ಚಲಿಸುತ್ತಿದ್ದ ಶಾಲಾ ಬಸ್ಸಿನ ಚಕ್ರದಡಿಗೆ ಬಿದ್ದು ಬಾಲಕಿ ಮೃತ್ಯು..!!!

(ನ್ಯೂಸ್ ಕಡಬ) newskadaba.com ರಾಮನಗರ, ಜ.10.  ಶಾಲಾ ಬಸ್ ನ ಚಕ್ರಕ್ಕೆ ಸಿಲುಕಿ ವಿದ್ಯಾರ್ಥಿನಿಯೋರ್ವಳು ಮೃತಪಟ್ಟಿರುವ ಘಟನೆ ರಾಮನಗರ ಜಿಲ್ಲೆಯ ಕನಕಪುರ ‌ತಾಲೂಕಿನ ಪಿಚ್ಚನಕೆರೆ ಬಳಿ ವರದಿಯಾಗಿದೆ.

ಮೃತ ವಿದ್ಯಾರ್ಥಿಯನ್ನು ಸಿದ್ದೇನಹಳ್ಳಿ ಗ್ರಾಮದ ನಿವಾಸಿ ಸ್ವಾಮಿ ಎಂಬುವವರ ಪುತ್ರಿ ರಕ್ಷಿತಾ (6) ಎಂದು ಗುರುತಿಸಲಾಗಿದೆ. ಈಕೆ ಶ್ರೀಸಾಯಿ ಇಂಟರ್ ನ್ಯಾಷನಲ್ ಶಾಲೆಯಲ್ಲಿ ಯುಕೆಜಿ ಓದುತ್ತಿದ್ದಳು ಎನ್ನಲಾಗಿದೆ.

 

ಚಾಲಕ ಮತ್ತು ಸಿಬ್ಬಂದಿಗಳ ನಿರ್ಲಕ್ಷ್ಯದಿಂದ ಶಾಲಾ ಬಸ್​ನಿಂದ ವಿದ್ಯಾರ್ಥಿನಿ ಕೆಳಗೆ ಬಿದ್ದಿದ್ದು ನಂತರ ಶಾಲಾ ಬಸ್ ನ ಚಕ್ರದಡಿ ಸಿಲುಕಿ ವಿದ್ಯಾರ್ಥಿನಿ ಮೃತಪಟ್ಟಿದ್ದಾಳೆ ಎಂದು ತಿಳಿದು ಬಂದಿದೆ. ಶಾಲೆ ಮುಗಿಸಿ ಶಾಲಾ ಬಸ್​​​ನಲ್ಲಿ ಮನೆಗೆ ಬರುವಾಗ ರಕ್ಷಿತಾ ಬಸ್​​ ಬಾಗಿಲ ಬಳಿಯ ಸೀಟ್​​ನಲ್ಲಿ ಕುಳಿತಿದ್ದಳು. ಇತರೆ ವಿದ್ಯಾರ್ಥಿಗಳನ್ನು ಇಳಿಸಿ ಮುಂದೆ ಸಾಗಬೇಕಾದರೆ ಶಾಲಾ ಸಿಬ್ಬಂದಿ ಬಸ್ ನ ಬಾಗಿಲು ಹಾಕಿರಲಿಲ್ಲ. ಚಾಲಕ ತಿರುವಿನಲ್ಲಿ ಬ್ರೇಕ್ ಹಾಕಿದ ಸಂದರ್ಭದಲ್ಲಿ ಸೀಟಿನ ಮೇಲೆ ಕುಳಿತಿದ್ದ ವಿದ್ಯಾರ್ಥಿನಿ ಕೆಳಗಿ ಬಿದ್ದಿದ್ದು, ಆಗ ಬಸ್ ನ ಹಿಂದಿನ ಚಕ್ರ ವಿದ್ಯಾರ್ಥಿನಿಯ ತಲೆಯ ಮೇಲೆ ಹತ್ತಿದೆ ಎನ್ನಲಾಗಿದೆ. ಘಟನೆ ನಂತರ ಚಾಲಕ ಹಾಗೂ ಅಯಾ ಪರಾರಿಯಾಗಿದ್ದು. ಕನಕಪುರ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Scroll to Top