(ನ್ಯೂಸ್ ಕಡಬ) newskadaba.com ಬೆಂಗಳೂರು, ಡಿ. 31. ಕೋಲಾರ ಸಮೀಪದ ಕಾಜಿಕಲ್ಲಹಳ್ಳಿ ಗ್ರಾಮದಲ್ಲಿ ರಾಜ್ಯದ ಮೊಟ್ಟಮೊದಲ ಆನೆಗಳ ಆರೈಕೆ ಕೇಂದ್ರವನ್ನು ಆರಂಭಿಸಲಾಗಿದ್ದು, ಶೀಘ್ರದಲ್ಲಿಯೇ ಪ್ರವಾಸಿಗರ ಭೇಟಿಗೆ ಅವಕಾಶ ನೀಡಲಾಗುತ್ತದೆ ಎಂದು ತಿಳಿದುಬಂದಿದೆ.
ಲಕ್ಷ್ಮೀಸಾಗರ ಮೀಸಲು ಅರಣ್ಯದಲ್ಲಿ 25 ಎಕರೆ ಪ್ರದೇಶದಲ್ಲಿ ಆನೆಗಳ ಆರೈಕ ಕೇಂದ್ರವನ್ನು ಸ್ಥಾಪಿಸಲಾಗಿದ್ದು, ಪ್ರಸ್ತುತ ಈ ಕೇಂದ್ರದಲ್ಲಿ ಸ್ಥೂಲಕಾಯ, ಮಧುಮೇಹ ಮತ್ತು ಗಾಯಗಳಿಗಾಗಿ ನಾಲ್ಕು ಆನೆಗಳು ಚಿಕಿತ್ಸೆ ಪಡೆದುಕೊಳ್ಳುತ್ತಿವೆ. ಆನೆಗಳ ಆರೈಕೆಗೆ ಕೇಂದ್ರ ಆರಂಭಿಸಿರುವ ಸರ್ಕಾರ ಮುಂದಿನ ದಿನಗಳಲ್ಲಿ ಈ ಕೇಂದ್ರಕ್ಕೆ ಪ್ರವಾಸಿಗರ ಭೇಟಿಗೆ ಅವಕಾಶ ನೀಡಲು ಹಾಗೂ ಪ್ರಾಣಿಗಳಿಗೆ ಆಹಾರ ನೀಡಲು ಅವಕಾಶ ಮಾಡಿಕೊಡುವತ್ತ ಕೆಲಸ ಮಾಡುತ್ತಿದೆ ಎನ್ನಲಾಗಿದೆ. ಪ್ರಸ್ತುತ ಕೇಂದ್ರದಲ್ಲಿ ಚಿಕಿತ್ಸೆ ಪಡೆಯುತ್ತಿರುವ ಆನೆಗಳು, ತಮಿಳುನಾಡು, ಕೇರಳ, ಗೋವಾ ಮತ್ತು ನಂಜನಗೂಡಿನಿಂದ ಬಂದ ಆನೆಗಳಾಗಿವೆ ಎಂದು ತಿಳಿದುಬಂದಿದೆ. ನಾಲ್ಕು ಆನೆಗಳ ಪೈಕಿ ಮೂರು ಆನೆಗಳು, ಮಧುಮೇಹ, ಗಾಯ ಹಾಗೂ ಕಾಲುಗಳು ಊದಿಕೊಂಡ ಹಿನ್ನೆಲೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಒಂದು ಆನೆ ಸ್ಥೂಲಕಾಯತೆಗೆ ಚಿಕಿತ್ಸೆ ಪಡೆಯುತ್ತಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.