(ನ್ಯೂಸ್ ಕಡಬ)newskadaba.com ಉಡುಪಿ, ಜ.16. ಹಾಲಿನ ಉತ್ಪಾದನಾ ವೆಚ್ಚಕ್ಕೆ ಅನುಗುಣವಾಗಿ ರೈತರು ಸೊಸೈಟಿಗಳಿಗೆ ನೀಡುವ ಹಾಲಿನ ದರವನ್ನು ಹೆಚ್ಚಿಸಬೇಕು ಮತ್ತು ನಂದಿನಿ ಪಶು ಆಹಾರ ಖರೀದಿಗೆ ಸಬ್ಡಿಡಿ ರೂಪದಲ್ಲಿ ರಾಜ್ಯ ಬಜೆಟ್ ನಲ್ಲಿ ವಿಶೇಷ ಅನುದಾನ ಬಿಡುಗಡೆ ಮಾಡಬೇಕು ಎಂದು ಸಹಕಾರ ಭಾರತಿ ಉಡುಪಿ ಜಿಲ್ಲಾ ಘಟಕ ಆಗ್ರಹಿಸಿದೆ.
ಈ ಕುರಿತು ಉಡುಪಿಯಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅಧ್ಯಕ್ಷರಾದ ಬೋಳ ಸದಾಶಿವ ಶೆಟ್ಟಿಯವರು “ಕಳೆದ ಅಕ್ಟೋಬರ್ 27ರಂದು ಉಡುಪಿ ಶ್ರೀ ಕೃಷ್ಣ ಮಠದ ರಾಜಾಂಗಣದಲ್ಲಿ ಬೃಹತ್ ರೈತ ಸಮಾವೇಶ ವನ್ನು, ಸಹಕಾರ ಭಾರತಿ ಆಯೋಜಿಸಿ ಸರಕಾರವನ್ನು ಒತ್ತಾಯಿಸಿ ಅಂಚೆ ಕಾರ್ಡ್ ಚಳವಳಿಯನ್ನು ನಡೆಸಿತ್ತು. ರಾಜ್ಯ ಸರಕಾರಕ್ಕೆ ಉಡುಪಿ ಜಿಲ್ಲಾಧಿಕಾರಿಯವರ ಮೂಲಕ ಮನವಿಯನ್ನು ಕೂಡಾ ಸಲ್ಲಿಸಲಾಗಿತ್ತು. ಸರಕಾರ ಹೈನುಗಾರ ರೈತರ ಆಕ್ರೋಶಕ್ಕೆ ಮಣಿದು ಪ್ರತಿ ಲೀಟರ್ ಗೆ ಕೇವಲ 2 ರೂಪಾಯಿ ಮಾರಾಟ ದರ ಏರಿಸಲು ಸಮ್ಮತಿ ನೀಡಿತ್ತು. ಆದರೆ ಎರಡು ರೂಪಾಯಿ ಏರಿಕೆಯಾಗಿರುವುದು ಏನೇನು ಸಾಲದು, ವಿಪರೀತವಾಗಿ ಏರುತ್ತಿರುವ ಹೈನುಗಾರಿಕೆಯ ಖರ್ಚು ವೆಚ್ಚಗಳು, ನಿರಂತರ ಪಶು ಆಹಾರದ ದರ ಏರಿಕೆ, ಕೃಷಿ ಕೂಲಿ ಕಾರ್ಮಿಕರ ಸಂಬಳ,ಪಶು ಚಿಕಿತ್ಸೆ, ಔಷಧ ವೆಚ್ಚ, ಸಾಗಾಟ ವೆಚ್ಚ ಎಲ್ಲವೂ ಏರುಗತಿಯಲಿ ಸಾಗುತ್ತಿದ್ದು, ಹೈನುಗಾರಿಕೆಯಲ್ಲಿ ತೊಡಗಿರುವ ಕೃಷಿಕರನ್ನು ಹೈರಾಣವಾಗಿಸಿದೆ. ಹಾಲಿನ ಉತ್ಪಾದನಾ ವೆಚ್ಚಕ್ಕೆ, ಅನುಗುಣವಾಗಿ ಹಾಲಿಗೆ ಖರೀದಿ ದರ ಸಿಗದೆ ರಾಜಾದ್ಯಂತ ಹೈನುಗಾರರಲ್ಲಿ ಆತಂಕ ಮತ್ತು ನಿರಾಸಕ್ತಿ ಮೂಡಿದ್ದು ಹಾಲು ಉತ್ಪಾದನೆಯಲ್ಲಿ, ತೀವ್ರ ಕೊರತೆ ಉಂಟಾಗಿದ್ದು, ರಾಜ್ಯದ ಎಲ್ಲಾ, ಒಕ್ಕೂಟಗಳು ಕೂಡ ತೀವ್ರ ಆರ್ಥಿಕ ಸಂಕಷ್ಟಕ್ಕೆ ಒಳಗಾಗಿವೆ”.