ಕಡಬ: ಡಯಾಲಿಸಿಸ್ ಕೇಂದ್ರವನ್ನು ಆರಂಭಿಸುವಂತೆ ಆರೋಗ್ಯ ಸಚಿವರಿಗೆ ಶಾಸಕ ಅಶೋಕ್ ರೈ ಮನವಿ

(ನ್ಯೂಸ್ ಕಡಬ) newskadaba.com ಕಡಬ, ಜೂ. 08. ತಾಲೂಕು ಕೇಂದ್ರವಾಗಿರುವ ಕಡಬದಲ್ಲಿ ಡಯಾಲಿಸಿಸ್ ಕೇಂದ್ರವನ್ನು ಆರಂಭಿಸುವಂತೆ ಪುತ್ತೂರು ಶಾಸಕ ಅಶೋಕ್ ರೈ ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ದಿನೇಶ್‌ ಗುಂಡೂರಾವ್ ಅವರಿಗೆ ಮನವಿ ಮಾಡಿದ್ದಾರೆ.

ಜೂ. 07 ರ ಬುಧವಾರದಂದು ಬೆಂಗಳೂರಿನಲ್ಲಿ ಸಚಿವರನ್ನು ಭೇಟಿಯಾದ ಅವರು, ಪುತ್ತೂರು ವಿಧಾನಸಭಾ ಕ್ಷೇತ್ರಕ್ಕೆ ಸಂಬಂಧಿಸಿದಂತೆ ಸುದೀರ್ಘ ಮಾತುಕತೆ ನಡೆಸಿದರು. ತಾಲೂಕು ಕೇಂದ್ರವಾಗಿರುವ ಕಡಬದ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಈಗಾಗಲೇ ಡಯಾಲಿಸಿಸ್ ಕೇಂದ್ರವನ್ನು ಆರಂಭ ಮಾಡಿ, ಮೂರು ಡಯಾಲಿಸಿಸ್ ಯಂತ್ರವನ್ನು ನೀಡಲಾಗಿದೆಯಾದರೂ ಡಯಾಲಿಸಿಸ್ ಕೇಂದ್ರಕ್ಕೆ ಆರ್ ಒ ಪ್ಲಾಂಟ್ ಆಳವಡಿಸಿ ಸೂಕ್ತ ಸಿಬ್ಬಂದಿಗಳ ನೇಮಕ ಮಾಡದಿರುವ ಕಾರಣ ಡಯಾಲಿಸಿಸ್ ಕೇಂದ್ರ ಕಾರ್ಯಾಚರಿಸುತ್ತಿಲ್ಲ. ಸರಕಾರ ತಕ್ಷಣವೇ ಕಡಬ ಸಮುದಾಯ ಕೇಂದ್ರದಲ್ಲಿರುವ ಡಯಾಲಿಸಿಸ್ ಕೇಂದ್ರಕ್ಕೆ ಆರ್‌ ಒ ಮತ್ತು ಸಿಬಂದಿಗಳನ್ನು ನೇಮಕ ಮಾಡಿ ಕೇಂದ್ರವನ್ನು ಆರಂಭಿಸಬೇಕು ಎಂದು ಮನವಿಯಲ್ಲಿ ತಿಳಿಸಿದ್ದಾರೆ. ಇದೀಗ ಕಡಬ ತಾಲೂಕು ವ್ಯಾಪ್ತಿಯ ಜನರು 45 ಕಿ.ಮೀ. ದೂರದ ಪುತ್ತೂರು ಅಥವಾ ಸುಳ್ಯಕ್ಕೆ ತೆರಳಿ ಡಯಾಲಿಸಿಸ್ ಮಾಡಬೇಕಾದ ಅನಿವಾರ್ಯತೆ ಇದ್ದು, ಸರದಿ ಸಾಲಿನಲ್ಲಿ ನಿಂತು ಡಯಾಲಿಸಿಸ್ ಮಾಡಬೇಕಾದ ಪರಿಸ್ಥಿತಿ ಇದೆ ಎಂದು ಶಾಸಕರು ಸಚಿವರಿಗೆ ತಿಳಿಸಿದ್ದಾರೆ.

Also Read  ನಾರಾಯಣ ನೇತ್ರಾಲಯದ ಮುಖ್ಯಸ್ಥ ಡಾ.ಭುಜಂಗಶೆಟ್ಟಿ ವಿಧಿವಶ..!

error: Content is protected !!
Scroll to Top