(ನ್ಯೂಸ್ ಕಡಬ) newskadaba.com ಮಂಗಳೂರು, ಜು. 26. ಬೇವು ಕಹಿ ಅನ್ನೋರು ಅದರಿಂದ ಆರೋಗ್ಯಕ್ಕೆ ಏನೆಲ್ಲಾ ಸಿಹಿಯಾದ ಅಂಶಗಳಿವೆ ಅನ್ನೋದನ್ನ ಮೊದಲು ತಿಳಿದುಕೊಳ್ಳಬೇಕು. ಆಮೇಲೆ ನೀವೇ ಪ್ರತಿನಿತ್ಯ ಕಹಿಬೇವಿನ ಸೇವನೆ ಮಾಡ್ಬೇಕು ಎನ್ನುವುದಂತು ಗ್ಯಾರಂಟಿ. ಕಹಿಬೇವನ್ನು ದೇಹಕ್ಕೆ ಸೇರಿಸುವುದು ಸುಲಭದ ಮಾತಲ್ಲ, ಹಾಗಾಗಿ ಪಾನಕ ರೀತಿಯಲ್ಲಿ ಕುಡಿಯುವ ಅಭ್ಯಾಸ ಮಾಡಿಕೊಳ್ಳಿ, ಆಗ ಕಹಿಬೇವು ಸೇವಿಸಲು ಇಷ್ಟವಾಗುತ್ತದೆ.
ಕಹಿಬೇವಿನ ಪಾನಕ ಮಾಡುವುದು ಹೇಗೆ ಎಂದು ಇಲ್ಲಿ ತಿಳಿಯಿರಿ.
ಬೇಕಾಗುವ ಸಾಮಾಗ್ರಿಗಳು: ಹುರಿಗಡಲೆ, ತಣ್ಣೀರು, ಹುಣಿಸೆಹಣ್ಣಿನ ರಸ, ಮಾವಿನಕಾಯಿ ತುರಿ, ಕೊಬ್ಬರಿ ತುರಿ, ಗಸಗಸೆ, ಬೆಲ್ಲ, ಕಲ್ಲು ಸಕ್ಕರೆ, ಖರ್ಜೂರ, ಉತ್ತುತೆ, ಉಪ್ಪು, ನಿಂಬೆ ರಸ, ಏಲಕ್ಕಿ ಪುಡಿ, ಬೇವಿನ ಕುಡಿ, ಹೂವು, ದ್ರಾಕ್ಷಿ, ಗೋಡಂಬಿ, ಬಾದಾಮಿ, ಪಿಸ್ತಾ
ಮಾಡುವ ವಿಧಾನ:
ಮೊದಲಿಗೆ ದ್ರಾಕ್ಷಿ , ಖರ್ಜೂರ, ಉತ್ತತ್ತಿ ಎಲ್ಲವನ್ನೂ ಸಣ್ಣಗೆ ಚೂರು ಮಾಡಿಕೊಳ್ಳಿ. ಈಗ ಗೋಡಂಬಿ, ಬಾದಾಮಿ, ಪಿಸ್ತಾ, ಗಸಗಸೆ, ಕಲ್ಲು ಸಕ್ಕರೆ, ಕೊಬ್ಬರಿ ತುರಿ, ಎಲ್ಲವನ್ನೂ ಸ್ವಲ್ಪ ದಪ್ಪಗೆ ಕುಟ್ಟಿ ಪುಡಿ ಮಾಡಿಕೊಳ್ಳಿ. ಈಗ ಒಂದು ಪಾತ್ರೆಯಲ್ಲಿ ನೀರು ಹಾಕಿ, ಅದಕ್ಕೆ ಪುಡಿ ಮಾಡಿದ ಹುರಿಗಡಲೆ, ಹುಣಿಸೆ ಹಣ್ಣಿನ ರಸ, ಮಾವಿನ ತುರಿ, ಬೆಲ್ಲದ ಪುಡಿ, ಕುಟ್ಟಿ ಪುಡಿ ಮಾಡಿಕೊಂಡಿರುವ ಮಿಶ್ರಣ, ಏಲಕ್ಕಿ ಪುಡಿ, ನಿಂಬೆರಸ, ಉಪ್ಪು ಎಲ್ಲಾ ಹಾಕಿ. ಸರಿಯಾಗಿ ಹೊಂದಿಕೊಳ್ಳುವಂತೆ ಚೆನ್ನಾಗಿ ಕಲಸಿ. ನಂತರ ಅದಕ್ಕೆ ಬೇವಿನ ಕುಡಿ ಹಾಗೂ ಹೂವಿನ 3-4 ಎಸಳುಗಳನ್ನು ಮುರಿದು ಹಾಕಿ ಚೆನ್ನಾಗಿ ಮಿಶ್ರಣ ಮಾಡಿ. ನಿಮ್ಮ ರುಚಿಗೆ ತಕ್ಕಷ್ಟು ಉಪ್ಪು, ಹುಳಿ, ಸಿಹಿ ಹಾಗೂ ನೀರನ್ನು ಹಾಕಿಕೊಳ್ಳಿ. ಈಗ ಸಿಹಿ-ಕಹಿಯ ಮಿಶ್ರಣದ ಬೇವು ಸವಿಯಲು ಸಿದ್ದ.