(ನ್ಯೂಸ್ ಕಡಬ) newskadaba.com ಮಂಗಳೂರು, ಡಿ. 22. ಕರಾವಳಿಯ ಜನಪದ ಕ್ರೀಡೆ ಕಂಬಳದ ಮೇಲೆ ಮತ್ತೆ ನಿಷೇಧದ ತೂಗುಗತ್ತಿ ನೇತಾಡುತ್ತಿದೆ. ಪ್ರಾಣಿ ದಯಾ ಸಂಘದವರು ಕಂಬಳ ಕೂಟ ನಿಷೇಧಿಸುವಂತೆ ಮತ್ತೆ ಸುಪ್ರಿಂ ಕೋರ್ಟ್ ಮೊರೆ ಹೋಗಿದ್ದು, ತೀರ್ಪು ಬರೋದಕ್ಕಷ್ಟೆ ಬಾಕಿಯಿದೆ.
ಈ ಬಾರಿಯ ಕಂಬಳದ ಋತು ಆರಂಭವಾಗಿದ್ದು ಮತ್ತೆ ಸಂಕಷ್ಟ ಎದುರಾಗುತ್ತಾ ಎಂಬ ಆತಂಕ ಕಂಬಳ ಅಭಿಮಾನಿಗಳಲ್ಲಿದೆ. ಕಂಬಳ ಕರಾವಳಿಯ ಪ್ರಸಿದ್ದ ಜನಪದ ಕ್ರೀಡೆ. ಇತ್ತೀಚೆಗಷ್ಟೆ ತೆರೆಕಂಡ ಕಾಂತಾರ ಸಿನಿಮಾದಲ್ಲಿಯು ಕಂಬಳದ ದೃಶ್ಯ ಚಿತ್ರೀಕರಿಸಲಾಗಿದ್ದು ವಿಶ್ವದಾದ್ಯಂತ ಕಂಬಳ ಕ್ರೀಡೆ ಪ್ರಚಾರ ಪಡೆದಿದೆ. ಆದರೆ ಕಂಬಳದಲ್ಲಿ ಪ್ರಾಣಿ ಹಿಂಸೆ ಮಾಡಲಾಗುತ್ತಿದೆ ಎಂಬುವುದು ಪ್ರಾಣಿ ದಯಾ ಸಂಘದವರ ಆರೋಪ. ಈ ಹಿಂದೆ ಕಂಬಳಕ್ಕೆ ನಿಷೇಧದ ಆತಂಕ ಎದುರಾದಾಗ ರಾಜ್ಯ ಸರ್ಕಾರ ಕಾನೂನು ತಿದ್ದುಪಡಿ ಮಾಡಿ ಹೊರಡಿಸಿದ್ದ ಸುಗ್ರೀವಾಜ್ಞೆಗೆ ರಾಷ್ಟ್ರಪತಿ ಅಂಕಿತ ಹಾಕುವ ಮೂಲಕ ಕಂಬಳ ಕ್ರೀಡೆಗೆ ಅವಕಾಶ ಮಾಡಿಕೊಟ್ಟಿದ್ದರು. ಬಳಿಕ ಕರಾವಳಿಯಲ್ಲಿ ನಿರಾತಂಕವಾಗಿ ಕಂಬಳ ಕ್ರೀಡೆ ನಡೆಯುತಿತ್ತು. ಆದರೆ ಇದೀಗ ಮತ್ತೆ ಪ್ರಾಣಿ ದಯಾ ಸಂಘ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದು ಕಂಬಳವನ್ನು ನಿಷೇಧಿಸುವಂತೆ ಮೇಲ್ಮನವಿ ಸಲ್ಲಿಸಿದ್ದಾರೆ.