(ನ್ಯೂಸ್ ಕಡಬ) newskadaba.com ಹೊಸಂಗಡಿ, ಮಾ. 06. ವಿಶ್ವ ದಂತ ವೈದ್ಯರ ದಿನದ ಅಂಗವಾಗಿ ಹೊಸಂಗಡಿಯ ಸುರಕ್ಷಾ ದಂತ ಚಿಕಿತ್ಸಾಲಯದಲ್ಲಿ ದಂತ ವೈದ್ಯರ ದಿನಾಚರಣೆ ನಡೆಯಿತು.
ಈ ಸಂದರ್ಭದಲ್ಲಿ ಮಾತನಾಡಿದ ಸುರಕ್ಷಾ ದಂತ ಚಿಕಿತ್ಸಾಲಯದ ಬಾಯಿ, ಮುಖ ಮತ್ತು ದವಡೆ ಶಸ್ತ್ರಚಿಕಿತ್ಸಕ ಹಾಗೂ ಖ್ಯಾತ ದಂತ ವೈದ್ಯರಾದ ಡಾ|| ಮುರಲೀಮೋಹನ್ ಚೂಂತಾರು, ಬಾಯಿ ಎನ್ನುವುದು ನಮ್ಮ ದೇಹದ ಆರೋಗ್ಯದ ಬಗ್ಗೆ ಮಾಹಿತಿ ನೀಡುವ ಕೇಂದ್ರವಾಗಿರುತ್ತದೆ. ಹಲ್ಲು ನೋವಿನ ಹೊರತಾದ ಹತ್ತಾರು ರೋಗಗಳು ಬಾಯಿಯಲ್ಲಿ ಪ್ರಕಣಗೊಳ್ಳುತ್ತದೆ. ರಕ್ತಹೀನತೆ, ವಿಟಮಿನ್ ಕೊರತೆ, ಲಿವರ್ ಸಮಸ್ಯೆ, ಗ್ಯಾಸ್ಟ್ರಿಕ್ ಸಮಸ್ಯೆಯಿಂದ ಹಿಡಿದು ರಕ್ತದ ಕ್ಯಾನ್ಸರ್ ವರೆಗಿನ ಎಲ್ಲ ಮಾಹಿತಿಗಳು ಆರಂಭಿಕ ಹಂತದಲ್ಲಿಯೇ ಬಾಯಿಯಲ್ಲಿ ಕಂಡು ಬರುತ್ತದೆ. ದಂತ ವೈದ್ಯರು ಇದನ್ನು ಗುರುತಿಸಿ ತಿಳಿಹೇಳಿ ರೋಗಿಯನ್ನು ಜಾಗೃತಿಗೊಳಿಸುವ ಬಹುದೊಡ್ಡ ಜವಾಬ್ದಾರಿ ಹೊಂದಿರುತ್ತಾರೆ. ಈ ಸಾಮಾಜಿಕ ಹೊಣೆಗಾರಿಕೆಯನ್ನು ಅರಿತು ನಿಭಾಯಿಸಿದಲ್ಲಿ ಸುಂದರ ಸಮೃದ್ಧ, ಸುದೃಢ ಭಾರತವನ್ನು ಕಟ್ಟಲು ಸಾಧ್ಯವಿದೆ ಎಂದು ಅಭಿಪ್ರಾಯಪಟ್ಟರು. ಈ ವೇಳೆ ದಂತ ಚಿಕಿತ್ಸಾಲಯಕ್ಕೆ ಭೇಟಿ ನೀಡಿದ ಎಲ್ಲಾ ರೋಗಿಗಳಿಗೆ ದಂತ ಆರೋಗ್ಯದ ಬಗ್ಗೆ ಮಾಹಿತಿ ಇರುವ ‘ಸುಮುಖ‘ ದಂತ ಆರೋಗ್ಯ ಮಾರ್ಗದರ್ಶಿ ಪುಸ್ತಕವನ್ನು ಉಚಿತವಾಗಿ ಹಂಚಲಾಯಿತು. ದಂತ ವೈದ್ಯೆ ಡಾ|| ರಾಜಶ್ರೀ ಮೋಹನ್, ಸಹಾಯಕಿಯರಾದ ರಮ್ಯ, ಚೈತ್ರ ಮತ್ತು ಸುಶ್ಮಿತಾ ಉಪಸ್ಥಿತರಿದ್ದರು. 25ಕ್ಕೂ ಹೆಚ್ಚು ರೋಗಿಗಳಿಗೆ ಪುಸ್ತಕ ವಿತರಣೆ ಮಾಡಲಾಯಿತು.