(ನ್ಯೂಸ್ ಕಡಬ) newskadaba.com ಮಧ್ಯಪ್ರದೇಶ, ಜು. 13. ದಿನದಿಂದ ದಿನಕ್ಕೆ ಟೊಮ್ಯಾಟೋ ಬೆಲೆ ಗಗನಕ್ಕೇರುತ್ತಿದ್ದು, ಇದರಿಂದಾಗಿ ಅನೇಕ ಜನರ ಆರ್ಥಿಕತೆಯ ಮೇಲೆ ಹೊಡೆತಬಿದ್ದಿದೆ. ಅಲ್ಲದೇ ಅಡುಗೆಗೆ ಟೊಮ್ಯಾಟೋ ಹಾಕಬೇಕೋ ಬೇಡವೋ ಎಂದು ಯೋಚಿಸುವ ಮಟ್ಟಕ್ಕೆ ತಲುಪಿದೆ. ಅಷ್ಟೇ ಯಾಕೆ ಇತ್ತೀಚೆಗೆ ಖ್ಯಾತ ಮ್ಯಾಕ್ ಡೊನಾಲ್ಡ್ಸ್ ಕಂಪನಿಯು ತನ್ನ ಬರ್ಗರ್ ನಲ್ಲಿ ಟೊಮ್ಯಾಟೊ ಬಳಸುವುದಿಲ್ಲ ಎಂದು ಪ್ರಕಟಣೆಯನ್ನೇ ಹೊರಡಿಸಿತ್ತು. ಅಷ್ಟರ ಮಟ್ಟಿಗೆ ಈ ಟೋಮೆಟೋ ಜನರಿಗೆ ಭಾರವಾಗಿದೆ. ಆದರೆ, ಇತ್ತ ಬೆಲೆ ಏರಿಕೆಯಾದ ಟೊಮ್ಯಾಟೋ ಗಂಡ ಮತ್ತು ಹೆಂಡತಿಯ ನಡುವಿನ ಜಗಳಕ್ಕೆ ಕಾರಣವಾಗಿದೆ.
ಹೌದು, ಗಂಡ ಅಡುಗೆ ಮಾಡುವಾಗ ತನ್ನ ಪತ್ನಿಯ ಬಳಿ ಕೇಳದೇ ಟೊಮ್ಯಾಟೋ ಬಳಸಿದ ಎಂಬ ಕ್ಷುಲ್ಲಕ ಕಾರಣಕ್ಕೆ ಜಗಳ ನಡೆದು ಪತ್ನಿ ಮನೆ ಬಿಟ್ಟು ಹೋಗಿರುವ ವಿಚಿತ್ರ ಘಟನೆ ಮಧ್ಯ ಪ್ರದೇಶದಲ್ಲಿ ನಡೆದಿರುವ ಕುರಿತು ವರದಿಯಾಗಿದೆ.
ಮಧ್ಯಪ್ರದೇಶದ ಶಾಹದೋಲ್ ಜಿಲ್ಲೆಯಲ್ಲಿ ಟಿಫಿನ್ ಸರ್ವಿಸ್ ನಡೆಸುತ್ತಿರುವ ಸಂಜೀವ್ ಬರ್ಮನ್, ಟೊಮ್ಯಾಟೋ ಬೆಲೆ ಏರಿಕೆಯಾದ ಬಳಿಕ ತಾನು ಮಾಡಿದ ಅಡುಗೆಗೆ ಎರಡು ಟೊಮ್ಯಾಟೋಗಳನ್ನು ಬಳಸಿದ್ದ ಇದು ಹೆಂಡತಿಯ ಗಮನಕ್ಕೆ ಮೊದಲು ಬಂದಿರಲಿಲ್ಲ. ಆದರೆ ಒಟ್ಟಿಗೆ ಊಟ ಮಾಡುವ ವೇಳೆ ಪದಾರ್ಥದಲ್ಲಿ ಟೊಮ್ಯಾಟೋ ಪತ್ತೆಯಾಗಿದೆ. ಇದನ್ನು ಕಂಡ ಪತ್ನಿ ಪತಿಯ ಮೇಲೆ ರೇಗಾಡಿದ್ದಲ್ಲೆದೇ ಈ ವಿಚಾರವಾಗಿ ಇಬ್ಬರ ನಡುವೆ ಮಾತಿಗೆ ಮಾತು ಬೆಳೆದು ಪರಸ್ಪರ ಜಾಗವಾಡಿದ್ದಾರೆ. ಆದರೆ ಕೊನೆಗೆ ಜಗಳ ವಿಕೋಪಕ್ಕೆ ತೆರಳಿ ಪತ್ನಿ ತನ್ನ ಮಗಳ ಜೊತೆ ಮನೆ ಬಿಟ್ಟು ತೆರಳಿದ್ದಾಳೆ ಎನ್ನಲಾಗಿದೆ.
ಸಿಟ್ಟಿನಲ್ಲಿದ್ದ ಪತಿಯು ಮೊದಲು ಪತ್ನಿ ಸಿಟ್ಟು ಇಳಿದ ಬಳಿಕ ಮನೆಗೆ ಬರಬಹುದು ಎಂದುಕೊಂಡಿದ್ದ. ಆದರೆ ಪತ್ನಿ ಮತ್ತು ಮಗಳು ಎರಡು ದಿನವಾದರೂ ಮನೆಗೆ ಬಾರದೇ ಇರುವುದನ್ನು ಕಂಡು ತನ್ನ ಕುಟುಂಬದವರ ಜೊತೆ ಪತ್ನಿ ಮಗಳ ವಿಚಾರ ವಿಚಾರಿಸಿದ್ದಾನೆ. ಆದರೆ ಯಾವುದೇ ಸುಳಿವು ಸಿಗದಿದ್ದರಿಂದ ಗಾಬರಿಗೊಂಡು ಹತ್ತಿರದ ಪೊಲೀಸ್ ಠಾಣೆಗೆ ದೂರು ನೀಡಿದ್ದಾನೆ. ದೂರು ದಾಖಲಿಸಿಕೊಂಡ ಪೊಲೀಸರು ನಾಪತ್ತೆಯಾದ ತಾಯಿ ಮಗಳ ಪತ್ತೆ ಕಾರ್ಯಕ್ಕೆ ಬಲೆ ಬೀಸಿದ್ದಾರೆ.