(ನ್ಯೂಸ್ ಕಡಬ) newskadaba.com ಉಪ್ಪಿನಂಗಡಿ, ಆ. 25. ಒಂಟಿ ಮಹಿಳೆ ಮತ್ತು ಎಂಡೋಸಲ್ಫಾನ್ ಪೀಡಿತ ಮಾನಸಿಕ ಅಸ್ವಸ್ಥತೆಯಿಂದ ಬಳಲುತ್ತಿದ್ದ ಯುವಕ ವಾಸವಾಗಿದ್ದ ಮನೆಗೆ ಏಕಾಏಕಿ ನುಗ್ಗಿದ ಐವರು ದುಷ್ಕರ್ಮಿಗಳ ತಂಡವೊಂದು ಯುವಕನಿಗೆ ಥಳಿಸಿ ಮಹಿಳೆಯ ಮಾನಭಂಗಕ್ಕೆ ಯತ್ನಿಸಿದ
ಘಟನೆ ಇಲ್ಲಿನ ಪೊಲೀಸ್ ಠಾಣಾ ವ್ಯಾಪ್ತಿಯ ತೆಕ್ಕಾರು ಗ್ರಾಮದ ಪಿಂಡಿಕಲ್ಲು ಎಂಬಲ್ಲಿ ಸಂಭವಿಸಿದೆ.
ಹಲ್ಲೆಗೊಳಗಾದ ಮಗ ಎಂಡೋ ಪೀಡಿತನಾಗಿದ್ದು ಮಾನಸಿಕ ಖಾಯಿಲೆಯಿಂದ ಬಳಲುತ್ತಿದ್ದಾನೆ ಎನ್ನಲಾಗಿದೆ. ಸಂತ್ರಸ್ತ ತಾಯಿ ಹಾಗೂ ಮಗ ವಾಸವಿದ್ದ ಮನೆಗೆ ಗುರುವಾರದಂದು ಸಂಜೆ ಉಪ್ಪಿನಂಗಡಿ ಕೂಟೇಲು ಸಮೀಪದ ಮಹಮ್ಮದ್ ಎಂಬಾತ ಇತರ ಐದರಿಂದ ಆರು ಮಂದಿ ಮುಖ ಪರಿಚಯವಿರುವ ಅಪರಿಚಿತರ ತಂಡದೊಂದಿಗೆ ಸಂತ್ರಸ್ತೆಯ ಮನೆಯೊಳಗೆ ಕತ್ತಿ, ದೊಣ್ಣೆ, ಮರದ ತುಂಡು ಹಾಗೂ ಮಾರಕಾಸ್ತ್ರಗಳೊಂದಿಗೆ ಅಕ್ರಮ ಪ್ರವೇಶ ಮಾಡಿದ್ದು, ಈ ವೇಳೆ ಮಹಿಳೆ ಬೊಬ್ಬೆ ಹೊಡೆಯಲು ಆರಂಭಿಸಿದ್ದಾರೆ. ಈ ಸಂದರ್ಭ ದುಷ್ಕರ್ಮಿಗಳು ಮಹಿಳೆ ಧರಿಸಿದ ಬಟ್ಟೆಯನ್ನು ಹರಿಯಲು ಪ್ರಯತ್ನಿಸಿದ್ದು, ಇದನ್ನು ಗಮನಿಸಿದ ಮಹಿಳೆಯ ಎಂಡೋ ಪೀಡಿತ ಮಗ ಮಧ್ಯ ಪ್ರವೇಶಿಸಿ ತಡೆಯಲು ಮುಂದಾಗಿದ್ದಾನೆ. ಮಗ ಮಾನಸಿಕ ರೋಗಿ ಎಂದು ತಿಳಿದಿದ್ದರೂ ದುಷ್ಕರ್ಮಿಗಳು ಆತನ ಮೇಲೆ ಮನಬಂದಂತೆ ಹಲ್ಲೆ ನಡೆಸಿ ಮರದ ತುಂಡಿನಿಂದ ಹಲ್ಲೆ ನಡೆಸಿದ್ದಾರೆ. ಅಲ್ಲದೇ ಒಬ್ಬಾತ ವೀಡಿಯೋ ರೆಕಾರ್ಡ್ ಮಾಡಿ ಮಹಿಳೆಯ ಪೋಟೋ ಹಾಗೂ ವೀಡಿಯೋವನ್ನು ಸಾಮಾಜಿಕ ಜಾಲತಾಣಗಳಲ್ಲಿ ಹರಿಯಬಿಡುತ್ತೇನೆ ಅಂತ ಹೇಳಿ ಬೆದರಿಸಿದ್ದಾನೆ ಎಂದಜ ದೂರಿನಲ್ಲಿ ತಿಳಿಸಲಾಗಿದೆ. ಸಂತ್ರಸ್ತ ಮಹಿಳೆ ಹಾಗೂ ಮಗ ಪುತ್ತೂರು ಸರಕಾರಿ ಆಸ್ಪತ್ರೆಗೆ ದಾಖಲಾಗಿದ್ದು, ಉಪ್ಪಿನಂಗಡಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.