ಕೌಕ್ರಾಡಿ: ಪೂಜೆಗೆ ಮಾವಿನ ಎಲೆ ಬೇಕೆಂದು ನಂಬಿಸಿ ಕಳ್ಳತನ ► ನಗ, ನಗದನ್ನು ದೋಚಿದ ಅಪರಿಚಿತ ವ್ಯಕ್ತಿ

(ನ್ಯೂಸ್ ಕಡಬ) newskadaba.com ಉಪ್ಪಿನಂಗಡಿ, ಡಿ.18. ಪೂಜೆಗೆ ಮಾವಿನ ಎಲೆ ಹಾಗೂ ಹಿಂಗಾರ ಬೇಕೆಂದು ನಂಬಿಸಿ ಮನೆಯ ಮಾಲಕನನ್ನು ತೋಟಕ್ಕೆ ಕಳುಹಿಸಿ ಮನೆಯಿಂದ ನಗ ನಗದನ್ನು ಕದ್ದೊಯ್ದ ಘಟನೆ ಕೌಕ್ರಾಡಿ ಗ್ರಾಮದ ಪೊಟ್ಲಡ್ಕ ಎಂಬಲ್ಲಿ ಸೋಮವಾರ ಸಂಜೆ ನಡೆದಿದೆ.

ಅಪರಿಚಿತ ವ್ಯಕ್ತಿಯಿಂದ ಮೋಸಕ್ಕೊಳಗಾದವರನ್ನು ಕೌಕ್ರಾಡಿ ಗ್ರಾಮದ ಪೊಟ್ಲಡ್ಕ ನಿವಾಸಿ ಎಲ್ಯಣ್ಣ ಗೌಡ (70) ಎಂದು ಗುರುತಿಸಲಾಗಿದೆ. ಸೋಮವಾರ ಸಂಜೆ ಅವರ ಮನೆಗೆ ಬೈಕೊಂದರಲ್ಲಿ ಬಂದ ಯುವಕನೋರ್ವ ನಾಳೆ ನಮ್ಮ ಮನೆಯಲ್ಲಿ ಪೂಜೆ ಇದ್ದು ಅದಕ್ಕೆ ಮಾವಿನ ಎಲೆ ಹಾಗೂ ಹಿಂಗಾರ ಅಗತ್ಯವಾಗಿದೆ. ದಯವಿಟ್ಟು ಕೊಡಿ ಎಂದು ಅಂಗಲಾಚಿದ. ಬಳಿಕ ತನಗೆ ಬಾಯಾರಿಕೆಯಾಗುತ್ತಿದೆ ಸ್ವಲ್ಪ ನೀರು ಕೊಡಿ ಎಂದು ವಿನಂತಿಸಿದ್ದ. ಯುವಕನಿಗೆ ಕುಡಿಯಲು ನೀರು ಕೊಟ್ಟ ಎಲ್ಯಣ್ಣ ಗೌಡರು, ಯುವಕನನ್ನು ಮನೆಯ ಮುಂಭಾಗದಲ್ಲೇ ನಿಲ್ಲಿಸಿ ಮನೆಯ ಎದುರಿನ ಬಾಗಿಲಿಗೆ ಬೀಗ ಜಡಿದು ಬೀಗದ ಕೀಯನ್ನು ಕಿಟಕಿಯಲ್ಲಿರಿಸಿ ಮಾವಿನ ಎಲೆ ಹಾಗೂ ಹಿಂಗಾರ ತರಲೆಂದು ತೋಟಕ್ಕೆ ಹೋಗಿದ್ದಾರೆ. ತೋಟದಿಂದ ಮಾವಿನ ಎಲೆ, ಹಿಂಗಾರ ತರುವಷ್ಟರಲ್ಲಿ ಯುವಕ ಬೈಕಿನಲ್ಲಿ ಪರಾರಿಯಾಗಿದ್ದಾನೆ. ನೋಡಿದಾಗ ಮನೆಯ ಬಾಗಿಲು ತೆರೆದು ಚಿನ್ನಾಭರಣವನ್ನಿರಿಸಿದ್ದ ಕಪಾಟಿನ ಬಾಗಿಲು ಒಡೆದು ಅದರಲ್ಲಿದ್ದ 50,000 ನಗದು, ಹಾಗೂ 5  ಪವನಿಗೂ ಹೆಚ್ಚಿನ ಚಿನ್ನಾಭರಣವನ್ನು ಕದ್ದೊಯ್ದಿದ್ದಾನೆ.

Also Read  ಕರ್ನಾಟಕ ರಾಜ್ಯ ಸರಕಾರಿ ನೌಕರರ ಸಂಘ ➤ ಒಟ್ಟು 9 ಅಭ್ಯರ್ಥಿಗಳು ನಾಮ ಪತ್ರ ಸಲ್ಲಿಕೆ

ತಕ್ಷಣವೇ ಎಲ್ಯಣ್ಣ ಗೌಡರು ಉಪ್ಪಿನಂಗಡಿ ಠಾಣೆಗೆ ದೂರು ನೀಡಿದ್ದು, ಘಟನಾ ಸ್ಥಳಕ್ಕೆ ಉಪ್ಪಿನಂಗಡಿ ಪೊಲೀಸರು ಹಾಗೂ ಬೆರಳಚ್ಚು ತಜ್ಞರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

error: Content is protected !!
Scroll to Top