(ನ್ಯೂಸ್ ಕಡಬ) newskadaba.com ಮಂಗಳೂರು, ಡಿ. 21. ಶಾಲಾ ವಿದ್ಯಾರ್ಥಿಗಳಲ್ಲಿ ಸೋಲು-ಗೆಲುವನ್ನು ಸಮಾನವಾಗಿ ಸ್ವೀಕರಿಸುವ ಮನೋಭಾವವನ್ನು ಶಿಕ್ಷಕರು ಬಿತ್ತಬೇಕು ಎಂದು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ. ಕುಮಾರ್ ಅವರ ನಗರದ ಜಿಲ್ಲಾ ಪಂಚಾಯತ್ ನ ನೇತ್ರಾವತಿ ಸಭಾಂಗಣದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಮತ್ತು ಸಾರ್ವಜನಿಕ ಶಿಕ್ಷಣ ಇಲಾಖೆ ವತಿಯಿಂದ ಜಿಲ್ಲೆಯ ಪ್ರೌಢಶಾಲಾ ಮಕ್ಕಳ – ಮಾನಸಿಕ ಆರೋಗ್ಯ ಸಂರಕ್ಷಣಾ ಅಭಿಯಾನ `ಮನೋಸ್ಥೈರ್ಯ’ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಎಳವೆಯಲ್ಲಿಯೇ ಮಕ್ಕಳಿಗೆ ಕಷ್ಟಗಳನ್ನು ಎದುರಿಸುವ ರೀತಿಯನ್ನು ತಿಳಿಸಿಕೊಡಬೇಕು. ಅವರಲ್ಲಿ ಕಂಡುಬರುವ ಮಾನಸಿಕ ತುಮುಲತೆ ಹೋಗಲಾಡಿಸಿ, ಸಕಾರಾತ್ಮಕ ಚಿಂತನೆ ಮೂಡಿಸಬೇಕು. ಇಂದು ತಂತ್ರಜ್ಞಾನ ಅವಶ್ಯಕತೆಯ ಜತೆಗೆ ಮಾರಕವೂ ಆಗಿದೆ. ವ್ಯವಸ್ಥೆ, ಕುಟುಂಬ, ಪರಿಸರ ಮಕ್ಕಳಿಗೆ ಸೂಕ್ತದಾರಿ ತೋರಿಸುವಲ್ಲಿ ವಿಫಲವಾಗಿರುವುದು ಮಕ್ಕಳು ಮಾನಸಿಕ ಖಿನ್ನತೆಗೆ ಒಳಗಾಗಲು ಕಾರಣವಾಗಿದೆ ಎಂದರು. ಮಕ್ಕಳಲ್ಲಿ ಬದುಕಿನಲ್ಲಿ ನಡೆಯುವ ಘಟನೆಗಳನ್ನು ಯಥಾಸ್ಥಿತಿ ಸ್ವೀಕರಿಸುವ ಮನಃಸ್ಥಿತಿ ಕಡಿಮೆಯಾಗಿದೆ. ಬದುಕಿನೊಂದಿಗೆ ಬದುಕುವ ರೀತಿಯನ್ನು ತಿಳಿಸಿಕೊಡುವ ಉದ್ದೇಶದಿಂದ `ಮನೋಸ್ಥೈರ್ಯ’ ಕಾರ್ಯಕ್ರಮ ಜಾರಿಗೆ ತರಲಾಗಿದೆ. ಮೌಲ್ಯಯುತ ಮತ್ತು ನೈತಿಕ ಶಿಕ್ಷಣ ಹಣ ಕೊಟ್ಟು ಕೊಂಡುಕೊಳ್ಳಲು ಸಾಧ್ಯವಿಲ್ಲ. ಶಿಕ್ಷಕರಿಂದ ಈ ಶಿಕ್ಷಣ ನೀಡಲು ಸಾಧ್ಯವಿದೆ ಎಂದರು. ಸಂಪನ್ಮೂಲ ವ್ಯಕ್ತಿಗಳಾಗಿ ಫಾದರ್ ಮುಲ್ಲರ್ ಮೆಡಿಕಲ್ ಕಾಲೇಜಿನ ಮನಃಶಾಸ್ತ್ರ ವಿಭಾಗದ ಪ್ರಾಧ್ಯಾಪಕಿ ಡಾ. ಅರುಣಾ ಯಡಿಯಾಳ್, ಜಿಲ್ಲಾ ಮಾನಸಿಕ ಆರೋಗ್ಯ ವಿಭಾಗದ ಮನಶಾಸ್ತ್ರಜ್ಞೆ ಡಾ. ಸುಪ್ರೀತಾ, ಅಧಿಕಾರಿ ಡಾ. ಸುದರ್ಶನ್ ಉಪಸ್ಥಿತರಿದ್ದರು. ಜಿಲ್ಲೆಯ ಎಲ್ಲ ಶಾಲೆಗಳ ಆಯ್ದ ಶಿಕ್ಷಕರು ಭಾಗವಹಿಸಿದ್ದರು. ಜಿಲ್ಲಾ ಆರೋಗ್ಯಾಧಿಕಾರಿ ಡಾ.ಕಿಶೋರ್ ಕುಮಾರ್ ಅವರು ಸ್ವಾಗತಿಸಿದರು, ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕ ಕೆ.ಸುಧಾಕರ್ ವಂದಿಸಿದರು. ಮಂಜುಳಾ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.