(ನ್ಯೂಸ್ ಕಡಬ) newskadaba.com ಬಂಟ್ವಾಳ, ಜ.11. ನಿಯಂತ್ರಣ ತಪ್ಪಿದ ಕಾರೊಂದು ಮರಕ್ಕೆ ಢಿಕ್ಕಿಯಾಗಿ ಒಂದು ವರ್ಷದ ಮಗುವೊಂದು ಮೃತಪಟ್ಟು ಆರು ಮಂದಿ ಗಂಭೀರ ಗಾಯಗೊಂಡ ಘಟನೆ ಬಂಟ್ವಾಳ ಜಕ್ರಿಬೆಟ್ಟು ಸಮೀಪದ ಬಡಗುಂಡಿ ಎಂಬಲ್ಲಿ ನಡೆದಿದೆ.
ವಿದೇಶದಲ್ಲಿ ಉದೋಗದಲ್ಲಿದ್ದು, ರಜೆಯ ನಿಮಿತ್ತ ಇತ್ತೀಚೆಗಷ್ಟೇ ಊರಿಗೆ ಬಂದಿದ್ದ ಬಡಗುಂಡಿ ನಿವಾಸಿ ರೋಶನ್, ತನ್ನ ಕುಟುಂಬಸ್ಥರೊಂದಿಗೆ ಮಂಗಳೂರು ಬೀಚ್‌ಗೆ ತೆರಳಿ ಹಿಂತಿರುಗುತ್ತಿದ್ದಾಗ ಬಡಗುಂಡಿ ತಿರುವಿನಲ್ಲಿ ಚಾಲಕನ ನಿಯಂತ್ರಣ ಕಳೆದುಕೊಂಡ ಕಾರು ಮರಕ್ಕೆ ಢಿಕ್ಕಿಯಾಗಿ ಜರ್ಮನ್, ಲವಿಟ, ಸಿಸಿಲಿಯಾ ಬರೆಟ್ಟೋ, ಕಾರು ಚಾಲಕ ರೋಬಿನ್, 1 ವರ್ಷದ ಮಗು ಜಾನ್ ಮತ್ತು ಮೂರು ವರ್ಷದ ರಿಯಾ ಗಂಭೀರ ಗಾಯಗೊಂಡಿದ್ದರು. ಇವರಿಗೆ ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಿ, ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಗಂಭೀರ ಗಾಯಗೊಂಡಿದ್ದ ಒಂದು ವರ್ಷದ ಮಗು ಜಾನ್ ಚಿಕಿತ್ಸೆ ಫಲಕಾರಿಯಾಗದೆ ಆಸ್ಪತ್ರೆಯಲ್ಲಿ ಮೃತಪಟ್ಟಿದೆ.
ಘಟನಾ ಸ್ಥಳಕ್ಕೆ ಬಂಟ್ವಾಳ ಟ್ರಾಫಿಕ್ ಠಾಣಾ ಪೊಲೀಸರು ಭೇಟಿ ನೀಡಿದ್ದು, ಪ್ರಕರಣ ದಾಖಲಿಸಿಕೊಂಡಿದ್ದಾರೆ.