(ನ್ಯೂಸ್ ಕಡಬ) newskadaba.com ಕೃಷ್ಣಗಿರಿ, ಡಿ. 28. ನಾಪತ್ತೆಯಾಗಿದ್ದ ಪತಿಯನ್ನು ಹತ್ಯೆಗೈದ ಪ್ರಕರಣಕ್ಕೆ ಸಂಬಂಧಿಸಿದಂತೆ ಮಹಿಳಾ ವಿಶೇಷ ಸಬ್‌ಇನ್‌ಸ್ಪೆಕ್ಟರ್ ಸೇರಿ ನಾಲ್ವರನ್ನು ಬಂಧಿಸಿದ ಘಟನೆ ತಮಿಳುನಾಡಿನ ಕೃಷ್ಣಗಿರಿ ಎಂಬಲ್ಲಿ ವರದಿಯಾಗಿದೆ.
ಬಂಧಿತ ಆರೋಪಿಗಳನ್ನು ಸಿಂಗಾರಪೇಟೆ ಪೊಲೀಸ್ ಠಾಣೆಯ ವಿಶೇಷ ಸಬ್ ಇನ್ಸ್‌ಪೆಕ್ಟರ್ ಚಿತ್ರಾ(38), ಸರೋಜಾ, ವಿಜಯ ಕುಮಾರ್ ಮತ್ತು ರಾಜ ಪಾಂಡಿಯನ್ ಎಂದು ಗುರುತಿಸಲಾಗಿದೆ. ಎಸ್ಐ ಚಿತ್ರಾ ಮದುವೆಯಾಗಿ ಕೆಲವು ವರ್ಷಗಳಿಂದ ತನ್ನಿಂದ ದೂರ ಉಳಿದಿದ್ದು, ಬಳಿಕ ತನ್ನ ಕಾರು ಚಾಲಕನ ಜೊತೆ ವಿವಾಹೇತರ ಸಂಬಂಧ ಹೊಂದಿದ್ದರು. ಇದು ಪತಿ ಸೆಂಥಿಲ್ಗೆ ತಿಳಿದು, ಕಾರು ಚಾಲಕನ ಜೊತೆಗಿನ ಸಂಬಂಧವನ್ನು ಮುಂದುವರಿಸದಂತೆ ಎಚ್ಚರಿಕೆ ನೀಡಿದ್ದನು. ಆದರೂ ಚಿತ್ರಾ ಸಂಬಂಧ ಮುಂದುವರಿಸಿದ್ದರು. ಚಿತ್ರಾ ಅವರ ಪತಿ ಸೆಂಥಲ್ ಅವರು, ಕಳೆದ ಸೆಪ್ಟೆಂಬರ್‌ನಲ್ಲಿ ನಾಪತ್ತೆಯಾಗಿದ್ದರು. ಸೆಂಥಿಲ್ ನಾಪತ್ತೆಯಾದ ನಂತರ, ಅವರ ತಾಯಿ ಅ. 31 ರಂದು ಕಲ್ಲಾವಿ ಪೊಲೀಸ್ ಮತ್ತು ಜಿಲ್ಲಾಧಿಕಾರಿ ಕಚೇರಿಗೆ ನಾಪತ್ತೆ ದೂರು ನೀಡಿದ್ದರು. ಇತ್ತ ಚಿತ್ರಾ, ಹಸ್ತಸಾಮುದ್ರಿಕ ಸರೋಜಾ ಎಂಬವರನ್ನು ಭೇಟಿಯಾಗಿ, ತಮ್ಮ ಕುಟುಂಬದ ಸಮಸ್ಯೆಗಳನ್ನು ಹೇಳಿಕೊಂಡಿದ್ದು, ಈ ವೇಳೆ ಸರೋಜಾ, ಪತಿಯನ್ನು ಕೊಲೆ ಮಾಡುವಂತೆ ಸೂಚಿಸಿದ್ದಳು. ಅಲ್ಲದೇ ಗಂಡನ ಕೊಲೆಗೆ ಆಳುಗಳನ್ನು ಕಳುಹಿಸುವುದಾಗಿ ಹೇಳಿ 10 ಲಕ್ಷ ರೂಪಾಯಿಗೆ ಬೇಡಿಕೆ ಇಟ್ಟಿದ್ದಳು. ಅದರಂತೆ ಸೆಪ್ಟೆಂಬರ್ 16 ರಂದು ಚಿತ್ರಾ ತನ್ನ ಪತಿಯನ್ನು ರೌಡಿಗಳ ಸಹಾಯದಿಂದ ಕೊಲೆ ಮಾಡಿ ಮೃತದೇಹವನ್ನು ಉತ್ತಂಗರೈ ಎಂಬಲ್ಲಿ ಬಾವಿಗೆ ಎಸೆದಿದ್ದಳು.