(ನ್ಯೂಸ್ ಕಡಬ)newskadaba.com ಮೈಸೂರು, ಜ.16. ನಕಲಿ ರಸಗೊಬ್ಬರ ತಯಾರಿ ದಾಸ್ತಾನು ಘಟಕದ ಮೇಲೆ ಕೃಷಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಮೈಸೂರಿನ ಶ್ಯಾದನಹಳ್ಳಿಯಲ್ಲಿ ಅಕ್ರಮವಾಗಿ ಎದ್ದು ನಿಂತಿದ್ದ ದಾಸ್ತಾನು ಘಟಕದ ಮೇಲೆ ದಾಳಿ ನಡೆಸಿ ಅಪಾರ ಪ್ರಮಾಣದ ನಕಲಿ ರಸಗೊಬ್ಬರ ವಶಕ್ಕೆ ಪಡೆದಿದ್ದಾರೆ. 50ಕ್ಕೂ ಹೆಚ್ಚು ನಕಲಿ ರಸಗೊಬ್ಬರದ ಚೀಲ ಕಚ್ಚಾ ವಸ್ತು ಚೀಲ ಹೊಲೆಯುವ ಯಂತ್ರ ವಶಕ್ಕೆ ಪಡೆದಿದ್ದಾರೆ.
ಕೃಷಿ ಜಂಟಿ ನಿರ್ದೇಶಕ ಚಂದ್ರಶೇಖರ್ ನೇತೃತ್ವದಲ್ಲಿ ಕಾರ್ಯಾಚರಣೆ ನಡೆದಿದೆ. ಮಹೇಶ್ ಎಂಬುವವರಿಂದ ನಕಲಿ ರಸಗೊಬ್ಬರ ತಯಾರಿ ಆರೋಪ ಕೇಳಿ ಬಂದಿದೆ. ಇಲ್ಲಿ ಅಡುಗೆ ಉಪ್ಪು ಮತ್ತು ರೆಡ್ ಆಕ್ಸೈಡ್ ಮಿಶ್ರಣ ಮಾಡಿ ಎಂಒಪಿ ರಸ ಗೊಬ್ಬರ ಎಂದು ರೈತರಿಗೆ ಮಾರಾಟ ಮಾಡಲಾಗುತ್ತಿತ್ತು. ಹೆಸರಾಂತ ಕಂಪನಿಗಳ ಬ್ರಾಂಡ್ ಮುದ್ರೆಯ ಗೊಬ್ಬರ ಚೀಲಗಳಲ್ಲಿ ತುಂಬಿಸಿ ರೈತರಿಗೆ ನಕಲಿ ಗೊಬ್ಬರ ಮಾರಾಟ ಮಾಡಿ ವಂಚಿಸುತ್ತಿದ್ದರು. ಪ್ರಕರಣವನ್ನು ಮೈಸೂರು ಕಸಬಾ ಕೃಷಿ ಇಲಾಖೆ ಅಧಿಕಾರಿಗಳು ಪತ್ತೆ ಮಾಡಿ, ಪೊಲೀಸರ ನೆರವಿನಿಂದ ಕಾರ್ಖಾನೆ ಸಾಮಗ್ರಿಗಳನ್ನು ಮುಟ್ಟುಗೋಲು ಹಾಕಿದ್ದಾರೆ. ಕಾರ್ಯಾಚರಣೆ ವೇಳೆ ಮಹೇಶ್ ಹಾಗೂ ಇತರರು ಪರಾರಿಯಾಗಿದ್ದಾರೆ.