂದು ಕೊರತೆ ನಿವಾರಣೆ ವ್ಯವಸ್ಥೆ ಐಪಿಜಿ ಆರ್‍ಎಸ್ ಪೋರ್ಟಲ್‍ನಲ್ಲಿ ದಾಖಲಿಸಬೇಕು. ಆದ ಕಾರಣ ಸಮಸ್ಯೆಗಳನ್ನು ನಿಗದಿತ ಸಮಯದೊಳಗೆ ಇತ್ಯರ್ಥ ಪಡಿಸಬೇಕಾಗುತ್ತದೆ. ಈ ಕುರಿತು ಸಾರ್ವಜನಿಕರಿಗೆ ನೀಡಿದ ಹಿಂಬರಹದ ಅನುಪಾಲನಾ ವರದಿಯನ್ನು ಸಲ್ಲಿಸಬೇಕು ಹಾಗೂ ದಿನದ ಕೊನೆಯಲ್ಲಿ ವಿವಿಧ ಇಲಾಖೆಗಳ ವ್ಯಾಪ್ತಿಯಲ್ಲಿ ಸಲ್ಲಿಕೆಯಾದ ಅರ್ಜಿಗಳ ಸಂಖ್ಯೆಯನ್ನು ತಿಳಿಸಬೇಕು ಎಂದವರು ನಿರ್ದೇಶನ ನೀಡಿದರು.

Also Read  ಕಡಬದಲ್ಲಿ 37ನೇ ವರ್ಷದ ಸಾಮೂಹಿಕ ಶ್ರೀ ಸತ್ಯನಾರಾಯಣ ಪೂಜೆ-ಧಾರ್ಮಿಕ ಸಭೆ ➤ ತಮ್ಮೊಳಗಿರುವ ರಾಕ್ಷಸಿ ಪ್ರವೃತ್ತಿಯನ್ನು ಮೊದಲು ತೊಲಗಿಸಿದರೆ ಸಮಾಜದಲ್ಲಿ ಶಾಂತಿ - ಒಡಿಯೂರು ಶ್ರೀ

ಅಪರ ಜಿಲ್ಲಾಧಿಕಾರಿ ಡಾ. ಸಂತೋಷ್ ಕುಮಾರ್ ಮಾತನಾಡಿ, ಜನತಾ ದರ್ಶನ ವ್ಯವಸ್ಥಿತವಾಗಿ ನಿರ್ವಹಿಸಲು ಟೌನ್‍ ಹಾಲ್ ನಲ್ಲಿ 10 ಹೆಲ್ಪ್‍ ಡೆಸ್ಕ್ ಅನ್ನು ತೆರೆಯಲಾಗುವುದು,  ಅದರಲ್ಲಿ ಕಡ್ಡಾಯವಾಗಿ ತಾಲೂಕು ಮಟ್ಟದ ಅಧಿಕಾರಿ ಸೇರಿದಂತೆ 4 ಮಂದಿ ಸಿಬ್ಬಂದಿಗಳನ್ನು ಸಂಬಂಧಿಸಿದ ಇಲಾಖೆಯವರು ನಿಯೋಜಿಸಿಕೊಳ್ಳಬೇಕು. ಸಂಬಂಧಿಸಿದ ಇಲಾಖೆಗಳಿಗಾಗಿ ಜಿಲ್ಲಾಡಳಿತದಿಂದ 20 ಕೌಂಟರ್ ತೆರೆಯಲಾಗುವುದು, ಅಲ್ಲಿಗೆ ಬೇಕಾದ ಕಂಪ್ಯೂಟರ್, ಪ್ರಿಂಟರ್, ಟೇಬಲ್, ಚೇರ್, ಸ್ಟೇಷನರಿ ಇತ್ಯಾದಿಗಳನ್ನು ಸಂಬಂಧಿಸಿದ ಇಲಾಖೆಯವರು ವ್ಯವಸ್ಥೆ ಮಾಡಿಕೊಳ್ಳಬೇಕು, ಮುಖ್ಯವಾಗಿ ಅಲ್ಲಿ ನಿಯೋಜಿತರಾಗುವ ಸಿಬ್ಬಂದಿ ಶಾಂತಚಿತ್ತರಾಗಿ ಸಾರ್ವಜನಿಕರೊಂದಿಗೆ ವ್ಯವಹರಿಸಬೇಕು, ಗೊಂದಲಗಳಿಗೆ ಆಸ್ಪದ ನೀಡಬಾರದು ಎಂದರು.

Also Read  ಬೆಳ್ತಂಗಡಿಯ ಕುತ್ಲೂರು ಗ್ರಾಮಕ್ಕೆ “ಅತ್ಯುತ್ತಮ ಸಾಹಸಿಕ ಪ್ರವಾಸಿ ತಾಣ" ರಾಷ್ಟ್ರ ಪ್ರಶಸ್ತಿ

ಅಂದು ಮೆಸ್ಕಾಂನಿಂದ ಅನಿಯಮಿತ ವಿದ್ಯುತ್ ಪೂರೈಕೆ ಆಗಬೇಕು, ಮಂಗಳೂರು ಮಹಾನಗರ ಪಾಲಿಕೆಯಿಂದ ಕುಡಿಯುವ ನೀರು ಪೂರೈಕೆ, ಟೌನ್ ಹಾಲ್, ಮಿನಿ ಟೌನ್‍ಹಾಲ್ ಸ್ಪಚ್ಚತಾ ಕಾರ್ಯನಿರ್ವಹಿಸಬೇಕು ಎಂದರು. ಕಾನೂನು ಮತ್ತು ಸುವ್ಯವಸ್ಥೆ ವಿಭಾಗದ ಡಿಸಿಪಿ ಸಿದ್ದಾರ್ಥ ಗೋಯಲ್, ಪುತ್ತೂರು ಸಹಾಯಕ ಆಯುಕ್ತ ಗಿರೀಶ್ ನಂದನ್ ಹಾಗೂ ಮಂಗಳೂರು ಮಹಾನಗರ ಪಾಲಿಕೆಯ ಜಂಟಿ ಆಯುಕ್ತ ರವಿಕುಮಾರ್ ವೇದಿಕೆಯಲ್ಲಿದ್ದರು. ಸಂಬಂಧಿಸಿದ ಅಧಿಕಾರಿಗಳು ಸಭೆಯಲ್ಲಿದ್ದರು.

error: Content is protected !!
Scroll to Top