(ನ್ಯೂಸ್ ಕಡಬ) newskadaba.com ಚಿಕ್ಕಮಗಳೂರು, ಜ.10. ಇತ್ತೀಚೆಗೆ ಮೂಡಿಗೆರೆಯ ಕಾಲೇಜು ವಿದ್ಯಾರ್ಥಿನಿ ಧನ್ಯಶ್ರೀ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಧನ್ಯಶ್ರೀಯ ಮಾನಹಾನಿ ನಡೆಸಿದ, ಆತ್ಮಹತ್ಯೆಗೆ ಪ್ರೇರೇಪಿಸಿದ ಎಲ್ಲರ ವಿರುದ್ಧವೂ ಪ್ರಕರಣ ದಾಖಲಿಸಲಾಗುವುದು ಎಂದು ಚಿಕ್ಕಮಗಳೂರು ಎಸ್‌ಪಿ ಅಣ್ಣಾಮಲೈ ಸ್ಪಷ್ಟಪಡಿಸಿದ್ದಾರೆ.
ಗುರುವಾರದಂದು ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಸಂತೋಷ್ ಸೇರಿದಂತೆ ನಾಲ್ಕೈದು ಜನ ಧಮ್ಕಿ ಹಾಕಿದ ಹಿನ್ನೆಲೆಯಲ್ಲಿ ಧನ್ಯಶ್ರೀ ಸಾಯುವ ಮುನ್ನ ಎರಡು ದಿನಗಳ ಕಾಲ ಊಟ ಮಾಡಿರಲಿಲ್ಲ. ಪ್ರಕರಣವನ್ನು ಗಂಭೀರವಾಗಿ ಪರಗಣಿಸಿದ್ದು, ಧನ್ಯಶ್ರೀ ಅವರ ತಂದೆಯಲ್ಲಿ ಸುಳ್ಳು ಪ್ರಕರಣ ನೀಡಲು ಪ್ರೋತ್ಸಾಹಿಸಿದವರ ವಿರುದ್ದ ಎರಡನೇ ಎಫ್ಐಆರ್ ದಾಖಲಿಸಲಾಗುವುದು. ಮಾಧ್ಯಮದಲ್ಲಿ ಪ್ರಚೋದನಕಾರಿ ಹೇಳಿಕೆ ನೀಡಿರುವ ಸಂಘಟನೆಯ ಕಾರ್ಯಕರ್ತರ ವಿರುದ್ಧ ಮೂರನೇ ಪ್ರಕರಣ ದಾಖಲಿಸುತ್ತೇವೆ. ಅಲ್ಲದೆ ವಾಟ್ಸಾಪ್‌ನಲ್ಲಿ ವಾರ್ನಿಂಗ್ ಮೆಸೇಜ್ ಹಾಕಿದ ನಾಲ್ವರ ವಿರುದ್ದವೂ ಎಫ್‌ಐಆರ್ ದಾಖಲಿಸುತ್ತೇವೆ ಎಂದಿದ್ದಾರೆ.
ವಾಟ್ಸಾಪ್ ನಲ್ಲಿ ಧನ್ಯಶ್ರೀ ಜೊತೆ ಚಾಟ್ ಮಾಡಿರುವವನ ಮಾಹಿತಿ ಈಗಾಗಲೇ ದೊರೆತಿದ್ದು, ಆತನ ವಿರುದ್ಧವೂ ಪ್ರಕರಣ ದಾಖಲಿಸಲಾಗುವುದು. ನಾವು ಹಿಂದೂ, ಮುಸ್ಲಿಂ ಸಂಘಟನೆ ಎಂದು ನೋಡುವುದಿಲ್ಲ. ನಮಗೆ ಎಲ್ಲರೂ ಒಂದೇ ಎಂದು ಖಡಕ್ಕಾಗಿ ಮಾತನಾಡಿದ್ದಾರೆ.