ಸುಲಭವಾದ ಮತ್ತು ರುಚಿಕರ ತಿನಿಸು ‘ಹೆಸರು ಬೇಳೆ’ ತೊವೆ !     ➤ ಮಾಡುವ ವಿಧಾನ

(ನ್ಯೂಸ್ ಕಡಬ)newskadaba.com ಇದು ಅತ್ಯಂತ ಸುಲಭವಾದ ಹಾಗೂ ರುಚಿಕಟ್ಟಾದ ತಿನಿಸು. ಉಡುಪಿ ಮತ್ತು ದಕ್ಷಿಣ ಕನ್ನಡದಲ್ಲಿ ಬಹು ಜನಪ್ರಿಯ. ಪ್ರತಿನಿತ್ಯ ಸಾಂಬಾರ್ ತಿಂದು ಬೇಜಾರಾದವರು ವಾರಕ್ಕೊಮ್ಮೆಯಾದ್ರೂ ಹೆಸರು ಬೇಳೆ ತೊವೆ ಮಾಡಬಹುದು. ಹೆಸರು ಬೇಳೆಯಲ್ಲಿ ಪೋಷಕಾಂಶವಿರೋದ್ರಿಂದ ಆರೋಗ್ಯಕ್ಕೂ ಇದು ಉತ್ತಮ. ಅದರಲ್ಲೂ ಸಸ್ಯಾಹಾರಿ ಕುಟುಂಬಕ್ಕೆ ಹೇಳಿ ಮಾಡಿಸಿದಂತಿದೆ.

ಬೇಕಾಗುವ ಸಾಮಗ್ರಿ : ಒಂದು ಕಪ್ ಹೆಸರು ಬೇಳೆ, ಮಧ್ಯಮ ಗಾತ್ರದ ಈರುಳ್ಳಿ, ಒಂದು ಟೊಮೆಟೋ, ಕಾಲು ಚಮಚ ಮೆಣಸಿನ ಪುಡಿ, ಕಾಲು ಚಮಚ ಅರಿಶಿನ ಪುಡಿ, ಮೂರು ಕಪ್ ನಷ್ಟು ನೀರು, ರುಚಿಗೆ ತಕ್ಕಷ್ಟು ಉಪ್ಪು. ವಗ್ಗರಣೆಗೆ ಒಂದು ಚಮಚ ಸಾಸಿವೆ, ಒಂದು ಚಮಚ ಜೀರಿಗೆ, ಕಾಲು ಚಮಚ ಗರಂ ಮಸಾಲಾ ಪೌಡರ್, ಚಿಟಿಕೆ ಇಂಗು, ಒಂದೆರಡು ಕೆಂಪು ಮೆಣಸಿನಕಾಯಿ, ಅರ್ಧ ಇಂಚಿನಷ್ಟು ಶುಂಠಿ, ಹೆಚ್ಚಿದ ಒಂದು ಬೆಳ್ಳುಳ್ಳಿ, 2-3 ಚಮಚ ಎಣ್ಣೆ.

ಮಾಡುವ ವಿಧಾನ : ಟೊಮೆಟೋ, ಈರುಳ್ಳಿ ಮತ್ತು ಶುಂಠಿಯನ್ನು ಸಣ್ಣಗೆ ಹೆಚ್ಚಿಕೊಳ್ಳಿ. ಹೆಸರು ಬೇಳೆಯನ್ನು ತೊಳೆದುಕೊಂಡು ಅದಕ್ಕೆ ಹೆಚ್ಚಿದ ಈರುಳ್ಳಿ, ಟೊಮೆಟೋ, ಶುಂಠಿ, ಅರಿಶಿನ ಪುಡಿ, ಅಚ್ಚಖಾರದ ಪುಡಿ ಸೇರಿಸಿ ಸ್ವಲ್ಪ ನೀರು ಹಾಕಿ ಕುಕ್ಕರ್ ನಲ್ಲಿ ಬೇಯಿಸಿ. ಕುಕ್ಕರ್ ತಣ್ಣಗಾದ ಬಳಿಕ ಅಗತ್ಯ ಎನಿಸಿದರೆ ಇನ್ನು ಸ್ವಲ್ಪ ನೀರು ಸೇರಿಸಿ. ಉಪ್ಪು ಮತ್ತು ಗರಂ ಮಸಾಲಾ ಪುಡಿ ಸೇರಿಸಿ 2 ನಿಮಿಷ ಕುದಿಸಿ. ಚಿಕ್ಕ ಬಾಣಲೆ ತೆಗೆದುಕೊಂಡು ಎಣ್ಣೆ, ಸಾಸಿವೆ, ಜೀರಿಗೆ, ಬೆಳ್ಳುಳ್ಳಿ, ಒಣಮೆಣಸು ಹಾಕಿ ಹುರಿಯಿರಿ. ನಂತರ ಇಂಗನ್ನು ಬೆರೆಸಿ. ವಗ್ಗರಣೆಯನ್ನು ಹೆಸರು ಬೇಳೆಯ ತೊವೆಗೆ ಹಾಕಿ ಮಿಕ್ಸ್ ಮಾಡಿ. ಬಿಸಿಬಿಸಿಯಾಗಿ ಅನ್ನ, ಚಪಾತಿ ಅಥವಾ ಫ್ರೈಡ್ ರೈಸ್ ಜೊತೆಗೆ ಹೆಸರುಬೇಳೆ ತೊವೆಯನ್ನು ಸವಿಯಬಹುದು.

 

error: Content is protected !!

Join the Group

Join WhatsApp Group