(ನ್ಯೂಸ್ ಕಡಬ) newskadaba.com ಆರೋಗ್ಯ ಮಾಹಿತಿ: ಚಳಿಗಾಲ ಬಂದರೆ ಸಾಕು ಮುಖ, ಕೈ-ಕಾಲಿನ ತೇವಾಂಶ ಕಡಿಮೆಯಾಗುವುದರ ಜೊತೆ ಬಿರುಕಿನ ಸಮಸ್ಯೆ, ಚರ್ಮದ ಕಾಂತಿ ಕಡಿಮೆಯಾದಂತೆ ಕಾಣುತ್ತಿರುತ್ತದೆ.
ಪ್ರತಿನಿತ್ಯ ಲಿಪ್ ಬಾಮ್ ಹಚ್ಚಿದರೂ ಕೂಡ ಚಳಿಗಾಲದಲ್ಲಿ ಹೆಚ್ಚಿನ ಕೇರ್ ಮಾಡಬೇಕಾಗುತ್ತದೆ. ಪ್ರತಿದಿನ ಮಲಗುವ ವೇಳೆ ತುಟಿಗೆ ಲಿಪ್ ಬಾಮ್ ಅಥವಾ ವ್ಯಾಸಲೀನ್ ಹಚ್ಚಿ ಮಲಗಿ. ತುಟಿ ತುಂಬಾ ಒಡೆದಿದೆ ಎಂದಾದರೆ ಗ್ಲಿಸರಿನ್ ಅಥವಾ ಬಾದಾಮಿ ಎಣ್ಣೆ/ ಆಲೀವ್ ಎಣ್ಣೆ ಹಚ್ಚಿ ಮಲಗಿ. ವಾರಕ್ಕೆ ಎರಡು ಬಾರಿ ತುಟಿಯ ಮೇಲೆ ವ್ಯಾಸಲೀನ್ ಗೆ ಸಕ್ಕರೆ ಬೆರೆಸಿ ಸ್ಕ್ರಬ್ ಮಾಡಿದರೆ ತುಟಿಗಳು ಬಿರುಕು ಬಿಡುವುದನ್ನು ತಡೆಯಬಹುದು. ಚಳಿಗಾಲದಲ್ಲಿ ಸೋಪ್ ಬಳಕೆಯಿಂದ ಚರ್ಮ ಮತ್ತಷ್ಟು ಡ್ರೈ ಆಗುತ್ತದೆ. ಆದ್ದರಿಂದ ಸೋಪ್ ಬಳಸೋದನ್ನು ಸಾಧ್ಯವಾದಷ್ಟು ಕಡಿಮೆ ಮಾಡಿ. ಬದಲಿಗೆ ಕಡಲೆಹಿಟ್ಟು ಬಳಸಿ ಸ್ನಾನ ಮಾಡಿ. ಇನ್ನು ಮುಖಕ್ಕಂತೂ ಸೋಪ್ ಹಚ್ಚಬೇಡಿ. ಕಡಲೆಹಿಟ್ಟು ಬಳಸಿದರೆ ಉತ್ತಮ. ಚಳಿಗಾಲದಲ್ಲಿ ಪಾದದಲ್ಲಿ ಬಿರುಕು ಉಂಟಾಗೋದು ಸಾಮಾನ್ಯ. ರಾತ್ರಿ ಮಲಗುವ ಮುನ್ನ ಕಾಲನ್ನು ಬೆಚ್ಚಗಿನ ನೀರಿನಲ್ಲಿ ತೊಳೆದು, ಬಟ್ಟೆಯಿಂದ ಒರೆಸಿ, ವ್ಯಾಸಲೀನ್ ಅಥವಾ ಬಾಡಿ ಲೋಷನ್/ಫುಟ್ ಕ್ರೀಮ್ ಹೆಚ್ಚಿಕೊಳ್ಳಿ. ಒಂದೆರಡು ನಿಮಿಷಗಳ ನಂತರ ಸಾಕ್ಸ್ ಧರಿಸಿ. ಇದಕ್ಕೆ ಮೊದಲೇ ಎಚ್ಚರಿಕೆ ವಹಿಸಿದರೆ ಉತ್ತಮ. ಆದ್ದರಿಂದ ಹೊರಗಡೆ ಹೋಗುವಾಗ ಕಾಲಿಗೆ ಶೂ, ಸಾಕ್ಸ್ ಧರಿಸಿ. ಒಂದು ವೇಳೆ ನಿಮ್ಮ ಕೈಗಳು ತುಂಬಾ ಒಣಗಿದಂತಾಗಿದ್ದು, ಸುಕ್ಕುಗಟ್ಟಿದಂತೆ ಕಾಣುತ್ತಿದ್ದರೆ ಹೀಗೆ ಮಾಡಿ. ರಾತ್ರಿ ಮಲಗುವ ಮುನ್ನ ಕೈಗಳಿಗೆ ವ್ಯಾಸಲೀನ್ ಹಚ್ಚಿ ಒಂದು ನಿಮಿಷದ ನಂತರ ಗ್ಲವ್ಸ್ ಧರಿಸಿ ಮಲಗಿ. ಇದರ ಜೊತೆಗೆ ದಿನದ ಮಧ್ಯೆ ಕೈಗಳು ಡ್ರೈ ಆದಂತೆ ಅನ್ನಿಸಿದರೆ ಹ್ಯಾಂಡ್ ಕ್ರೀಂ ಅಥವಾ ಬಾಡಿ ಲೋಷನ್ ಹಚ್ಚಿಕೊಳ್ಳಿ.
ಕೈ ಕಾಲುಗಳಂತೆ ಕೂದಲು ಸಹ ಡ್ರೈ ಆಗುತ್ತದೆ. ಹೀಗಾಗಿ ವಾರಕ್ಕೊಂದು ಬಾರಿ ಬಿಸಿ ಎಣ್ಣೆಯಿಂದ ತಲೆಗೆ ಮಸಾಜ್ ಮಾಡಿ ಸ್ನಾನ ಮಾಡಿ. ಮೈ ತುಂಬಾ ಎಣ್ಣೆ ಹಚ್ಚಿ ಮಸಾಜ್ ಮಾಡಿ. ಇದರಿಂದ ಸ್ಟ್ರೆಸ್ ಕೂಡ ಕಡಿಮೆಯಾಗುತ್ತದೆ. ಕೊಬ್ಬರಿ ಎಣ್ಣೆ/ ಆಲಿವ್ ಎಣ್ಣೆ ಅಥವಾ ಹೆರಳೆಣ್ಣೆ ನಿಮಗೆ ಯಾವುದು ಇಷ್ಟವೋ ಆ ಎಣ್ಣೆ ಬಳಸಬಹುದು. ಆದರೆ ಎಣ್ಣೆಯನ್ನು ಬಿಸಿ ಮಾಡೋದು ಮರೆಯಬೇಡಿ. ಚಳಿಗಾಲಕ್ಕೆ ತಕ್ಕಂತೆ ನಿಮ್ಮ ಉಡುಗೆ ಇರಲಿ. ಕೊರೆಯೋ ಚಳಿಯಲ್ಲಿ ಜ್ಯಾಕೆಟ್/ ಸ್ವೆಟರ್, ಸ್ಕಾರ್ಫ್ ಯಾವಾಗಲೂ ಜೊತೆಯಲ್ಲಿರಲಿ. ಬಟ್ಟೆ ತುಂಬಾ ತೆಳುವಿದ್ದರೆ ಅದಕ್ಕೆ ಹೊಂದಿಕೆಯಾಗುವಂತ ಟ್ಯಾಂಕ್ ಟಾಪ್ ಅಥವಾ ಸ್ಪೆಗೆಟ್ಟಿ ಧರಿಸಿ ಅದರ ಮೇಲೆ ಟಾಪ್ ಧರಿಸಿ. ಚಳಿಗೆ ತಲೆನೋವು ಬರುವ ಸಮಸ್ಯೆ ಇದ್ದರೆ ಹತ್ತಿಯನ್ನು ಉಂಡೆ ಮಾಡಿ ಕಿವಿಗೆ ಇಟ್ಟುಕೊಳ್ಳಿ. ಚಳಿಗಾಲದಲ್ಲಿ ಸದಾ ಲಿಪ್ ಬಾಮ್, ಹ್ಯಾಂಡ್ ಕ್ರೀಂ/ ಚಿಕ್ಕದಾದ ಬಾಡಿ ಲೋಷನ್, ಸ್ಕಾರ್ಫ್, ಸ್ವೆಟರ್/ಜಾಕೆಟ್ ನಿಮ್ಮ ಬಳಿ ಇಟ್ಟುಕೊಂಡಿದ್ದರೆ ಉತ್ತಮ.