ಬಶೀರ್ ಕೊಲೆಯತ್ನ ಪ್ರಕರಣ: ನಾಲ್ವರು ಆರೋಪಿಗಳ ಬಂಧನ ► ದೀಪಕ್ ರಾವ್ ಹತ್ಯೆಗೆ ಪ್ರತೀಕಾರವಾಗಿ ನಡೆದಿದ್ದ ಬಶೀರ್ ಕೊಲೆಯತ್ನ ಪ್ರಕರಣ

(ನ್ಯೂಸ್ ಕಡಬ) newskadaba.com ಮಂಗಳೂರು, ಜ.06. ಇತ್ತೀಚೆಗೆ ಕಾಟಿಪಳ್ಳದಲ್ಲಿ ನಡೆದ ದೀಪಕ್ ಹತ್ಯೆಯ ಬೆನ್ನಲ್ಲೇ ಕೊಟ್ಟಾರ ಚೌಕಿಯಲ್ಲಿ ನಡೆದ ಅಬ್ದುಲ್ ಬಶೀರ್ ಎಂಬವರ ಕೊಲೆಗೆ ಯತ್ನ ಪ್ರಕರಣವನ್ನು ಭೇದಿಸಿರುವ ಪೊಲೀಸರು ಪ್ರಕರಣದಲ್ಲಿ ಭಾಗಿಯಾದ 4 ಮಂದಿ ಆರೋಪಿಗಳನ್ನು ಬಂಧಿಸಿದ್ದಾರೆ.

ಈ ಬಗ್ಗೆ ಶನಿವಾರ ಸಂಜೆ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ನಗರ ಪೊಲೀಸ್ ಕಮೀಷನರ್ ಟಿ.ಆರ್‌ ಸುರೇಶ್, ದೀಪಕ್ ರಾವ್ ಹತ್ಯೆಯಂದು ರಾತ್ರಿ ಕೊಟ್ಟಾರ ಚೌಕಿಯಲ್ಲಿ ಫಾಸ್ಟ್ ಫುಡ್ ಅಂಗಡಿಯನ್ನು ಹೊಂದಿದ್ದ ಬಶೀರ್ ಎಂಬವರ ಮೇಲೆ ಬರ್ಬರವಾಗಿ ಕಡಿದು ಕೊಲೆಗೆ ಯತ್ನಿಸಲಾಗಿತ್ತು. ಈ ಬಗ್ಗೆ ತನಿಖೆ ನಡೆಸಿದ ಪೊಲೀಸರು ಪ್ರಕರಣದಲ್ಲಿ ಭಾಗಿಯಾಗಿದ್ದ ಕಿಶನ್ ಪೂಜಾರಿ (21), ಶ್ರೀಜಿತ್ ಪಿ.ಕೆ.(25), ಸಂದೇಶ್ ಕೋಟ್ಯಾನ್ (22) ಹಾಗೂ ಧನುಷ್ ಪೂಜಾರಿ (22) ಎಂಬವರನ್ನು ಬಂಧಿಸಲಾಗಿದೆ‌. ಬಂಧಿತ ನಾಲ್ವರು ಆರೋಪಿಗಳ ಮೇಲೆಯೂ ನಗರದ ವಿವಿಧ ಠಾಣೆಗಳಲ್ಲಿ ವಿವಿಧ ಪ್ರಕರಣಗಳು ದಾಖಲಾಗಿವೆ ಎಂದರು.

Scroll to Top