ಗುಂಡ್ಯ: ನಾಲ್ವರ ತಂಡದಿಂದ ಲಾರಿ ಚಾಲಕನಿಗೆ ಹಲ್ಲೆ ನಡೆಸಿ ದರೋಡೆ

(ನ್ಯೂಸ್ ಕಡಬ) newskadaba.com ಉಪ್ಪಿನಂಗಡಿ, ಜ.12. ಕಾರಿನಲ್ಲಿ ಬಂದ ನಾಲ್ವರ ತಂಡವೊಂದು ಲಾರಿ ಚಾಲಕನಿಗೆ ಹಲ್ಲೆ ನಡೆಸಿ ದರೋಡೆಗೈದ ಘಟನೆ ಗುರುವಾರ ರಾತ್ರಿ ಉಪ್ಪಿನಂಗಡಿ ಪೊಲೀಸ್ ಠಾಣಾ ವ್ಯಾಪ್ತಿಯ ರಾಷ್ಟ್ರೀಯ ಹೆದ್ದಾರಿ 75ರ  ಗುಂಡ್ಯ ಜಂಕ್ಷನ್ ನಿಂದ ನಾಲ್ಕು ಕಿ.ಮೀ. ಮುಂದಕ್ಕೆ ನಿರ್ಜನ ಪ್ರದೇಶದಲ್ಲಿ ನಡೆದಿದೆ.

ತಂಡದಿಂದ ದರೋಡೆಗೊಳಗಾದವರನ್ನು
ಕೆದಿಲ ಗ್ರಾಮದ ಪೇರಮೊಗರಿನ ಗಡಿಯಾರ ನಿವಾಸಿ ಮೊಹಮ್ಮದ್ ಎಂಬವರ ಪುತ್ರ ಅಬ್ದುಲ್ ರವೂಫ್ (26) ಎಂದು ಗುರುತಿಸಲಾಗಿದೆ. ಇವರಿಂದ ದರೋಡೆಕೋರರು ಸುಮಾರು 17 ಸಾವಿರ ರೂಪಾಯಿ ದರೋಡೆಗೈದಿದ್ದಾರೆ. ಈಚರ್ ಲಾರಿ ಚಾಲಕನಾಗಿರುವ ಇವರು ನಿನ್ನೆ ಮಂಗಳೂರಿನ ಪಂಪ್ ವೆಲ್ ನಿಂದ ಪ್ಲೈವುಡ್ ಗಳನ್ನು ಹೇರಿಕೊಂಡು ಬೆಂಗಳೂರು ಕಡೆಗೆ ಪ್ರಯಾಣಿಸುತ್ತಿದ್ದ ಸಂದರ್ಭ ಈ ಘಟನೆ ನಡೆದಿದೆ. ನಿನ್ನೆ ರಾತ್ರಿ 10:30 ರ ಸುಮಾರಿಗೆ ಗುಂಡ್ಯ ಜಂಕ್ಷನ್ ನಿಂದ ಸ್ವಲ್ಪ ಮುಂದಕ್ಕೆ ಹೋಗುತ್ತಿದ್ದಂತೆಯೇ ಬೆಂಗಳೂರು ಕಡೆಯಿಂದ ಕೆಂಪು ಬಣ್ಣದ ಸ್ವಿಫ್ಟ್ ಕಾರೊಂದು ಮಂಗಳೂರು ಕಡೆಗೆ ಬಂದಿದ್ದು, ಬಳಿಕ ಇದೇ ಕಾರು ತಿರುಗಿ ಇವರ ಈಚರ್ ಲಾರಿಯನ್ನು ಹಿಂಬಾಲಿಸಿಕೊಂಡು ಬಂದಿದೆ.

ಗುಂಡ್ಯ ಜಂಕ್ಷನ್ ನಿಂದ ಸುಮಾರು ನಾಲ್ಕು ಕಿ.ಮಿ. ಮುಂದಕ್ಕೆ ನಿರ್ಜನ ಪ್ರದೇಶದಲ್ಲಿ ಇವರ ಈಚರ್ ಲಾರಿಗೆ ಕಾರನ್ನು ಅಡ್ಡ ನಿಲ್ಲಿಸಿ, ಅದರಿಂದ ಮೂವರು ಇಳಿದು ಅಬ್ದುಲ್ ರವೂಫ್ ಅವರನ್ನು ಲಾರಿಯಿಂದ ಎಳೆದು ಹಾಕಿ ಕಬ್ಬಿಣದ ಲಿವರ್ ನಿಂದ ಹಲ್ಲೆ ನಡೆಸಿದ್ದಲ್ಲದೆ, ಕತ್ತಿ ತೋರಿಸಿ ಬೆದರಿಸಿ ಇವರ ಪ್ಯಾಂಟ್ ಜೇಬಿನಲ್ಲಿದ್ದ ಪರ್ಸ್ ಅನ್ನು ದರೋಡೆಗೈದಿದ್ದಾರೆ. ಈ ಸಂದರ್ಭ ರಾಷ್ಟ್ರೀಯ ಹೆದ್ದಾರಿಯಲ್ಲಿ ವಾಹನ ಬರುವುದನ್ನು ನೋಡಿ, ಅಬ್ದುಲ್ ರವೂಫ್ ಅವರ ಈಚರ್ ಲಾರಿಯ ಕೀಯನ್ನು ಎಳೆದುಕೊಂಡು ಕಾರಿನಲ್ಲಿ ಈ ತಂಡ ಗುಂಡ್ಯದತ್ತ ಪರಾರಿಯಾಗಿದೆ. ಕಾರಿನಲ್ಲಿ ನಾಲ್ವರಿದ್ದು, ಇವರು ತುಳು ಭಾಷೆ ಮಾತನಾಡುತ್ತಿದ್ದರು ಎಂದು ಅಬ್ದುಲ್ ರವೂಪ್ ಉಪ್ಪಿನಂಗಡಿ ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ. ಪ್ರಕರಣ ದಾಖಲಿಸಿಕೊಂಡ ಉಪ್ಪಿನಂಗಡಿ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

error: Content is protected !!

Join the Group

Join WhatsApp Group