(ನ್ಯೂಸ್ ಕಡಬ) newskadaba.com ಕಡಬ, ಜು. 12. ಇಲ್ಲಿನ ಕಡಬ ಸೈಂಟ್ ಜೋಕಿಮ್ ವಿದ್ಯಾಸಂಸ್ಥೆಯಲ್ಲಿ ವನಮಹೋತ್ಸವ ಆಚರಣೆಯನ್ನು ಹಮ್ಮಿಕೊಳ್ಳಲಾಗಿತ್ತು.
ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಆಗಮಿಸಿದ ಕಡಬ ಹಾಗೂ ಪಂಜ ಉಪವಲಯ ಅರಣ್ಯಾಧಿಕಾರಿಗಳಾದ ಅಜಿತ್ ಕುಮಾರ್ ಕೆ ಅವರು ಗಿಡ ನೆಡುವ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಬಳಿಕ ಮಾತನಾಡಿದ ಅವರು, ಗಿಡ ಮರಗಳಿಂದ ಕೂಡಿದ ವನ ಸಂಪತ್ತು ನಮ್ಮ ಉಸಿರಿಗೆ ವರವಿದ್ದಂತೆ, ಯುವ ಪೀಳಿಗೆಯಲ್ಲಿ ಗಿಡಗಳನ್ನು ನೆಟ್ಟು ಅದನ್ನು ಪೋಷಿಸುವ ಹವ್ಯಾಸ ಹಾಗೂ ಜವಾಬ್ದಾರಿ ಮೂಡಬೇಕು. ಈ ಮೂಲಕ ಮುಂದಿನ ಪೀಳಿಗೆಗೆ ಸ್ವಚ್ಛ ವನ-ಸಂಪತ್ತು ಹಾಗೂ ಪ್ರಕೃತಿಯನ್ನು ಉಳಿಸಲು ಸಾಧ್ಯವಾಗುತ್ತದೆ ಎಂದು ವಿದ್ಯಾರ್ಥಿಗಳಿಗೆ ಉಪನ್ಯಾಸ ನೀಡಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿಕೊಂಡಿದ್ದ ಸೈಂಟ್ ಜೋಕಿಮ್ ವಿದ್ಯಾಸಂಸ್ಥೆಗಳ ಸಂಚಾಲಕರಾದ ವಂ. ಪ್ರಕಾಶ್ ಪಾವ್ಲ್ ಡಿ’ಸೋಜ ಅವರು ವನ ಸಂರಕ್ಷಣೆಯ ಮಹತ್ವವನ್ನು ಹಾಗೂ ಈ ಕುರಿತು ವಿದ್ಯಾರ್ಥಿಗಳಿಗೆ ಇರುವ ಜವಾಬ್ದಾರಿಗಳನ್ನು ವಿವರಿಸಿ ಮಾತನಾಡಿದರು. ಕಾರ್ಯಕ್ರಮದಲ್ಲಿ ಸೈಂಟ್ ಜೋಕಿಮ್ ಚರ್ಚ್ ಪಾಲನಾ ಮಂಡಳಿಯ ಉಪಾಧ್ಯಕ್ಷರಾದ ಡೆನಿಸ್ ಫೆರ್ನಾಂಡಿಸ್, ವಿದ್ಯಾಸಂಸ್ಥೆಗಳ ಮುಖ್ಯಸ್ಥರುಗಳಾದ ವಂದನೀಯ ಅಮಿತ್ ಪ್ರಕಾಶ್ ರೋಡ್ರಿಗಸ್, ಕಿರಣ್ ಕುಮಾರ್, ಸಿ. ಹಿಲ್ಡಾ ರೋಡ್ರಿಗಸ್, ಶ್ರಿಲತಾ ಹಾಗೂ ರಕ್ಷಕ -ಶಿಕ್ಷಕ ಸಮಿತಿಯ ಉಪಾಧ್ಯಕ್ಷರುಗಳಾದ ಸತೀಶ್ ನಾಯಕ್, ಬಾಲಕೃಷ್ಣ ಕೆ, ಆದಂ ಯೂನುಸ್ ಉಪಸ್ಥಿತರಿದ್ದರು.
ವನ ಸಂರಕ್ಷಣೆಯ ಮಹತ್ವವನ್ನು ಸಾರುವ ನೃತ್ಯ ಹಾಗೂ ಪ್ರಹಸನಗಳು ವಿದ್ಯಾರ್ಥಿಗಳಿಂದ ನೆರವೇರಿತು. ಸಭಾ ಕಾರ್ಯಕ್ರಮದ ನಂತರ ಸಂಸ್ಥೆಯ ಆವರಣದಲ್ಲಿ ಗಿಡಗಳನ್ನು ನೆಡಲಾಯಿತು. ಮುಖ್ಯ ಅತಿಥಿಗಳು ವಿದ್ಯಾರ್ಥಿಗಳಿಗೆ ಗಿಡಗಳನ್ನು ವಿತರಿಸಿದರು. ಸೈಂಟ್ ಜೋಕಿಮ್ ಕಾಲೇಜು ಉಪನ್ಯಾಸಕಿ ವೇದಾವತಿ ಸ್ವಾಗತಿಸಿ, ಸೈಂಟ್ ಅನ್ಸ್ ಶಾಲಾ ಶಿಕ್ಷಕಿ ಜಯಶ್ರೀ ವಂದನಾರ್ಪಣೆಗೈದರು. ಸೈಂಟ್ ಜೋಕಿಮ್ ಪ್ರಾಥಮಿಕ ಶಾಲಾ ಶಿಕ್ಷಕಿ ಮೆಟಿಲ್ಡಾ ಆಲ್ವಾರಿಸ್ ಕಾರ್ಯಕ್ರಮ ನಿರೂಪಿಸಿದರು.