(ನ್ಯೂಸ್ ಕಡಬ) newskadaba.com ಬಂಟ್ವಾಳ, ಜ. 01. ಅಂಗಳದಲ್ಲಿ ಒಣಗಲು ಹಾಕಿದ್ದ ಅಡಿಕೆ ಕಳವುಗೈದ ಪ್ರಕರಣಕ್ಕೆ ಸೊತ್ತು ಸಹಿತ ಆರೋಪಿಯನ್ನು ಬಂಟ್ವಾಳ ನಗರ ಪೊಲೀಸರು ಬಂಧಿಸಿದ ಕುರಿತು ವರದಿಯಾಗಿದೆ.
ಬಂಧಿತನನ್ನು ಬಂಟ್ವಾಳ ಬಾಳ್ತಿಲ ಗ್ರಾಮದ ಕಸೆಕೋಡಿಯ ಮಂಜುನಾಥ ನಾಗರಾಜ್ ಭೋವಿ ಎಂದು ಗುರುತಿಸಲಾಗಿದೆ. ಈತ ಕಳವುಗೈದಿದ್ದ 105 ಕೆ.ಜಿ. ಅಡಿಕೆ ಹಾಗೂ ಕೃತ್ಯಕ್ಕೆ ಬಳಸಿದ ಸ್ಕೂಟರ್ ಮತ್ತು ನಗದನ್ನು ವಶಪಡಿಸಲಾಗಿದೆ. ಐವನ್ ತೋರಸ್ ಎಂಬವರು ತಮ್ಮ ಅಡಿಕೆ ತೋಟದ ಮಧ್ಯದಲ್ಲಿನ ಅಂಗಳದಲ್ಲಿ ಅಡಿಕೆಯನ್ನು ಒಣಗಲು ಹಾಕಿದ್ದರು. ಆದರೆ ಅದರಿಂದ ಸುಮಾರು 100-120 ಕೆ.ಜಿ ಅಡಿಕೆ ಕಳವಾಗಿತ್ತು. ಈ ಸಂಬಂಧ ಐವನ್ ತೋಮಸ್ ರವರು ಬಂಟ್ವಾಳ ನಗರ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಪ್ರಕರಣ ದಾಖಲಿಸಿಕೊಂಡ ಪೊಲೀಸರು, ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಬಂಧಿತ ಆರೋಪಿಯು ಮಂಗಳೂರು ನಗರದ ಕೊಣಾಜೆ, ಉಳ್ಳಾಲ ಪೊಲೀಸ್ ಠಾಣೆಗಳಲ್ಲಿ ಮಾತ್ರವಲ್ಲದೆ, ಉತ್ತರ ಕನ್ನಡ ಜಿಲ್ಲೆಯ ಅಂಕೋಲಾ, ಕಾರವಾರ, ಹೊನ್ನಾವರ ಠಾಣಾ ವ್ಯಾಪ್ತಿಯಲ್ಲೂ ಕಳವು ಕೃತ್ಯಗಳಲ್ಲಿ ಭಾಗಿಯಾಗಿದ್ದ ಎಂದು ಪೊಲೀಸರು ತಿಳಿಸಿದ್ದಾರೆ. ಆರೋಪಿಯನ್ನು ನ್ಯಾಯಾಲಯದ ಮುಂದೆ ಹಾಜರುಪಡಿಸಲಾಗಿದ್ದು, ನ್ಯಾಯಾಲಯವು ನ್ಯಾಯಾಂಗ ಬಂಧನ ವಿಧಿಸಿದೆ.