ಚಾರ್ವಾಕ ಗ್ರಾಮವನ್ನು 5 ದಿನಗಳಿಂದ ಕತ್ತಲಲ್ಲಿಟ್ಟ ಮೆಸ್ಕಾಂ ಆಲಂಕಾರು ಶಾಖೆ ► ಗ್ರಾಮಸ್ಥರ ಪ್ರತಿಭಟನೆಗೆ ಮಣಿದು ಮರು ಸಂಪರ್ಕ ನೀಡಿದ ಶಾಖಾಧಿಕಾರಿ

(ನ್ಯೂಸ್ ಕಡಬ) newskadaba.com ಕಡಬ, ಜ.15. ಚಾರ್ವಾಕ ಗ್ರಾಮಕ್ಕೆ ಸರಬರಾಜಾಗುವ ವಿದ್ಯುತ್ ಸಂಪರ್ಕವನ್ನು ಕಳೆದ 5 ದಿನಗಳಿಂದ ಕಡಿತಗೊಳಿಸಿ ಕಾರಣ ಕೇಳಿದ ಸಾರ್ವಜನಿಕರಿಗೆ ಉಡಾಫೆಯ ಉತ್ತರವನ್ನು ನೀಡಿ ಉದ್ದಟತನವನ್ನು ಪ್ರದರ್ಶಿಸಿದ್ದಾರೆ ಎಂದು ಶಾಖಾಧಿಕಾರಿಗೆ ಪ್ರತಿಭಟನೆಯ ಮೂಲಕ ಬಿಸಿ ಮುಟ್ಟಿಸಿದ ಘಟನೆ ಆಲಂಕಾರಿನ ಮೆಸ್ಕಾಂ ಶಾಖಾ ಕಚೇರಿಯಲ್ಲಿ ಸೋಮವಾರದಂದು ನಡೆದಿದೆ.

ಆಲಂಕಾರು ಮೆಸ್ಕಾಂ ಕಾರ್ಯ ವ್ಯಾಪ್ತಿಯ ಪೆರಾಬೆ ಗ್ರಾಮದ ಇಡಾಳದ ಬಳಿಯಿಂದ ಚಾರ್ವಾಕ ಗ್ರಾಮದ ಮೂರು ವಿದ್ಯುತ್ ಪರಿವರ್ತಕಗಳಿಗೆ  ವಿದ್ಯುತ್ ಸಂಪರ್ಕವನ್ನು ಕಳೆದ 15 ವರ್ಷಗಳಿಂದ ನೀಡಲಾಗುತ್ತಿತ್ತು. ಆದರೆ ಆಲಂಕಾರಿನ ಮೆಸ್ಕಾಂ ಕಚೇರಿಗೆ ನೂತನವಾಗಿ ಆಗಮಿಸಿದ ಶಾಖಾಧಿಕಾರಿಗಳು ಯಾವುದೇ ಸೂಚನೆಯನ್ನು ನೀಡದೆ ಮೂರು ವಿದ್ಯುಪರಿವರ್ತಕಗಳಿಗೆ ಕಳೆದ 5 ದಿನಗಳ ಮುಂಚೆ ವಿದ್ಯುತ್ ಸಂಪರ್ಕವನ್ನು ಕಡಿತಗೊಳಿಸಿದ್ದರು. ಈ ಬಗ್ಗೆ ಸಮರ್ಪಕ ಮಾಹಿತಿಯನ್ನು ನೀಡುತ್ತಿಲ್ಲ ಎಂದು ಆರೋಪಿಸಿ ನೂರಕ್ಕೂ ಆಧಿಕ ಸಂಖ್ಯೆಯಲ್ಲಿ ಚಾರ್ವಾಕ ಗ್ರಾಮಸ್ಥರು ಪ್ರತಿಭಟನೆ ನಡೆಸಿದರು.

ವಿದ್ಯುತ್ ಕಡಿತದಿಂದ ಕಳೆದ 5 ದಿನಗಳಿಂದ 40 ಮನೆಗಳು ಕತ್ತಲಲ್ಲಿ ದಿನ ಕಳೆದಿದ್ದೇವೆ. ಕುಡಿಯುವ ನೀರಿಗೂ ತತ್ವಾರ ಬಂದಿದೆ. ಎಲ್ಲಾ ಮೊಬೈಲ್ಗಳು ಸ್ವಿಚ್ ಆಫ್‌ ಆಗಿವೆ. ಈ ಬಗ್ಗೆ ಮಾಹಿತಿಗಾಗಿ ಆಲಂಕಾರು ಶಾಖಾಧಿಕಾರಿಯನ್ನು ಕೇಳಿದರೆ ಉಡಾಫೆಯ ಉತ್ತರ ನೀಡುವ ಮೂಲಕ ಸವಣೂರು ಶಾಖಾಧಿಕಾರಿಯನ್ನು ಸಂಪರ್ಕಿಸಿ ಎಂದು ಪ್ರತಿಕ್ರಿಯಿಸುತ್ತಿದ್ದಾರೆ.  ಸರಿಯಾದ ಮಾಹಿತಿಗಾಗಿ ಸವಣೂರು ಶಾಖಾಧಿಕಾರಿಯವರ ಮೂಲಕ ಆಲಂಕಾರು ಶಾಖಾಧಿಕಾರಿಯನ್ನು ಸಂಪರ್ಕಿಸಿದರೆ ಚಾರ್ವಾಕ ಟಿ.ಸಿ.ಗೆ ಸಂಪರ್ಕ ನೀಡಿದ್ದೇನೆ ಎಂದು ಸುಳ್ಳು ಉತ್ತರವನ್ನು ನೀಡಿದ್ದಾರೆ. ಈ ವಿಚಾರವಾಗಿ ನಾನೇ ಸ್ವತಃ ಆಲಂಕಾರಿನ ಜೆ.ಇ.ಯವರನ್ನು ಸಂಪರ್ಕಿಸಿ, ತ್ರಿಫೇಸ್ ಬೇಡ ಸಿಂಗಲ್ಫೇಸ್ಸಾದರು ಸಂಪರ್ಕ ನೀಡಿ ಎಂದು ಮನವಿ ಮಾಡಿದರೂ ನಮಗೆ ಸರಿಯಾದ ಮಾಹಿತಿಯನ್ನು ನೀಡದೆ ಸತಾಯಿಸಿದ್ದಾರೆ. ಇಡಾಳದ ಬಳಿ ಸಂಪರ್ಕ ಕಡಿತಗೊಳಿಸಿದ್ದೀರಿಯಂತೆ ಯಾಕೆಂದು ಕೇಳಿದಾಗ ನಾನೇ ಸಂಪರ್ಕವನ್ನು ಕಡಿತಗೊಳಿಸಿದ್ದು ಏನು ಈವಾಗ? ನಾನೇ ಕಡಿತಗೊಳಿಸಿದ್ದು ಎಂದು ಬರೆದುಕೊಡುತ್ತೀರಾ ಎಂದು ಕೇಳಿದರೆ ಬರೆದುಕೊಡುತ್ತೇನೆ ಎಂದು ಉಡಾಫೆ ಉತ್ತರವನ್ನು ನೀಡುವ ಮೂಲಕ ಗ್ರಾಮೀಣ ಭಾಗದ ಜನತೆಯನ್ನು ಅವಮಾನಿಸಿದ್ದಾರೆ  ಎಂದು ಕಾಣಿಯೂರು ಗ್ರಾಮ ಪಂಚಾಯತ್ ಸದಸ್ಯ ಗಣೇಶ್ ಉದುನಡ್ಕ ಆರೋಪಿಸಿದರು.

Also Read  ಬಂಟ್ವಾಳ: ಸೀಮೆ ಎಣ್ಣೆ ಸುರಿದು ಬೆಂಕಿ ಹಚ್ಚಿಕೊಂಡು ಯುವತಿ ಆತ್ಮಹತ್ಯೆ

ಇದೇ ವೇಳೆ ತಾಲೂಕು ಪಂಚಾಯತ್ ಉಪಾಧ್ಯಕ್ಷೆ ರಾಜೇಶ್ವರಿ, ತಾಲೂಕು ಪಂಚಾಯತ್ ಸದಸ್ಯೆ ಲಲಿತಾ ಮತ್ತು ದಿನೇಶ್ ಮೆದು ಸ್ಥಳಕ್ಕಾಗಮಿಸಿ ಪರಿಸ್ಥಿತಿ ಬಗ್ಗೆ ಮಾಹಿತಿ ಪಡೆದುಕೊಂಡು ಶಾಖಾಧಿಕಾರಿಯವರನ್ನು ತರಾಟೆಗೆ ತೆಗೆದುಕೊಂಡರು. ಈ ವೇಳೆ ಮಾತಿಗೆ ಮಾತು ಬೆಳೆದು ಪರಿಸ್ಥಿತಿ ವಿಕೋಪಕ್ಕೆ ಹೋಗುವ ಸ್ಥಿತಿ ನಿರ್ಮಾಣವಾಗಿತ್ತು. ಈ ಸಂದರ್ಭದಲ್ಲಿ ಶರವೂರು ದುರ್ಗಾಪರಮೇಶ್ವರಿ ಆಡಳಿತ ಮಂಡಳಿಯ ಮಾಜಿ ಅಧ್ಯಕ್ಷ ಎಸ್. ಪೂವಪ್ಪ ನಾಯ್ಕ ಮಧ್ಯೆ ಪ್ರವೇಶಿಸಿ ಪರಿಸ್ಥಿತಿಯನ್ನು ತಿಳಿಗೊಳಿಸುವಲ್ಲಿ ಯಶಸ್ವಿಯಾದರು. ಬಳಿಕ ಶಾಖಾಧಿಕಾರಿ ಗೌತಮ್ ಪ್ರತಿಭಟನಾಕಾರರಲ್ಲಿ ಕ್ಷಮೆ ಕೇಳಿ ಕಡಿತಗೊಳಿಸಿದ ಸಂಪರ್ಕವನ್ನು ಈಗಲೇ ನೀಡುತ್ತೇನೆ. ಮುಂದಿನ ದಿನಗಳಲ್ಲಿ ಲೈನ್ ಟ್ರಿಪ್ ಆಗಲಿ ಬಿಡಲಿ ನಾನು ಈ ಬಗ್ಗೆ ತಲೆಕೆಡಿಸಿಕೊಳ್ಳುವುದಿಲ್ಲ.  ಇದರ ಸಂಪೂರ್ಣ ಜವಾಬ್ದಾರಿ ಆ ಭಾಗದ ಜನತೆಗೆ ಬಿಟ್ಟದ್ದು. ವಿದ್ಯುತ್ ಸಂಪರ್ಕವನ್ನು ಮಾತ್ರ ಕಡಿತಗೊಳಿಸುವುದಿಲ್ಲ ಎಂದು ಭರವಸೆ ನೀಡಿದ ಬಳಿಕ ಪ್ರತಿಭಟನಾಕಾರರು ನಿರ್ಗಮಿಸಿದರು.

error: Content is protected !!
Scroll to Top