ಸವಣೂರು ಗ್ರಾ.ಪಂ. ವ್ಯಾಪ್ತಿಯನ್ನು ಕಡಬ ತಾಲೂಕಿಗೆ ಸೇರ್ಪಡೆ ವಿಚಾರ ► ಅಧಿಕಾರಿಗಳ ಜನವಿರೋಧಿ ನಿರ್ಧಾರದ ವಿರುದ್ಧ ಒಂದಾದ ಸವಣೂರು, ಪಾಲ್ತಾಡಿ, ಪುಣ್ಚಪಾಡಿಯ ಜನತೆ

(ನ್ಯೂಸ್ ಕಡಬ) newskadaba.com ಸವಣೂರು, ಡಿ.16. ಪ್ರಸ್ತಾವಿತ ಕಡಬ ತಾಲೂಕಿಗೆ ಸವಣೂರು ಗ್ರಾಮ ಪಂಚಾಯತ್ ವ್ಯಾಪ್ತಿಯ ಗ್ರಾಮಗಳಾದ ಸವಣೂರು ,ಪುಣ್ಚಪ್ಪಾಡಿ,ಪಾಲ್ತಾಡಿ ಗ್ರಾಮ ಸೇರ್ಪಡೆ ಮಾಡುವ ವಿಚಾರದ ಕುರಿತು ಸಾರ್ವಜನಿಕರ ಮನವಿಯ ಮೇರೆಗೆ ಸವಣೂರು ಗ್ರಾ.ಪಂ.ವಿಶೇಷ ಗ್ರಾಮ ಸಭೆಯು ಶುಕ್ರವಾರದಂದ ವಿನಾಯಕ ಸಭಾಭವನದಲ್ಲಿ ನಡೆಯಿತು.

ಸಭೆಯಲ್ಲಿ ಸವಣೂರು ವಿದ್ಯಾರಶ್ಮಿ ವಿದ್ಯಾಲಯದ ಸಂಚಾಲಕ ಸವಣೂರು ಕೆ.ಸೀತಾರಾಮ ರೈ ಮಾತನಾಡಿ, ನೂತನ ಕಡಬ ತಾಲೂಕು ರಚನೆ ಪ್ರಕ್ರಿಯೆ ಕಳೆದ 36 ವರ್ಷಗಳಿಂದ ನಡೆಯುತ್ತಲೇ ಬಂದಿದ್ದು, ಈ ಕುರಿತು ಹಲವು ಸಮಾಲೋಚನಾ ಸಭೆಗಳು ನಡೆದಿದೆ. ಈ ಹಿಂದೆ ನಡೆದ ಎಲ್ಲಾ ಪ್ರಕ್ರಿಯೆಯಲ್ಲಿ ಸವಣೂರು, ಪುಣ್ಚಪ್ಪಾಡಿ, ಪಾಲ್ತಾಡಿ ಗ್ರಾಮಗಳು ಪುತ್ತೂರು ತಾಲೂಕಿನಲ್ಲಿಯೇ ಇರುವುದಾಗಿ ಸರಕಾರಕ್ಕೆ ವರದಿಯನ್ನೂ ಕಳುಹಿಸಲಾಗಿತ್ತು. ಆದರೆ ಈಗ ಏಕಾಏಕಿ ಕಡಬ ತಾಲೂಕಿನ ಪಟ್ಟಿಯಲ್ಲಿ ನಮ್ಮ ಗ್ರಾಮವನ್ನು ಸೇರ್ಪಡೆಗೊಳಿಸಿರುವುದು ಸರಿಯಲ್ಲ. ಈ ಕುರಿತು ಎಲ್ಲರ ಸಹಕಾರದೊಂದಿಗೆ ನ್ಯಾಯಾಲಯದಲ್ಲಿ ಪಿ.ಐ.ಎಲ್ ಸಲ್ಲಿಸುವುದು ಸೂಕ್ತ ಎಂದರು.

ಗ್ರಾ.ಪಂ.ಮಾಜಿ ಉಪಾಧ್ಯಕ್ಷ, ಸವಣೂರು ಯುವಕ ಮಂಡಲದ ಮಾಜಿ ಅಧ್ಯಕ್ಷ ರಾಕೇಶ್ ರೈ ಕೆಡೆಂಜಿ ಮಾತನಾಡಿ, ಸಾರ್ವಜನಿಕರ ಹಿತದೃಷ್ಟಿಯಿಂದ ಕಡಬ ತಾಲೂಕು ವಿಚಾರಕ್ಕೆ ನಮ್ಮ ಗ್ರಾ.ಪಂ. ವ್ಯಾಪ್ತಿಯ ಗ್ರಾಮಗಳನ್ನು ಸೇರಿಸುವ ಪ್ರಸ್ತಾಪದ ಕುರಿತು ಜನಾಭಿಪ್ರಾಯ ಸಂಗ್ರಹಣೆಗೆ ಸಭೆ ಕರೆಯಬೇಕೆಂಬ ಮನವಿಗೆ ಸೂಕ್ತವಾಗಿ ಸ್ಪಂದಿಸಿ ವಿಶೇಷ ಸಭೆ ಆಯೋಜನೆ ಮಾಡಿದ ಗ್ರಾ.ಪಂ.ನ್ನು ಅಭಿನಂದಿಸಿದರು. ಈ ಹಿಂದೆ ನಡೆದ ಕಡಬ ತಾಲೂಕು ರಚನೆ ಸಂಬಂಧ ವಿಚಾರದಲ್ಲಿ ನಮ್ಮ ಗ್ರಾ.ಪಂ.ವ್ಯಾಪ್ತಿಯ ಗ್ರಾಮಗಳನ್ನು ಪುತ್ತೂರು ತಾಲೂಕಿನಲ್ಲಿಯೇ ಉಳಿಸುವುದೆಂದು ನಿರ್ಧರಿಸಲಾಗಿದ್ದರೂ, ಈಗ ಏಕಾಏಕಿ ಕಡಬ ತಾಲೂಕಿನ ಪಟ್ಟಿಯಲ್ಲಿ ನಮ್ಮ ಗ್ರಾಮಗಳನ್ನು ಸೇರಿಸಿರುವುದು ಜನವಿರೋಧಿ ಹಾಗೂ ಅವೈಜ್ಞಾನಿಕವಾಗಿದ್ದು, ಜನತೆಯ ಯಾವುದೇ ಅಭಿಪ್ರಾಯವನ್ನು ಪಡೆಯದೇ ಈ ರೀತಿ ಮಾಡಿರುವುದು ಸಂವಿಧಾನ ಬದ್ದ ಹಕ್ಕನ್ನು ಮೊಟಕುಗೊಳಿಸುವ ಪ್ರಯತ್ನ ಎಂದರು. ಅದೂ ಅಲ್ಲದೆ ನೂತನ ಕಡಬ ತಾಲೂಕಿನ ವ್ಯಾಪ್ತಿಗೆ 44 ಕಂದಾಯ ಗ್ರಾಮಗಳಿದ್ದು ಇದರಿಂದ ಇನ್ನಷ್ಟು ಸಮಸ್ಯೆಯಾಗಲಿದೆ. ಪುತ್ತೂರಿನಲ್ಲಿ 33, ಸುಳ್ಯದಲ್ಲಿ 34 ಗ್ರಾಮಗಳಿವೆ. ಹೊಸ ತಾಲೂಕಿಗೆ ಹೆಚ್ಚು ಗ್ರಾಮಗಳನ್ನು ಸೇರ್ಪಡೆಗೊಳಿಸಿದರೆ ಇಲಾಖೆಯ ಮೇಲೆ ಒತ್ತಡ ಬೀಳುತ್ತದೆ. ಈ ಕುರಿತು ನಮ್ಮ ಗ್ರಾ.ಪಂ.ವ್ಯಾಪ್ತಿಯ ಮೂರು ಗ್ರಾಮಗಳು ಪುತ್ತೂರು ತಾಲೂಕಿನಲ್ಲಿಯೇ ಉಳಿಸಲು ಒಗ್ಗಟ್ಟಿನ ಹೋರಾಟ ಅನಿವಾರ್ಯ ಎಂದರು.

Also Read  ಮಂಗಳೂರು: ಆತ್ಮಹತ್ಯೆಗೆ ಯತ್ನಿಸಿದ ಯುವತಿಯನ್ನು ರಕ್ಷಿಸಿ ಪ್ರಾಣಬಿಟ್ಟ ಯುವಕ...!

ಪಾಲ್ತಾಡಿ ಚೈತನ್ಯ ರೈತ ಶಕ್ತಿ ಗುಂಪಿನ ಅಧ್ಯಕ್ಷ ಗಣೇಶ್ ಶೆಟ್ಟಿ ಕುಂಜಾಡಿ ಮಾತನಾಡಿ, ಪಾಲ್ತಾಡಿ ಗ್ರಾಮ ಕೆಯ್ಯೂರು ಹಾಗೂ ಕೊಳ್ತಿಗೆಯವರೆಗೂ ವಿಸ್ತರಿಸಿದೆ.ಈ ಭಾಗದ ಅಲ್ಯಾಡಿ,ಉಪ್ಪಳಿಗೆ ಪ್ರದೇಶದ ಜನರಿಗೆ ಕಡಬ ಕ್ಕೆ ಸಂಪರ್ಕಿಸಬೇಕಾದರೆ ಈಗಿರುವ ತಾಲೂಕು ಕೇಂದ್ರ ಪುತ್ತೂರಿಗೆ ಬಂದು ಅಲ್ಲಿಂದ ಉಪ್ಪಿನಂಗಡಿಗೆ ಬಂದು ಕಡಬಕ್ಕೆ ಹೋಗಬೇಕಾಗುತ್ತದೆ.ಈ ರೀತಿಯ ಸಮಸ್ಯೆ ಮೂರು ಗ್ರಾಮಗಳ ಜನತೆಗೂ ಇದೆ.ಜನರ ಅಭಿಪ್ರಾಯ ಸಂಗ್ರಹಣೆ ಮಾಡದೇ ಏಕಾಏಕಿ ಇಂತಹ ನಿರ್ಧಾರದ ವಿರುದ್ದ ಹೋರಾಟ ಅನಿವಾರ್ಯ ಎಂದರು. ಭಾರತಿ ಗ್ರಾಮ ವಿಕಾಸ ಪ್ರತಿಷ್ಠಾನದ ಸ್ಥಾಪಕಾಧ್ಯಕ್ಷ ಬಿ.ಕೆ.ರಮೇಶ್ ಮಾತನಾಡಿ, ನ್ಯಾಯಾಲಯದಲ್ಲಿ ಪಿ.ಐ.ಎಲ್ ಹೂಡುವುದು ಸೂಕ್ತ ಎಂದರು. ಸವಣೂರು ಪ್ರಾ.ಕೃ.ಪ.ಸ.ಸಂಘದ ನಿರ್ಧೆಶಕ ,ನೋಟರಿ ನ್ಯಾಯವಾದಿ ಮಹಾಬಲ ಶೆಟ್ಟಿ ಕೊಮ್ಮಂಡ ಮಾತನಾಡಿ, ಜನಸಾಮಾನ್ಯರನ್ನು ಕತ್ತಲಲ್ಲಿಟ್ಟು ಏಕಾಏಕಿ ಇಂತಹ ನಿರ್ಧಾರ ಅಸಂವಿಧಾನಿಕ. ಶಾಸಕರ ಗಮನಕ್ಕೂ ಈ ವಿಚಾರ ಗಮನಕ್ಕೆ ಬಂದಿಲ್ಲವೇ ಅಥವಾ ಇದು ಅಧಿಕಾರಿಗಳ ನಿರ್ಧಾರವಾ ಎಂದು ಪ್ರಶ್ನಿಸಿದರು.
ಸವಣೂರು ಪ್ರಾ.ಕೃ.ಪ.ಸ.ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಚಂದ್ರಶೇಖರ್ ಪಿ, ನ್ಯಾಯವಾದಿ ಮಹೇಶ್ ಕೆ.ಸವಣೂರು ಅಭಿಪ್ರಾಯ ಮಂಡಿಸಿ, ಈ ಕುರಿತು ವಿಚಾರಕ್ಕೆ ನ್ಯಾಯಾಲಯದಲ್ಲಿ ಪಿ.ಐ.ಎಲ್ ಸಲ್ಲಿಸುವ ಕುರಿತು ನಿರ್ಧರಿಸಲಾಯಿತು.

 

ಸರಕಾರದ ಪ್ರಸ್ತಾವಿತ ಹೊಸ ತಾಲೂಕಾದ ಕಡಬದಲ್ಲಿ ಸವಣೂರು, ಬೆಳಂದೂರು, ಕಾಣಿಯೂರು ಗ್ರಾ.ಪಂ.ವ್ಯಾಪ್ತಿಯ ಗ್ರಾಮಗಳನ್ನು ಸೇರಿಸಲಾಗಿದೆ. ಇದರಲ್ಲಿ ಕಾಣಿಯೂರು ಗ್ರಾ.ಪಂ.ನ ದೋಳ್ಪಾಡಿ ಗ್ರಾಮ ಹೊರತು ಪಡಿಸಿ ಉಳಿದ ಎಲ್ಲಾ ಗ್ರಾಮದವರು ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಸುಮಾರು 40 ರಿಂದ 45ಕಿ.ಮೀ.ನಷ್ಟು ದೂರವಿದ್ದು ಅಲ್ಲಿಗೆ ಸರಿಯಾದ ಸಾರಿಗೆ ವ್ಯವಸ್ಥೆ ಇಲ್ಲದೆ ಬಾಡಿಗೆ ತೆತ್ತು ವಾಹನಗಳಲ್ಲಿ ತೆರಳಬೇಕಾಗುತ್ತದೆ. ಈಗಿರುವ ತಾಲೂಕು ಕೇಂದ್ರವಾದ ಪುತ್ತೂರನ್ನು ತಲುಪಲು 20 ಕಿ.ಮೀ ಪ್ರಯಾಣಿಸಿದರೆ ಸಾಕು ಹಾಗೂ ಇಲ್ಲಿಗೆ ತೆರಳಲು ಸಾರಿಗೆ ವ್ಯವಸ್ಥೆ ಇರುವುದರಿಂದ ಈ ಹಿಂದಿನಂತೆಯೇ ಈ ಗ್ರಾಮಗಳನ್ನು ಪುತ್ತೂರಲ್ಲೇ ಉಳಿಸುವಂತೆ ಸರಕಾರ ಕ್ರಮ ಕೈಗೊಳ್ಳುವಂತೆ ನಿರ್ಣಯ ಕೈಗೊಳ್ಳಲಾಯಿತು. ಈ ವಿಚಾರದ ಕುರಿತು ಸಂಬಂಧಪಟ್ಟ ದಾಖಲೆಗಳನ್ನು ನೀಡಲು ಸವಣೂರು ಗ್ರಾ.ಪಂ.ಆಡಳಿತ ಸಿದ್ಧವಿದೆ ಎಂದು ನಿರ್ಧರಿಸಲಾಯಿತು. ಸಾರ್ವಜನಿಕರ ಸಹಮತದಂತೆ ಈ ವಿಚಾರದ ಕುರಿತು ನ್ಯಾಯಾಲಯದಲ್ಲಿ ಪಿ.ಐ.ಎಲ್ ಹೂಡುವ ಕುರಿತು ನಿರ್ಣಯ ಕೈಗೊಳ್ಳಲಾಯಿತು. ಸಭೆಯಲ್ಲಿ ಸುಮಾರು 800ಕ್ಕೂ ಅಧಿಕ ಮಂದಿ ಪಾಲ್ಗೊಂಡು ಕಡಬ ತಾಲೂಕಿನಿಂದ ಪಾಲ್ತಾಡಿ, ಸವಣೂರು, ಪುಣ್ಚಪ್ಪಾಡಿ ಗ್ರಾಮವನ್ನು ಕೈಬಿಡುವಂತೆ ಸಹಿ ಹಾಕಿದರು. ಅಲ್ಲದೆ ಈ ಕುರಿತು ಹೋರಾಟ ಸಮಿತಿಯನ್ನೂ ಸಾರ್ವಜನಿಕರ ಸಹಮತದಂತೆ ರಚಿಸಲಾಯಿತು. ಸವಣೂರು ವಿದ್ಯಾರಶ್ಮಿ ವಿದ್ಯಾಲಯದ ಸಂಚಾಲಕ ಸವಣೂರು ಕೆ.ಸೀತಾರಾಮ ರೈ ಅವರ ನೇತೃತ್ವದಲ್ಲಿ ತಾ.ಪಂ.ಉಪಾಧ್ಯಕ್ಷೆ ರಾಜೇಶ್ವರಿ ಕೆ, ಸವಣೂರು ಗ್ರಾ.ಪಂ.ಅಧ್ಯಕ್ಷೆ ಇಂದಿರಾ ಬಿ.ಕೆ,ಉಪಾಧ್ಯಕ್ಷ ರವಿಕುಮಾರ್,ಸದಸ್ಯರಾದ ಅಬ್ದುಲ್ ರಝಾಕ್,ಗಿರಿಶಂಕರ ಸುಲಾಯ,ದಿವಾಕರ ಬಂಗೇರ,ಗ್ರಾ.ಪಂ.ಮಾಜಿ ಉಪಾಧ್ಯಕ್ಷ ರಾಕೇಶ್ ರೈ ಕೆಡೆಂಜಿ,ಎಪಿಎಂಸಿ ನಿರ್ದೇಶಕ ದಿನೇಶ್ ಮೆದು,ಬಿ.ಕೆ.ರಮೇಶ್ ಕಲ್ಲೂರಾಯ,ಗಣೇಶ್ ಶೆಟ್ಟಿ ಕುಂಜಾಡಿ,ಸಂಜೀವ ಗೌಡ ,ನ್ಯಾಯವಾದಿಗಳಾದ ಮಹಾಬಲ ಶೆಟ್ಟಿ ಕೊಮ್ಮಂಡ,ಮಹೇಶ್ ಕೆ.ಸವಣೂರು ಅವರನ್ನೊಳಗೊಂಡ ಸಮಿತಿಯನ್ನು ಒಮ್ಮತದ ಅಭಿಪ್ರಾಯದಂತೆ ರಚಿಸಲಾಯಿತು. ಸವಣೂರು ಗ್ರಾ.ಪಂ.ಸದಸ್ಯರು ಸೇರಿದಂತೆ ವಿವಿಧ ಸಂಘ ಸಂಸ್ಥೆಗಳ ಸೇರಿದಂತೆ ಸುಮಾರು 800 ಜನರೂ ಹೆಚ್ಚು ಪಾಲ್ಗೊಂಡಿದ್ದರು.

Also Read  ಯುವತಿ ಕಾಣೆಯಾಗಿದ್ದಾರೆ.

ಸಭೆಯ ಅಧ್ಯಕ್ಷತೆಯನ್ನು ಸವಣೂರು ಗ್ರಾ.ಪಂ.ಅಧ್ಯಕ್ಷೆ ಇಂದಿರಾ ಬಿ.ಕೆ ವಹಿಸಿದ್ದರು. ತಾ.ಪಂ.ಉಪಾಧ್ಯಕ್ಷೆ ರಾಜೇಶ್ವರಿ, ಗ್ರಾ.ಪಂ.ಉಪಾಧ್ಯಕ್ಷ ರವಿಕುಮಾರ್ ಉಪಸ್ಥಿತರಿದ್ದರು. ಪಿಡಿಒ ದೇವಪ್ಪ ಪಿ.ಆರ್ ಸ್ವಾಗತಿಸಿದರು. ಸಿಬಂದಿ ದಯಾನಂದ ಮಾಲೆತ್ತಾರು ವಂದಿಸಿದರು. ಲೆಕ್ಕ ಸಹಾಯಕ ಎ.ಮನ್ಮಥ ಕಾರ್ಯಕ್ರಮ ನಿರೂಪಿಸಿದರು.

error: Content is protected !!
Scroll to Top