(ನ್ಯೂಸ್ ಕಡಬ) newskadaba.com ಸುಳ್ಯ, ಸೆ. 22. ಯಾವ ಕ್ರೀಡೆಯಲ್ಲಿಯೂ ಸಹ ಧರ್ಮ ಪಂಥ ಮೇಲು ಕೀಳು ಎಂಬ ಭಾವನೆ ಇಲ್ಲ. ಕ್ರೀಡೆಯಲ್ಲಿ ಇದನ್ನು ನೋಡಲು ಸಾಧ್ಯವಿಲ್ಲ. ಕ್ರೀಡೆ ಒಂದು ಒಗ್ಗಟ್ಟಿನ ಮಂತ್ರ. ನಮ್ಮ ಮಕ್ಕಳ ಶೈಕ್ಷಣಿಕದೊಂದಿಗೆ ಸಾಮರಸ್ಯವನ್ನು ಮೂಡಿಸಲು ಕ್ರೀಡೆಯು ಪ್ರಧಾನ ಅಂಗವಾಗಿದೆ. ನಾವೆಲ್ಲರೂ ಎಲೆ ಮರೆ ಕಾಯಿಯಂತೆ ಪ್ರಾಥಮಿಕ ಶಾಲಾ ಮಕ್ಕಳಂತೆ ಕ್ರೀಡೆಗೆ ಬಂದಿದ್ದೇವೆ. ನಿಮ್ಮಲ್ಲಿ ಯಾವ ಪ್ರತಿಭೆ ಇದೆಯೋ ಅದು ನಿಮ್ಮನ್ನು ಜಿಲ್ಲಾ ಮಟ್ಟ, ರಾಜ್ಯ ಮಟ್ಟ ಹಾಗೂ ದೇಶವನ್ನೇ ಪ್ರತಿನಿಧಿಸಲಿಕ್ಕೆ ಸಾಧ್ಯವಾಗಬಹುದು. ಅದಕ್ಕೆ ಪ್ರಾಥಮಿಕ ಶಿಕ್ಷಣ ಇಲಾಖೆ ಅವಕಾಶವನ್ನು ಕೊಡುವ ವ್ಯವಸ್ಥೆಯನ್ನು ಸರಕಾರ ಮತ್ತು ಶಿಕ್ಷಣ ಇಲಾಖೆ ಮಾಡಿದು ಶ್ಲಾಘನೀಯ ಎಂದು ಅರಂತೋಡು ಗ್ರಾಮ ಪಂಚಾಯತ್ ಅಧ್ಯಕ್ಷ ಕೇಶವ ಅಡ್ತಲೆ ಹೇಳಿದರು. ಅವರು ಆರಂತೋಡು ಪ್ರಾಥಮಿಕ ಶಾಲೆಯಲ್ಲಿ ನಡೆದ ಬಾಲಕ ಬಾಲಕಿಯರ ತ್ರೋಬಾಲ್ ಪಂದ್ಯಾಟ ಸಭಾ ಕಾರ್ಯಕ್ರಮವನ್ನು ದೀಪ ಬೆಳಗಿಸಿ ಉದ್ಘಾಟಿಸಿ ಮಾತನಾಡಿದರು.
ಸ್ವಚ್ಛತೆಗೆ ಆದ್ಯತೆ ನೀಡಿ- ಅರಂತೋಡು ಗ್ರಾಮ ಪಂಚಾಯತ್ ಸ್ವಚ್ಛತೆಯಲ್ಲಿ ಹೆಸರನ್ನು ಪಡೆದ ಪಂಚಾಯತ್. ಜಿಲ್ಲೆಯಲ್ಲಿ ಸ್ವಚ್ಛತೆಗೆ ಆಯ್ಕೆಯಾದ ಏಕೈಕ ಗ್ರಾಮ ಪಂಚಾಯತ್ ಅರಂತೋಡು ಆಗಿದೆ. ಈ ಎಲ್ಲದಕ್ಕೂ ಅವಳಿ ಗ್ರಾಮದ ಜನರಿಗೆ ಕೃತಜ್ಞತೆ ಸಲ್ಲಿಸುತ್ತೆನೆ. ಈ ನಿಟ್ಟಿನಲ್ಲಿ ನಮ್ಮ ಗ್ರಾಮದ ಪರಿಸರವನ್ನು ಸ್ವಚ್ಛವಾಗಿಟ್ಟುಕೊಳ್ಳಲು ವಿದ್ಯಾರ್ಥಿಗಳಿಗೆ ಕರೆ ನೀಡಿದರು. ಇವತ್ತಿನ ದಿನಗಳಲ್ಲಿ ಮಕ್ಕಳು ಚಾಕಲೇಟ್ ತಿಂದು ಸಿಪ್ಪೆಯನ್ನು ಅಲ್ಲಿಯೇ ಬಿಸಾಡುವ ಬದಲು ಅದನ್ನು ಸುರಕ್ಷಿತ ಕಸದ ಡಬ್ಬಗಳಿಗೆ ಹಾಕಿ ಸ್ವಚ್ಛತೆಯನ್ನು ಕಾಪಾಡಿ. ಇನ್ನೋರ್ವ ಮುಖ್ಯ ಅತಿಥಿ ಸುಳ್ಯ ತಾಲ್ಲೂಕು ದೈಹಿಕ ಶಿಕ್ಷಕ ಪರಿವೀಕ್ಷಕ ಅಧಿಕಾರಿ ಸೂಫಿ ಪೆರಾಜೆ ಮಾತನಾಡಿ, ಇವತ್ತು ಆರಂತೋಡು ಸರಕಾರಿ ಪ್ರಾಥಮಿಕ ಶಾಲೆಯಲ್ಲಿ ತ್ರೋಬಾಲ್ ಪಂದ್ಯಾಟ ಅಚ್ಚುಕಟ್ಟಾಗಿ ಆಯೋಜಿಸಿದ ಶಾಲಾ ಆಡಳಿತ ಮಂಡಳಿಯವರಿಗೆ ಕೃತಜ್ಞತೆ ಸಲ್ಲಿಸಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಾಲಾ ಎಸ್ ಡಿ ಎಮ್ ಸಿ ಅಧ್ಯಕ್ಷ ಸುರೇಶ್ ಉಳುವಾರು ವಹಿಸಿದ್ದರು.