ವಿಶೇಷ ಲೇಖನ; ಅನಾಥ ಕಾಡು ಪ್ರಾಣಿಗಳಿಗೆ ‘ಆಸರೆ ಬಳ್ಳಿ’ ಸಾವಿತ್ರಮ್ಮ- ಜ್ಯೋತಿ ಜಿ ಮೈಸೂರು

(ನ್ಯೂಸ್ ಕಡಬ) newskadaba.com ಜು. 19. ಮಾನವೀಯತೆ ಎಂಬ ಪದ ಈ ಆಧುನಿಕ ಯುಗದಲ್ಲಿ ಎಲ್ಲೋ ಕಳೆದು ಹೋಗುತ್ತಿದೆ ಎಂದಾದರೆ..? ಕಳಕಳ ವ್ಯಕ್ತಪಡಿಸುವುದು ಅಷ್ಟೊಂದು ಸರಿಯಲ್ಲ ಎಂಬುದು ನನ್ನ ಅಭಿಮತ. ಎಲ್ಲೋ ಬೆರಣಿಕೆಯಲ್ಲಿ ಗೋಚರಿಸುವವರು ಕೊಂಚ ವಿರಳವೇ ಸರಿ. ಆದರೆ, ಕೆಲವರಿಗೆ ‘ಮಾನವೀಯ ಮೌಲ್ಯ’ ರಕ್ತಗತವಾಗಿ ಧಾವಿಸಿರುತ್ತದೆ. ಇಂತಹ ಮಾನವೀಯತೆಯ ಬದುಕನ್ನು ರೂಪಿಸಿಕೊಳ್ಳುವಲ್ಲಿ ರಾಜ್ಯದ ಗಡಿಭಾಗವಾದ ಬನ್ನೇರುಘಟ್ಟದ ಅಭಯಾರಣ್ಯದಲ್ಲಿ ಕಾಡು ಪ್ರಾಣಿ ಮತ್ತು ವನ್ಯಜೀವಿ ವಿಭಾಗ ಸಿಬ್ಬಂದಿ ‘ಸಾವಿತ್ರಮ್ಮ’ ಎಂಬವರು ಪತ್ಯಕ್ಷ ಸಾಕ್ಷಿಯಾಗಿದ್ದಾರೆ.

ಮಾನವ ತಾನು ಸಾಕಿದ ಮಗುವನ್ನೇ ಬಿಸಾಕುವ ಇಂದಿನ ಕಾಲದಲ್ಲಿ, ಸುತರಾಂ ಪರಿಸ್ಥಿತಿಯಲ್ಲಿರುವಾಗ ಪ್ರಾಣಿಗಳಿಗೆ ಅದರಲ್ಲೂ ಅನಾಥ ಕಾಡು ಪ್ರಾಣಿಗಳಿಗೆ ಮರು ಜೀವನ ನೀಡುತ್ತಿರುವ ಇವರ ಬಗ್ಗೆ ಈಗಾಗಲೇ ಹಲವಾರು ಪತ್ತಿಕೆಗಳಲ್ಲಿ ಮತ್ತು ಟಿವಿ ಮಾಧ್ಯಮದಲ್ಲಿ ಬಹಳಷ್ಟು ಖ್ಯಾತಿಯನ್ನು ಪಡೆದಿರುವ ಇವರ ಬಗ್ಗೆ ಬರೆಯಲು ನನಗೆ ಅಗಾಧ ಹೆಮ್ಮೆ ಎನಿಸುತ್ತದೆ. ಪ್ರೀತಿಯ ಓದುಗರೇ.., ನಮಗೆ ಅದೆಷ್ಟೋ ತಿಳಿಯದ ವಿಷಯಗಳ ಮಧ್ಯೆ ಇಂತವರು ನಾಯಕಿಯಂತೆ ಕೆಲವೊತ್ತು ಕಾಣಿಸಿ ಮರೆಯಾಗುತ್ತಾರೆ, ಇನ್ನು ಕೆಲವರು ಇತಿಹಾಸ ಪುಟದಲ್ಲಿ ಅಜರಾಮರಾಗಿ ಉಳಿಯುತ್ತಾರೆ. ನನ್ನ ಸ್ನೇಹಿತೆ ಒಮ್ಮೆ ನನಗೆ ಕರೆ ಮಾಡಿ ಇವರ ಬಗ್ಗೆ ವಿಶೇಷ ಮಾಹಿತಿ ಬರೆದು ಜನರಿಗೆ ತಲುಪಿಸು ಎಂದಾಗ ನಿಜಕ್ಕೂ ಅವರ ಬಗ್ಗೆ ಇಷ್ಷೊಂದು ಮಾಹಿತಿಗಳು ಇರುತ್ತದೆ ಎನ್ನುವುದು ನನಗೆ ತಿಳಿದೇ ಇರಲಿಲ್ಲ. ಕೆಲವರಿಗೆ ಇಲ್ಲ ಸಲ್ಲದ ಮಾತುಗಳಿಗೆ ವಿಡಿಯೋಗಳಿಗೆ ಕಮೆಂಟ್ ನೀಡುತ್ತೇವೆ..! ಇಂತಹ ಮಾನವಿಯ ಬದುಕನ್ನು ಕಂಡುಕೊಂಡ ಈ ಮಹಿಳೆಗೆ ಎಲ್ಲರ ಪರವಾಗಿ ಸ್ವತಃ ನಾನೇ ಸೆಲ್ಯೂಟ್ ಹೊಡೆಯುತ್ತೇನೆ. ಮೂಕ ಪ್ರಾಣಿಗಳಿಗೆ ಪ್ರೀತಿ ಕಲಿಸುತ್ತಾ, ವ್ಯಾಘ್ರವಾಗಿದ್ದರೂ ಸಹ ಅವುಗಳನ್ನು ಮಕ್ಕಳಂತೆ ಅಪ್ಪಿಕೊಳ್ಳುತ್ತಾ, ಚಿರತೆ ಮರಿಗಳನ್ನು ಸಾಕುವುದೆಂದರೆ ಅದು ಸುಲಭದ ಮಾತೇ..? ಸಾವು ಬದುಕಿನ ಮಧ್ಯೆ ಹೋರಾಟದ ಬಲ ಪ್ರದರ್ಶನವೆಂದೇ ವ್ಯಾಖ್ಯಾನಿಸಬಹುದು.

Also Read  ಆಗಸ್ಟ್ 25ರಿಂದ ಸೆಪ್ಟೆಂಬರ್ 1ರ ವರೆಗೆ ರಾಷ್ಟ್ರೀಯ ನೇತ್ರದಾನ ಜಾಗ್ರತಿ ಪಾಕ್ಷಿಕ; ಕಣ್ಣು ಮಣ್ಣಾಗದಿರಲಿ - ಮುರಲೀ ಮೋಹನ ಚೂಂತಾರು

ಇಲ್ಲಿ ಹುಲಿ ಮತ್ತು ಚಿರತೆಯ ಹಿಂಡಿನೊಡನೆ ಸಾವಿತ್ರಮ್ಮನವರು ದಿನ ನಿತ್ಯ ಆಟವಾಡುತ್ತಾ, ಅವುಗಳ ಅನಾರೋಗ್ಯ ಪೀಡಿತವಾದಾಗ, ಅವುಗಳಿಗೆ ಔಷಧಿ ಉಣಿಸುತ್ತಾ ದಷ್ಟಪುಷ್ಟವಾಗಿ ಬೆಳೆಸಿ ಸಫಾರಿಗೆ ಕಳಿಸುವವರೆಗೂ ಜೋಪಾನ ಮಾಡುವ ಈ ತಾಯಿ ಸಾವಿತ್ರಮ್ಮನವರು, ಬನ್ನೇರುಘಟ್ಟ ಜೈವಿಕ ಉದ್ಯಾನದಲ್ಲಿ ಕಳೆದ 22 ವರ್ಷಗಳಿಂದ ಕೆಲಸ ಮಾಡುತ್ತಿರುವ ವನ್ಯಜೀವಿ ಸಂರಕ್ಷಕಿ. ಪತಿಯ ಆಕಸ್ಮಿಕ ಸಾವಿನ ನಂತರ ಅದೇ ಕೆಲಸವನ್ನು ಮುಂದುವರಿಸಿಕೊಂಡು ಬಂದಿದ್ದಾರೆ. ಅವರು ಕೆಲಸಕ್ಕೆ ಬೆಳಗ್ಗೆ ಎಂಟರಿಂದ ಸಾಯಂಕಾಲ 5-30 ರವರೆಗೂ ಆಸ್ಪತ್ರೆ, ಮೃಗಾಲಯದ ಕಸ ಗುಡಿಸಿ ಸ್ವಚ್ಛ ಮಾಡುತ್ತಾರೆ. ನಂತರ ಚಿಕಿತ್ಸೆ ನಡೆಯುತ್ತಿರುವ ಪ್ರಾಣಿಗಳ ಪೋಷಣೆ ಮಾಡುತ್ತಾರೆ. ಮರಿಗಳು ಅನಾಥವಾಗೋದ್ಯಾಕೆ..? ಮರಿ ಹಾಕಿದ ತಾಯಿ ಆಹಾರ ಹುಡುಕಿಕೊಂಡು ಬೇರೆಡೆಗೆ ಹೋದಾಗ ಮನುಷ್ಯರು ಮರಿಗಳನ್ನು ಗಮನಿಸಿ ಗದ್ದೆ, ತೋಟದಿಂದ ಎತ್ತಿಕೊಂಡು ಬಂದು ಮೃಗಾಲಯಕ್ಕೆ ಒಪ್ಪಿಸಿಬಿಡುತ್ತಾರೆ. ರೈತರಿಗೆ ದೊಡ್ಡ ಪ್ರಾಣಿಯ ದಾಳಿಯಿಂದ ಜೀವಭಯದಿಂದ ಹೀಗೆ ಮಾಡುತ್ತಾರೆ. ಈ ರೀತಿ ಮಂಡ್ಯ, ಮೈಸೂರು, ಚಾಮರಾಜನಗರದಿಂದ ಬರುವ ಮರಿಗಳೇ ಹೆಚ್ಚು, ಸಾಕಿರುವ ಪ್ರಾಣಿಗಳು

50 ಕ್ಕೂ ಹೆಚ್ಚು ಚಿರತೆಗಳು, 7 ಹುಲಿ ಹಾಗೂ 15 ಸಿಂಹದ ಮರಿಗಳನ್ನು ಸಾಕಿ 3 ತಿಂಗಳ ಕಾಲ ಆಸ್ಪತ್ರೆ ಒಳಗೇ ಇಟ್ಟು ಪೋಷಿಸಲಾಗುತ್ತದೆ. ದೊಡ್ಡದಾದ ನಂತರ ಸ್ವಲ್ಪ ದಿನ ಬೋನಲ್ಲಿ ಇರಿಸಲಾಗುತ್ತದೆ. 1 ವರ್ಷದ ನಂತರ ಸಫಾರಿಗೆ ಬಿಡಲಾಗುತ್ತದೆ. ಸಣ್ಣ ಮರಿಗಳನ್ನು ಹೊರಗಡೆ ಯಾರೂ ಮುಟ್ಟದಂತೆ ಆರೈಕೆ ಮಾಡಲಾಗುತ್ತದೆ. ಇನ್ಫೆಕ್ಷನ್ ನಿಂದ ತಡೆಯಲು ಈ ಕ್ರಮ ಅನುಸರಿಸಲಾಗುತ್ತದೆ. 2 ತಿಂಗಳವರೆಗೆ ಮರಿಗಳು ಆಟ, ಓಡಾಟ ಕಲಿತಿರುವುದಿಲ್ಲ. ನಂತರ ಓಡಾಟ, ಆಟ ಆಡುವುದು, ಕಚ್ಚುವುದು, ಮೈಮೇಲೆ ಹಾರುವುದು ಮನುಷ್ಯರ ಜೊತೆಗೆ ಬೆರೆಯುವುದನ್ನು ಆರಂಭಿಸುತ್ತವೆ. ಚಿಕ್ಕ ಮರಿಗಳಿಗೆ ಆಹಾರ ನೀಡುವುದು, ಮೇಕೆ ಹಾಲನ್ನು ಚೆನ್ನಾಗಿ ಕುದಿಸಿ ಆರಿಸಿ, ಮರಿಗಳಿಗೆ ಕುಡಿಸಲಾಗುತ್ತದೆ. ಆರಂಭದಲ್ಲಿ ಪ್ರತಿ ಐದು ನಿಮಿಷಕ್ಕೆ, ನಂತರ ಅರ್ಧ ಗಂಟೆಗೊಮ್ಮೆ, ಹಾಗೆಯೇ ಮರಿಗಳು ಬೆಳೆಯುತ್ತಾ ಹೋದಂತೆ ಎರಡು ಗಂಟೆಗೊಮ್ಮೆ, ಮೂರು ಗಂಟೆಗೊಮ್ಮೆ ಹಾಲು ಕುಡಿಸಲಾಗುತ್ತದೆ. ನಂತರ ಚಿಕನ್, ಕೈಮಾ, ಸೇರಿದಂತೆ ಇತರೇ ಮಾಂಸಗಳನ್ನು ಕಿಚಡಿಯಾಗಿ ಮಾಡಿ, ಅಥವಾ ಬೀಫ್ ಮಾಂಸವನ್ನು ಕೊಡುತ್ತಾರೆ. ತುಂಬಾ ಪ್ರೀತಿಯಿಂದ ನೋಡಿಕೊಳ್ಳುವ ಇವರು ತಾಯಿಯ ಮಮತೆಯನ್ನು ನೀಡುತ್ತಿರುವುದು ಇಂದಿನ ಯುವ ಜನತೆಗೆ ಒಂದು ಸ್ಪೂರ್ತಿಯಾಗಿರುವುದು ನಮಗೆಲ್ಲಾ ಪ್ರೇರಣಾಭಾವ ಮೂಡಿಸಿದೆ. ಹೆತ್ತ ಮಕ್ಕಳನ್ನು ಬೀದಿಗೆ ಬೀಸಾಡುವ ಈ ಸಮಾಜದ ಮಧ್ಯೆ, ಇಂತಹ ಮೂಕ ಪಾಣಿಗಳನ್ನು ತಮ್ಮ ಮಕ್ಕಳಂತೇ ಸಾಕುವ ಈ ಸಾವಿತ್ರಮ್ಮನವರ ಸಾಮಾಜಿಕ ಕಾರ್ಯ ಶ್ಲಾಘನೀಯವಾದದ್ದು. ಇವರ ಗುಣಗಾನ ವಿಶ್ವದಾದ್ಯಂತ ಪಸರಿಸಲಿ ಎಂದು ಪ್ರಾರ್ಥಿಸುವೆ.

Also Read  “ಕನ್ನಡದ ಕಿಚ್ಚು ಹತ್ತಿಸಿದ ಕನ್ನಡ ಮೇಷ್ಟ್ರು” - ಡಾ. ಚೂಂತಾರು

ಜ್ಯೋತಿ ಜಿ ಮೈಸೂರು (ಉಪನ್ಯಾಸಕರು, ಸಾಮಾಜಿಕ ಹೋರಾಟಗಾರರು)

error: Content is protected !!
Scroll to Top