ಕಾಸರಗೋಡು: ಬ್ಯಾಂಕ್ ಮ್ಯಾನೇಜರ್, ಪತಿ ಹಾಗೂ ಇಬ್ಬರು ಮಕ್ಕಳು ಮೃತಪಟ್ಟ ಸ್ಥಿತಿಯಲ್ಲಿ ಪತ್ತೆ

(ನ್ಯೂಸ್ ಕಡಬ) newskadaba.com ಕಾಸರಗೋಡು, ಜು. 08. ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ ಕಾಸರಗೋಡು ಶಾಖೆಯ ಮ್ಯಾನೇಜರ್‌, ಅವರ ಪತಿ ಮತ್ತು ಇಬ್ಬರು ಮಕ್ಕಳು ತಮ್ಮ ಮನೆಯಲ್ಲಿ ಮೃತಪಟ್ಟ ಸ್ಥಿತಿಯಲ್ಲಿ ಪತ್ತೆಯಾಗಿರುವ ಕುರಿತು ವರದಿಯಾಗಿದೆ.

ಮೃತರನ್ನು ಮ್ಯಾನೇಜರ್‌ ಶೀನಾ (35), ಅವರ ಪತಿ ಸಬೀಶ್ (37), ಮಕ್ಕಳಾದ ಹರಿಗೋವಿಂದ್ (6) ಹಾಗೂ ಶ್ರೀವರ್ಧನ್ ಎಂದು ಗುರುತಿಸಲಾಗಿದೆ. ಶೀನಾ ಅವರ ಪತಿ ಮಲಪ್ಪುರಂನ ಖಾಸಗಿ ಹಣಕಾಸು ಸಂಸ್ಥೆಯೊಂದರಲ್ಲಿ ಮ್ಯಾನೇಜರ್‌ ಆಗಿ ಕಾರ್ಯನಿರ್ವಹಿಸುತ್ತಿದ್ದು, ಇವರು ಮಲಪ್ಪುರಂ ಮುಂಡುಪರಂಬ ಮೈತ್ರಿ ಕಾಲನಿಯ ಬಾಡಿಗೆ ಮನೆಯಲ್ಲಿ ವಾಸಿಸುತ್ತಿದ್ದರು ಎನ್ನಲಾಗಿದೆ. ಸಬೀಶ್‌ ಮನೆಯ ಒಂದು ಕೊಠಡಿಯೊಳಗೆ ಹಾಗೂ ಶೀನಾ ಇನ್ನೊಂದು ಕೊಠಡಿಯಲ್ಲಿ ಫ್ಯಾನ್‌ಗೆ ನೇಣು ಬಿಗಿದು ಮೃತಪಟ್ಟ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ.

ಸಬೀಶ್‌ ನೇಣು ಬಿಗಿದ ಕೊಠಡಿಯಲ್ಲಿ ಇಬ್ಬರು ಮಕ್ಕಳ ಮೃತದೇಹ ಪತ್ತೆಯಾಗಿದೆ. ಶೀನಾ ಕೆಲವು ದಿನಗಳ ಹಿಂದೆಯಷ್ಟೇ ಎಸ್‌ಬಿಐಯ ಕಾಸರಗೋಡು ಶಾಖೆಗೆ ವರ್ಗಾವಣೆಗೊಂಡಿದ್ದರು.

Scroll to Top