(ನ್ಯೂಸ್ ಕಡಬ) newskadaba.com ಸುಬ್ರಹ್ಮಣ್ಯ, ಡಿ.14. ಸ್ನೇಹಿತರೊಂದಿಗೆ ಮೋಜು ಮಾಡಲೆಂದು ಸುಬ್ರಹ್ಮಣ್ಯ ರಕ್ಷಿತಾರಣ್ಯದ ಮುಂಗುಳಿಪಾದೆ ಎಂಬಲ್ಲಿನ ಕುಮಾರಧಾರ ನದಿ ತಟಕ್ಕೆ ತೆರಳಿದ್ದ ಯುವಕನೋರ್ವ ನೀರಿನಲ್ಲಿ ಮುಳುಗಿ ಮೃತಪಟ್ಟ ಘಟನೆ ಬುಧವಾರದಂದು ನಡೆದಿದೆ.
ಮೃತ ಯುವಕನನ್ನು ಕೊಂಬಾರು ಗ್ರಾಮದ ಕಾಯರ್ತಡ್ಕ ನಿವಾಸಿ ಗಣೇಶ ಎಂಬವರ ಪುತ್ರ ಜಯಪ್ರಕಾಶ್ (19) ಎಂದು ಗುರುತಿಸಲಾಗಿದ್ದು, ಈತ ತನ್ನ ಸ್ನೇಹಿತರಾದ ಮಿಥುನ್, ಸತೀಶ್, ಗುರುಪ್ರಸಾದ್, ಪ್ರವೀಣ್, ಅನಿಲ್ ಕುಮಾರ್ ರವರೊಂದಿಗೆ ಮೋಜು ಮಾಡಲೆಂದು ಬುಧವಾರದಂದು ಆಗಮಿಸಿದ್ದರೆನ್ನಲಾಗಿದೆ.
ಮಧ್ಯಾಹ್ನ ಹೊಳೆ ಬದಿಯಲ್ಲಿ ಕೋಳಿ ಪದಾರ್ಥ ಮಾಡಿ ಊಟ ಮಾಡಿದ ನಂತರ ಸ್ನಾನಕ್ಕಿಳಿದಿದ್ದ ಜಯಪ್ರಕಾಶ್ ನೀರಿನಲ್ಲಿ ಕಣ್ಮರೆಯಾಗಿದ್ದಾನೆಂದು ಸ್ನೇಹಿತರು ಸುಬ್ರಹ್ಮಣ್ಯ ಠಾಣೆಗೆ ದೂರು ನೀಡಿದ್ದಾರೆ. ಅದರಂತೆ ಸ್ಥಳಕ್ಕಾಗಮಿಸಿದ ಸುಬ್ರಹ್ಮಣ್ಯ ಪೊಲೀಸರು ಹಾಗೂ ಪುತ್ತೂರು ಅಗ್ನಿಶಾಮಕ ದಳದವರು ಸ್ಥಳೀಯ ಮುಳುಗು ತಜ್ಞರ ನೆರವಿನೊಂದಿಗೆ ಗುರುವಾರ ಮಧ್ಯಾಹ್ನ ಮೃತದೇಹವನ್ನು ಮೇಲಕ್ಕೆತ್ತಲಾಯಿತು.
ಸ್ಥಳಕ್ಕೆ ಪುತ್ತೂರು ತಾ.ಪಂ. ಸದಸ್ಯೆ ಆಶಾ ಲಕ್ಷಣ್, ಎ.ಪಿ.ಎಂ.ಸಿ ನಾಮ ನಿರ್ದೇಶಿತ ಸದಸ್ಯ ರಾಮಕೃಷ್ಣ ಹೊಳ್ಳಾರು, ದಲಿತ ಮುಖಂಡ ಆನಂದ ಮಿತ್ತಬೈಲು ಮೊದಲಾದವರು ಸ್ಥಳಕ್ಕೆ ಭೇಟಿ ನೀಡಿದರು.
ಮೃತ ಜಯಪ್ರಕಾಶನು ಬೇರೆ ಸಮುದಾಯದ ಯುವತಿಯನ್ನು ಪ್ರೀತಿಸುತ್ತಿದ್ದನೆನ್ನಲಾಗಿದ್ದು, ಇದೇ ಕಾರಣಕ್ಕಾಗಿ ಜಯಪ್ರಕಾಶನನ್ನು ವ್ಯವಸ್ಥಿತವಾಗಿ ಕೊಲೆ ನಡೆಸಲಾಗಿದೆ ಎಂಬ ಅನುಮಾನ ಕಾಡುತ್ತಿದೆ ಎಂದು ದಲಿತ ಸಂಘರ್ಷ ಸಮಿತಿಯ ಪುತ್ತೂರು ತಾಲೂಕು ಸಂಚಾಲಕ ಆನಂದ ಮಿತ್ತಬೈಲ್ ಆರೋಪಿಸಿದ್ದಾರೆ.