ತಿರುಪತಿ ಸಮೀಪದ ಜಲಪಾತದಲ್ಲಿ ಮುಳುಗಿ ಮಂಗಳೂರಿನ ಯುವಕ ಮೃತ್ಯು

(ನ್ಯೂಸ್ ಕಡಬ) newskadaba.com ಸುರತ್ಕಲ್, ಜು. 03. ತಿರುಪತಿ ಸಮೀಪದ ಜಲಪಾತವೊಂದಕ್ಕೆ ಪ್ರವಾಸಕ್ಕೆಂದು ತೆರಳಿದ್ದ ಮಂಗಳೂರಿನ ಯುವಕನೋರ್ವ ನೀರಿನಲ್ಲಿ ಮುಳುಗಿ ಮೃತಪಟ್ಟ ಘಟನೆ ನಡೆದಿದೆ.

ಮೃತ ಯುವಕನನ್ನು ಸುರತ್ಕಲ್ ಸಮೀಪದ ಹೊನ್ನಕಟ್ಟೆಯ ನಿವಾಸಿ ಸುಮಂತ್ ಅಮೀನ್ (23) ಎಂದು ಗುರುತಿಸಲಾಗಿದೆ. ಈತ ಪ್ರವಾಸಿಗನಾಗಿ ತಿರುಪತಿಗೆ ಭೇಟಿ ನೀಡಿ, ಬಳಿಕ ಅಲ್ಲಿಂದ ಸಮೀಪದ ಜಲಪಾತಕ್ಕೆ ತೆರಳಿ ಅಲ್ಲಿ ಸ್ನಾನ ಮಾಡುತ್ತಿದ್ದ ವೇಳೆ ನೀರಿನಲ್ಲಿ ಧುಮುಕಿ ಬಳಿಕ ಮೇಲೆ ಏರಲಾಗದೆ ಮೃತಪಟ್ಟಿದ್ದಾರೆ ಎನ್ನಲಾಗಿದೆ. ಚೆನ್ನೈಯ ರಾಜೀವ್ ಗಾಂಧಿ ವಿಶ್ವವಿದ್ಯಾನಿಲಯದಲ್ಲಿ ಎಂಎಸ್ಸಿ ವ್ಯಾಸಂಗ ಮಾಡುತ್ತಿದ್ದ ಸುಮಂತ್ ಅಮೀನ್, ಶುಕ್ರವಾರದಂದು ತಿರುಪತಿಗೆಂದು ತೆರಳಿದ್ದು, ಬಳಿಕ ಅಲ್ಲಿಂದ ಮಧ್ಯಾಹ್ನ 2:30ರ ವೇಳೆಗೆ ತಿರುಪತಿಯಿಂದ 60 ಕಿ.ಮೀ. ದೂರದ ತಲಕೋನ ಜಲಪಾತಕ್ಕೆ ತನ್ನ ಸಹಪಾಠಿ ಜತೆ ಹೋಗಿ ಸ್ನಾನ ಮಾಡುತ್ತಾ ಬಂಡೆಕಲ್ಲಿನಿಂದ 10 ಅಡಿ ಕೆಳಕ್ಕೆ ಧುಮುಕಿದಾಗ ನೀರು ಹಾದು ಹೋಗುವ ಗುಹೆಗೆ ಕಾಲು ಸಿಲುಕಿದೆ ಎನ್ನಲಾಗಿದೆ. ತಕ್ಷಣವೇ ಈತನ ಸ್ನೇಹಿತರು ಸುಮಂತ್‌ ನನ್ನು ಪಾರು ಮಾಡಲು ಯತ್ನಿಸಿದರೂ ಪ್ರಯೋಜನವಾಗಲಿಲ್ಲ ಎನ್ನಲಾಗಿದೆ.

Scroll to Top