(ನ್ಯೂಸ್ ಕಡಬ)Newskadaba.com ಕೊಡಗು,ಏ.28 ಸತತ ನಾಲ್ಕು ಚುನಾವಣೆಗಳಿಂದಲೂ ‘ಬಿಜೆಪಿಯ ಭದ್ರಕೋಟೆ’ ಎನಿಸಿರುವ ಕೊಡಗಿನ ಎರಡೂ ವಿಧಾನಸಭಾ ಕ್ಷೇತ್ರಗಳಿಗೆ ಲಗ್ಗೆ ಇಡಲು ಕಾಂಗ್ರೆಸ್ ಈ ಬಾರಿ ಯುವಕರನ್ನು ಕಣಕ್ಕಿಳಿಸಿದೆ. ಆದರೆ, ಬಿಜೆಪಿಯು ‘ಹ್ಯಾಟ್ರಿಕ್’ ಗೆಲುವು ಪಡೆದಿರುವ ಹಿರಿಯರನ್ನೇ ಕಣಕ್ಕಿಳಿಸಿ, ‘ಟಿಪ್ಪು ಜಯಂತಿ’ ಅಸ್ತ್ರವನ್ನೇ ಮತ್ತೆ ಕಾಂಗ್ರೆಸ್‌ನತ್ತ ಪ್ರಯೋಗಿಸಿದೆ.ಎಸ್‌ಡಿಪಿಐ, ಸರ್ವೋದಯ ಪಕ್ಷಗಳ ಸ್ಪರ್ಧೆಯಿಂದ ಆಗಲಿರುವ ಮತ ವಿಭಜನೆ ಕಾಂಗ್ರೆಸ್ ಪಾಲಿಗೆ ನಕಾರಾತ್ಮಕ ಅಂಶ.
ಒಂದೇ ಕುಟುಂಬದವರಿಗೆ ಸತತವಾಗಿ ಟಿಕೆಟ್ ನೀಡುವುದರ ವಿರುದ್ಧ ಎದ್ದಿರುವ ಅಸಮಾಧಾನದ ಹೊಗೆ ಹಾಗೂ ₹ 7 ಕೋಟಿಗೂ ಅಧಿಕ ಹಣ ವ್ಯಯಿಸಿದರೂ ಕುಸಿಯುತ್ತಲೇ ಇರುವ ಜಿಲ್ಲಾಧಿಕಾರಿ ಕಚೇರಿಯ ತಡೆಗೋಡೆಯು ಬಿಜೆಪಿ ಪಾಲಿಗೂ ‘ಮೈನಸ್ ಪಾಯಿಂಟ್’. ಈ ಸನ್ನಿವೇಶದ ಲಾಭ ಪಡೆಯಲು ಜೆಡಿಎಸ್ ಹವಣಿಸಿದ್ದು, ಚುನಾವಣಾ ಕಣ ಕಳೆದ ಬಾರಿಗಿಂತಲೂ ಹೆಚ್ಚಿನ ಕುತೂಹಲ ಕೆರಳಿಸಿದೆ.