ಮಕ್ಕಳನ್ನು ಸಮಾಜಕ್ಕೆ ಪೂರಕವಾಗಿ ರೂಪಿಸುವ ಶಿಕ್ಷಣ ಬೇಕಾಗಿದೆ: ಸುಬ್ರಹ್ಮಣ್ಯಶ್ರೀ

(ನ್ಯೂಸ್ ಕಡಬ) newskadaba.com ಕಡಬ, ಡಿ.19. ಶಿಕ್ಷಣವೆಂಬುದು ಕೇವಲ ಬದುಕಿಗೋಸ್ಕರ ಎನ್ನುವ ಧೋರಣೆಯನ್ನು ಅಳಿಸಿ ಹಾಕಿ ಮಕ್ಕಳು ಸಮಾಜಕ್ಕೆ ಪೂರಕವಾಗಿ ರೂಪುಗೊಳ್ಳುವ ಶಿಕ್ಷಣವನ್ನು ನೀಡಬೇಕು ಎಂದು ಸುಬ್ರಹ್ಮಣ್ಯ ಮಠಾಧೀಶ ಶ್ರೀ ವಿದ್ಯಾಪ್ರಸನ್ನ ತೀರ್ಥ ಸ್ವಾಮೀಜಿ ನುಡಿದರು.

ಅವರು ಸೋಮವಾರ ರಾಮಕುಂಜದ ಶ್ರೀ ರಾಮಕುಂಜೇಶ್ವರ ಪ.ಪೂ.ಕಾಲೇಜು ಮತ್ತು ಶ್ರೀ ರಾಮಕುಂಜೇಶ್ವರ ಪ್ರೌಢಶಾಲೆಯ ವಾರ್ಷಿಕೋತ್ಸವದ ಪ್ರಯುಕ್ತ ಹಮ್ಮಿಕೊಳ್ಳಲಾದ ಕಲೋತ್ಸವ ಕಾರ್ಯಕ್ರಮದಲ್ಲಿ ಸಾನಿಧ್ಯ ವಹಿಸಿ ಆಶೀರ್ವಚನ ನೀಡುತ್ತಿದ್ದರು. ಇಂದು ಸಮಾಜದ ತುಂಬಾ ಕ್ರೌರ್ಯದಿಂದ ಖುಷಿ ಅನುಭವಿಸುವ ಮನಸ್ಸುಗಳು ಹೆಚ್ಚಾಗಿವೆ. ಆದುದರಿಂದ ಶಿಕ್ಷಣವು ಮನುಷ್ಯನನ್ನು ಕ್ರೌರ್ಯದಿಂದ ಕಾರಣ್ಯದತ್ತ ಕೊಂಡೊಯ್ಯುವ ಪಥವಾಗಿ ಕೆಲಸಮಾಡಬೇಕಿದೆ. ಮನುಷ್ಯ ಮತ್ತು ಪ್ರಕೃತಿಯ ನಡುವಿನ ಅನುಬಂಧ ಸಡಿಲಿಸುತ್ತಿರುವ ಕಾರಣ ಮನುಷ್ಯನಲ್ಲಿ ಕ್ರೌರ್ಯ ಪ್ರವೃತ್ತಿ ಹೆಚ್ಚಾಗುತ್ತಿದೆ. ಹಿಂದಿನ ಕಾಲದಲ್ಲಿ ಮಕ್ಕಳ ಬಾಲ್ಯವು ಪ್ರಕೃತಿಯೊಂದಿಗೆ ಪ್ರಫುಲ್ಲವಾಗಿರುತ್ತಿತ್ತು. ಆದರೆ ಇಂದಿನ ಮಕ್ಕಳು ಪ್ರಕೃತಿಯಿಂದ ದೂರವಾಗುತ್ತಿದ್ದಾರೆ. ಆದುದರಿಂದ ಮಕ್ಕಳು ಪ್ರಕೃತಿಯ ಒಡನಾಟದಲ್ಲಿ ಬಾಲ್ಯವನ್ನು ಕಳೆಯಲು ನಾವು ಅವಕಾಶ ಮಾಡಿಕೊಡುವ ಅಗತ್ಯವಿದೆ. ಈ ಕೆಲಸ ಪೇಜಾವರ ಶ್ರೀಗಳ ಮಾರ್ಗದರ್ಶನದಲ್ಲಿ ಶ್ರೀ ರಾಮಕುಂಜೇಶ್ವರ ವಿದ್ಯಾಸಂಸ್ಥೆಗಳ ಮೂಲಕ ನಡೆಯುತ್ತಿದೆ ಎಂದು ಸ್ವಾಮೀಜಿ ನುಡಿದರು.

ಮುಖ್ಯಅತಿಥಿಯಾಗಿ ಭಾಗವಹಿಸಿದ್ದ ಅಂಕಣಕಾರ, ವಿಮರ್ಶಕ ಜೋಗಿ ಬೆಂಗಳೂರು ಅವರು ಮಾತನಾಡಿ ನಾವು ಇಂದು ನೋಡುತ್ತಿರುವ ದೊಡ್ಡ ದೊಡ್ಡ ಸಾಧಕರೆಲ್ಲಾ ಕನ್ನಡ ಮಾಧ್ಯಮದ ಶಾಲೆಗಳಲ್ಲಿ ಓದಿದವರು ಎನ್ನುವುದು ಉಲ್ಲೇಖನೀಯ ಅಂಶ. ಆದರೆ ಇಂದಿನ ಕಾಲಘಟ್ಟದಲ್ಲಿ ಕನ್ನಡ ಮಾಧ್ಯಮದ ಶಾಲೆಗಳ ಕುರಿತು ಹೆತ್ತವರ ದೃಷ್ಟಿಕೋನವೇ ವಿಚಿತ್ರವಾಗಿದೆ. ಹಿಂದೆ ನಮ್ಮ ಮಕ್ಕಳು ನಮ್ಮ ಕಣ್ಣ ಮುಂದೆಯೇ ಇರಲಿ ಎನ್ನುವುದು ನಮ್ಮ ಹೆತ್ತವರ ಆಶಯವಾಗಿತ್ತು. ಆದರೆ ಇಂದು ಶಿಕ್ಷಣದ ಹೆಸರಿನಲ್ಲಿ ನಾವೇ ನಮ್ಮ ಮಕ್ಕಳನ್ನು ದೂರ ಮಾಡುತ್ತಿದ್ದೇವೆ. ಇಂತಹ ಸಾಮಾಜಿಕ ಅಸಮತೋಲನಕ್ಕೆ ಕಾರಣರಾಗುತ್ತಿರುವ ನಮ್ಮನ್ನು ಕೊನೆಗೆ ಮಕ್ಕಳೇ ದೂರ ಮಾಡುವ ಪರಿಸ್ಥಿತಿ ನಿರ್ಮಾಣವಾಗುತ್ತಿದೆ.  ಬೆಂಗಳೂರಿನ ಬಹುತೇಕ ಪ್ರತಿಷ್ಠಿತ ಶಾಲೆಗಳಲ್ಲಿ ಮಕ್ಕಳಿಗೆ ಆಟದ ಮೈದಾನವೇ ಇಲ್ಲ ಎನ್ನುವುದು ಸೋಜಿಗದ ಸಂಗತಿಯಾಗಿದೆ. ಇವೆಲ್ಲದರಿಂದಾಗಿ ಮಕ್ಕಳಿಗೆ ಜೀವನ ಶಿಕ್ಷಣವೇ ಸಿಗುತ್ತಿಲ್ಲ ಎಂದರು. ಯಾವತ್ತೂ ನಾವು ಮಕ್ಕಳನ್ನು ಪ್ರಕೃತಿ ಮತ್ತು ಪರಂಪರೆಯಿಂದ ದೂರವಿಡಬಾರದು. ಮಕ್ಕಳು  ಪರಂಪರೆಯ ಜೊತೆ ಬೆಳೆದರಷ್ಟೇ ಸಂಸ್ಕಾರವಂತ ಉತ್ತಮ ಮನುಷ್ಯರಾಗಿ ರೂಪುಗೊಳ್ಳಲು ಸಾಧ್ಯ. ನಮ್ಮ ಜೀವನದಲ್ಲಿ ನಾವು ಇತರರಿಗಾಗಿ ಒಂದಿಷ್ಟು ಸಮಯವನ್ನು ಕೊಡಬೇಕು. ಜೀವನದ ಸಂತೋಷದ ಕ್ಷಣಗಳನ್ನು ಸವಿದಾಗ ಮಾತ್ರ ಜೀವನ ಪರಿಪೂರ್ಣವಾಗಲು ಸಾಧ್ಯ ಎಂದು ಅವರು ಅಭಿಪ್ರಾಯಪಟ್ಟರು.

Also Read  ಕಲ್ಲುಗುಡ್ಡೆ: ಬಿರುವೆರ್ ಕುಡ್ಲ ಪುತ್ತೂರು ಘಟಕದ ಸದಸ್ಯತ್ವ ಅಭಿಯಾನ

ಬೆಂಗಳೂರಿನ ಒರಾಕಲ್ ಇಂಡಿಯಾ ಸಂಸ್ಥೆಯ ಅಧಿಕಾರಿ ರವಿರಾಜ ಭಟ್ ಮಾತನಾಡಿದರು. ಈ ಸಂದರ್ಭದಲ್ಲಿ ಜಿಲ್ಲಾ ಅತ್ಯುತ್ತಮ ಪ್ರಶಸ್ತಿ ಪುರಸ್ಕೃತ ಶಿಕ್ಷಕ ಶ್ರೀ ರಾಮಕುಂಜೇಶ್ವರ ಪ್ರೌಢಶಾಲೆ ಮುಖ್ಯಶಿಕ್ಷಕ ಸತೀಶ್ ಭಟ್, ಸಾಧಕ ಹಿರಿಯ ವಿದ್ಯಾರ್ಥಿಗಳಾದ ವಿನೋದ್ ಕುಮಾರ್, ಮನೋಹರ್ ವಿ.ಎಸ್.ನೆಟ್ಟಣ, ನಾಟಕ ಹಾಗೂ ಚಲನಚಿತ್ರ ಕಲಾವಿಧ ರವಿ ರಾಮಕುಂಜ, ಸಂಸ್ಥೆಯಲ್ಲಿ 38 ವರ್ಷಗಳ ಕಾಲ ಜವಾನರಾಗಿ ಸೇವೆ ಸಲ್ಲಿಸಿದ ಕೃಷ್ಣಪ್ಪ ನಾೖಕ್, ದಾನಿ ಉಪ್ಪಿನಂಗಡಿಯ ಸುಂದರ ಗೌಡ ಸಚಿನ್, ರಾಜ್ಯಮಟ್ಟದ ಸ್ಥಳದಲ್ಲಿಯೇ ಗಣಿತ ಮಾದರಿ ತಯಾರಿ ಸ್ಪರ್ಧೆಗೆ ಆಯ್ಕೆಯಾಗಿರುವ ಶಿಕ್ಷಣ ವೆಂಕಟೇಶ್ ದಾಮ್ಲೆ ಮುಂತಾದವರನ್ನು ಸಮ್ಮಾನಿಸಿ ಗೌರವಿಸಲಾಯಿತು. ಮುಖ್ಯಅತಿಥಿ ಜೋಗಿ ಬೆಂಗಳೂರು ಅವರನ್ನು ರಜತ ಕಲಶ ನೀಡಿ ಶ್ರೀಗಳು ಗೌರವಿಸಿದರು. ಪ್ರತಿಭಾವಂತ ವಿದ್ಯಾರ್ಥಿಗಳನ್ನು ಅಭಿನಂದಿಸಲಾಯಿತು.

Also Read  ಮಂಗಳೂರು: ಎರಡು ವರ್ಷದ ಮಗುವಿನ ಮೇಲೆ ಲೈಂಗಿಕ ದೌರ್ಜನ್ಯ ➤ ಬಳಿಕ ಉಪ್ಪುನೀರಿಗೆ ಎಸೆದ ನೀಚ

ಶ್ರೀ ರಾಮಕುಂಜೇಶ್ವರ ವಿದ್ಯಾವರ್ಧಕ ಸಭಾದ ಅಧ್ಯಕ್ಷ  ಕೃಷ್ಣಮೂರ್ತಿ ಕಲ್ಲೇರಿ, ಆಡಳಿತ ಮಂಡಳಿಯ ಸದಸ್ಯರಾದ ಮೋಹನರಾವ್ ಆತೂರು, ಕೆ.ಸೇಸಪ್ಪ ರೈ, ಪ.ಪೂ.ಕಾಲೇಜಿನ ವಿದ್ಯಾರ್ಥಿ ನಾಯಕ ಪ್ರಜ್ವಲ್, ಕಾರ್ಯದರ್ಶಿ ಕೃತಿಕಾ, ಪ್ರೌಢಶಾಲಾ ವಿದ್ಯಾರ್ಥಿ ನಾಯಕ ಪ್ರಜ್ವಲ್ ಉಪಸ್ಥಿತರಿದ್ದರು. ಶ್ರೀ ರಾಮಕುಂಜೇಶ್ವರ ವಿದ್ಯಾವರ್ಧಕ ಸಭಾದ ಕಾರ್ಯದರ್ಶಿ ರಾಧಾಕೃಷ್ಣ ಕೆ.ಎಸ್. ಅವರು ಸ್ವಾಗತಿಸಿ, ಪ್ರಸ್ತಾವನೆಗೈದರು. ಪ.ಪೂ.ಕಾಲೇಜಿನ ಪ್ರಿನ್ಸಿಪಾಲ್  ಸತೀಶ್ ಭಟ್ ಎಂ. ಹಾಗೂ ಪ್ರೌಢಶಾಲಾ ಮುಖ್ಯಶಿಕ್ಷಕ ಸತೀಶ್ ಭಟ್ ಅವರು ವರದಿ ಮಂಡಿಸಿದರು. ಉಪನ್ಯಾಸಕ ಗಣರಾಜ ಕುಂಬ್ಳೆ ಕಾರ್ಯಕ್ರಮ ನಿರೂಪಿಸಿದರು. ಸುಬ್ರಹ್ಮಣ್ಯ ಕಾರಂತ್ ವಂದಿಸಿದರು. ಉಪನ್ಯಾಸಕ ವಸಂತಕುಮಾರ್, ದಿನೇಶ್ ಬಿ., ರಾಧಾಕೃಷ್ಣ ಹಾಗೂ ಮಲ್ಲಿಕಾ ಅವರು ಪ್ರತಿಭಾನ್ವಿತ ವಿದ್ಯಾರ್ಥಿಗಳ ಪಟ್ಟಿ ವಾಚಿಸಿದರು. ಸಭಾ ಕಾರ್ಯಕ್ರಮದ ಬಳಿಕ ವಿದ್ಯಾರ್ಥಿಗಳಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಿತು.

error: Content is protected !!
Scroll to Top