(ನ್ಯೂಸ್ ಕಡಬ) newskadaba.com ಬೆಂಗಳೂರು, ಸೆ. 23. ಚಂದ್ರಯಾನ 3ರ ಲ್ಯಾಂಡರ್ ನೌಕೆ ವಿಕ್ರಮ್ ಹಾಗೂ ರೋವರ್ ಪ್ರಗ್ಯಾನ್ ಜೊತೆ ಸಂಪರ್ಕ ಸಾಧಿಸುವ ಪ್ರಯತ್ನಗಳನ್ನು ಇಸ್ರೋದಿಂದ ಮಾಡಲಾಗಿದ್ದು, ಆದರೆ ಅವುಗಳಿಂದ ಇನ್ನೂ ಯಾವುದೇ ಸಂಕೇತ (ಸಿಗ್ನಲ್)ಗಳು ಬಂದಿಲ್ಲವೆಂದು ಭಾರತೀಯ ಬಾಹ್ಯಾಕಾಶ ಸಂಸ್ಥೆ ತಿಳಿಸಿದೆ.
ವಿಕ್ರಮ್ ಹಾಗೂ ಪ್ರಜ್ಞಾನ್ ನೌಕೆಗಳನ್ನು ಪುನರುಜ್ಜೀವನಗೊಳಿಸುವ ಯೋಜನೆಯನ್ನು ಕಾರಣಾಂತರಗಳಿಂದ ಶನಿವಾರಕ್ಕೆ ಮುಂದೂಡಲಾಗಿದೆ ಎಂದು ಇಸ್ರೋ ಹೇಳಿದೆ. ಈ ಬಗ್ಗೆ ಇಸ್ರೋದ ಬಾಹ್ಯಾಕಾಶ ಅಪ್ಲಿಕೇಶನ್ಸ್ ಕೇಂದ್ರದ ನಿರ್ದೇಶಕ ನಿಲೇಶ್ ದೇಸಾಯಿ ಅವರು, ಈ ಮೊದಲು ನಾವು ಪ್ರಜ್ಞಾನ್ ರೋವರ್ ಹಾಗೂ ವಿಕ್ರಮ್ ಲ್ಯಾಂಡರ್ ನೌಕೆಯನ್ನು ಸೆಪ್ಟಂಬರ್ 22ರಂದು ಮರು ಕ್ರಿಯಾಶೀಲಗೊಳಿಸಲು ಯೋಜಿಸಿದ್ದೆವು. ಆದರೆ ಕೆಲವು ಕಾರಣಗಳಿಂದ ಅದನ್ನು ಸೆಪ್ಟಂಬರ್ 23ಕ್ಕೆ ಮುಂದೂಡಲಾಗಿದೆ” ಎಂದು ಹೇಳಿದ್ದಾರೆ ಎಂದು ಪತ್ರಿಕೆಯೊಂದು ವರದಿ ಮಾಡಿದೆ.