(ನ್ಯೂಸ್ ಕಡಬ) newskadaba.com ಕಡಬ, ಡಿ.17. ಓರ್ವ ವಿದ್ಯಾರ್ಥಿಯ ಭವಿಷ್ಯದ ಅಡಿಪಾಯವು ತನ್ನ ಪ್ರೌಢಶಿಕ್ಷಣದಿಂದ ಆರಂಭವಾಗುತ್ತದೆ. ಪ್ರತಿಯೋರ್ವ ವಿದ್ಯಾರ್ಥಿಯೂ ಪ್ರೌಢಶಾಲೆಯಲ್ಲಿ ಕಲಿಯುವಂತಹ ವಿದ್ಯೆಯನ್ನು ತನ್ನ ಜೀವನದಲ್ಲಿ ರೂಪಿಸಿಕೊಂಡಾಗ ಜೀವನ ಯಶಸ್ವಿಯಾಗುತ್ತದೆ ಎಂದು ಕೊಕ್ಕಡ ಸರಕಾರಿ ಪದವಿಪೂರ್ವ ಕಾಲೇಜಿನ ಉಪನ್ಯಾಸಕರಾದ ವಿಶ್ವನಾಥ್ ರೈ ಪೆರ್ಲ ಹೇಳಿದರು.
ಅವರು ಭಾನುವಾರದಂದು ಮರ್ಧಾಳ ಸೈಂಟ್ ಮೇರೀಸ್ ಪ್ರೌಢಶಾಲೆಯ ವಾರ್ಷಿಕೋತ್ಸವ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡುತ್ತಿದ್ದರು. ವಿದ್ಯಾರ್ಥಿಗಳು ಸಮಾಜದ ಮುನ್ನೆಲೆಗೆ ಬರುವಲ್ಲಿ ತನ್ನ ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಅತ್ಯಗತ್ಯವಾದುದು. ಆದುದರಿಂದ ಇಲ್ಲಿ ಕಲಿತಂತಹ ವಿದ್ಯೆಯನ್ನು ಸದುಪಯೋಗ ಪಡಿಸಿಕೊಳ್ಳುವಂತೆ ವಿದ್ಯಾರ್ಥಿಗಳಿಗೆ ಕರೆ ನೀಡಿದರು. ಶಿಕ್ಷಕ ರಕ್ಷಕ ಸಂಘದ ಅಧ್ಯಕ್ಷರಾದ ಶ್ರೀಮತಿ ಮೈಮುನ್ನಿಸಾ ದೀಪ ಬೆಳಗಿಸುವುದರ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿದರು.
ರೆ|ಫಾ| ಜೋಸ್ ಸಭೆಯ ಅಧ್ಯಕ್ಷತೆ ವಹಿಸಿದ್ದರು. ವೇದಿಕೆಯಲ್ಲಿ ಮರ್ಧಾಳ ಗ್ರಾ.ಪಂ.ಅಧ್ಯಕ್ಷರಾದ ಶ್ರೀಮತಿ ಲಲಿತಾ, ಸಾಮಾಜಿಕ ಮುಂದಾಳು ಶಿವಪ್ರಸಾದ್ ಕೈಕುರೆ, ಶಿಕ್ಷಕ ರಕ್ಷಕ ಸಂಘದ ಉಪಾಧ್ಯಕ್ಷರಾದ ಜನಾರ್ಧನ ಮಲಂಪಡ್ಕ, ಹಿರಿಯ ವಿದ್ಯಾರ್ಥಿ ಸಂಘದ ಅಧ್ಯಕ್ಷರಾದ ಮಂಜುನಾಥ್ ಮರ್ಧಾಳ, ಆಡಳಿತ ಮಂಡಳಿಯ ಕಾರ್ಯದರ್ಶಿ ಕೆ.ಸಿ.ಚಾಕೋ, ಕೋಶಾಧಿಕಾರಿ ಎಂ.ಎಂ.ಚೆರಿಯನ್ ಮೊದಲಾದವರು ಉಪಸ್ಥಿತರಿದ್ದರು.
ಶಾಲಾ ಮುಖ್ಯೋಪಾಧ್ಯಾಯರಾದ ಈಶೋ ಫಿಲಿಪ್ ವಾರ್ಷಿಕ ವರದಿ ವಾಚಿಸಿದರು. ಅಧ್ಯಾಪಕರಾದ ಸುಬ್ರಹ್ಮಣ್ಯ ಗೌಡ ಸ್ವಾಗತಿಸಿ, ಸುಂದರ ಗೌಡ ವಂದಿಸಿದರು. ವೆಂಕಟರಮಣ ಗೌಡ ಕಾರ್ಯಕ್ರಮ ನಿರೂಪಿಸಿದರು. ಬಳಿಕ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಿತು.