(ನ್ಯೂಸ್ ಕಡಬ) newskadaba.com ಹೊಸದಿಲ್ಲಿ, ಜ.19. ಭಾರತದ ಖ್ಯಾತ ಕುಸ್ತಿ ಪಟುಗಳಾದ ವಿನೇಶ್ ಪೋಗಟ್ ಮತ್ತು ಸಾಕ್ಷಿ ಮಲಿಕ್ ಅವರೇ ಭಾರತ ಕುಸ್ತಿ ಒಕ್ಕೂಟದ ಅಧ್ಯಕ್ಷರ ವಿರುದ್ಧ ಲೈಂಗಿಕ ಕಿರುಕುಳದ ಆರೋಪ ಮಾಡಿದ್ದಾರೆ. ರಾಷ್ಟ್ರೀಯ ಕ್ಯಾಂಪ್‌ಗಳಲ್ಲಿ ತರಬೇತಿ ಪಡೆಯುತ್ತಿರುವ ಮಹಿಳಾ ಕುಸ್ತಿ ಪಟುಗಳಿಗೆ ಒಕ್ಕೂಟದ ಅಧ್ಯಕ್ಷ ಬ್ರಿಜ್ ಭೂಷಣ್ ಶರಣ್ ಸಿಂಗ್ ಅವರು ಲೈಂಗಿಕ ಕಿರುಕುಳ ನೀಡುತ್ತಿದ್ದಾರೆ.
ಅಷ್ಟೇ ಅಲ್ಲ, ಕೆಲವು ತರಬೇತುದಾರಿಂದಲೂ ಲೈಂಗಿಕ ಕಿರುಕುಳ ನೀಡುತ್ತಿದ್ದಾರೆ. ಇದರಲ್ಲಿ ರಾಷ್ಟ್ರೀಯ ಅಧ್ಯಕ್ಷರೂ ಭಾಗಿಯಾಗಿದ್ದಾರೆ ಎಂದು ವಿನೇಶ್ ಪೋಗಟ್ ಅವರು ಆರೋಪಿಸಿದ್ದಾರೆ. ಈ ಸಂಬಂಧ ದಿಲ್ಲಿಯಲ್ಲಿರುವ ಜಂತರ್ ಮಂತರ್‌ನಲ್ಲಿ ದೇಶದ ಪ್ರಮುಖ ಕುಸ್ತಿ ಪಟುಗಳಾದ ಸಾಕ್ಷಿ ಮಲಿಕ್, ಸಂಗೀತ್ ಪೋಗಟ್, ಭಜರಂಗ್, ಸೋನಮ್ ಮಲಿಕ್ ಮತ್ತು ಅನು ಅವರೂ ಪ್ರತಿಭಟನೆ ನಡೆಸಿದರು. ನನ್ನಲ್ಲಿ ಹಲವು ಮಹಿಳಾ ಕುಸ್ತಿ ಪಟುಗಳೂ ಸೇರಿದಂತೆ 20ಕ್ಕೂ ಹೆಚ್ಚು ಯುವತಿಯರು ಲೈಂಗಿಕ ಕಿರುಕುಳದ ಬಗ್ಗೆ ಹೇಳಿಕೊಂಡಿದ್ದಾರೆ.
ರಾಷ್ಟ್ರೀಯ ಕ್ಯಾಂಪ್‌ಗಳಲ್ಲಿ ಈ ರೀತಿ ಆಗುತ್ತಿದೆ ಎಂದು ನೇರವಾಗಿಯೇ ಆರೋಪಿಸಿದ್ದಾರೆ. ನಾನು ಈ ವಿಷಯವನ್ನು ಪ್ರಧಾನಮಂತ್ರಿ ಹಾಗೂ ಗೃಹ ಸಚಿವರಿಗೂ ವಿವರಿಸಲಾಗುವುದು ಎಂದು ಹೇಳಿರುವ ಅವರು, ಭಾರತ ಕುಸ್ತಿ ಒಕ್ಕೂಟ ಅತ್ಯಂತ ಪ್ರಬಲವಾಗಿದ್ದು, ನಾಳೆ ನಾನು ಜೀವಂತವಾಗಿ ಇರುತ್ತೀನೋ ಅಥವಾ ಇಲ್ಲವೋ ಎಂಬುದು ಗೊತ್ತಿಲ್ಲ ಎಂದೂ ಆತಂಕ ವ್ಯಕ್ತಪಡಿಸಿದ್ದಾರೆ. ಕುಸ್ತಿ ಒಕ್ಕೂಟದ ವಿರುದ್ಧ ಬಹುತೇಕ ಎಲ್ಲ ಕುಸ್ತಿ ಪಟುಗಳು ತಿರುಗಿಬಿದ್ದಿದ್ದು, ಈ ವಿಷಯ ಬಗೆಹರಿಯುವವರೆಗೆ ನಾವು ಯಾವುದೇ ರಾಷ್ಟ್ರೀಯ ಅಥವಾ ಅಂತಾರಾಷ್ಟ್ರೀಯ ವೇದಿಕೆಗಳಲ್ಲಿ ಭಾಗಿಯಾಗುವುದಿಲ್ಲ ಎಂದು ಹೇಳಿದ್ದಾರೆ.
ಒಕ್ಕೂಟದಲ್ಲಿ ಏಕಪಕ್ಷೀಯವಾಗಿ ನಿರ್ಧಾರಗಳಾಗುತ್ತಿವೆ. ನಮ್ಮ ಧ್ವನಿಗೆ ಯಾವುದೇ ಬೆಲೆ ಇಲ್ಲ. ಹಲವು ದಿನಗಳಿಂದ ಮೌನವಾಗಿ ಎಲ್ಲವನ್ನೂ ಸಹಿಸಿಕೊಂಡಿದ್ದೇವೆ. ಆದರೆ ಇನ್ನು ಮುಂದೆ ಹೀಗೆ ಆಗದು ಎಂದು ಭಜರಂಗ್ ಹೇಳಿದ್ದಾರೆ. ನಾವು ದೇಶಕ್ಕಾಗಿ ಪದಕ ಗೆದ್ದಾಗ ಎಲ್ಲರೂ ಸಂಭ್ರಮಿಸುತ್ತಾರೆ. ಆದರೆ, ನಾವೀಗ ನೋವಿನಲ್ಲಿದ್ದೇವೆ. ಯಾರೂ ನಮ್ಮ ಬಗ್ಗೆ ಯೋಚಿಸುತ್ತಿಲ್ಲ ಎಂದೂ ವಿಷಾದ ವ್ಯಕ್ತಪಡಿಸಿದ್ದಾರೆ. ಜತೆಗೆ ಈ ಬಗ್ಗೆ ಪ್ರಧಾನಿ ಕಾರ್ಯಾಲಯ ಮತ್ತು ಗೃಹ ಸಚಿವಾಲಯ ಗಮನಹರಿಸಬೇಕಿದೆ ಎಂದು ಆಗ್ರಹಿಸಿದ್ದಾರೆ.