ನ್ಯೂಸ್ ಕಡಬ) newskadaba.com, ಬೆಂಗಳೂರು ಡಿ. 19 ವರ್ತೂರು ಕೆರೆ ಸೇತುವೆ ಮೇಲೆ ನಿಲ್ಲುತ್ತಿರುವ ಬಿಬಿಎಂಪಿ ಕಸದ ಲಾರಿಗಳಿಂದ ಕೆರೆ ನೀರಿಗೆ ವಿಷಕಾರಿ ದ್ರವ ಸೇರುತ್ತಿರುವುದು ಕಂಡು ಬಂದಿದೆ. ವಿಷಕಾರಿ ದ್ರವ ಕೆರೆ ನೀರಿಗೆ ಸೇರುತ್ತಿರುವ ಸಂಬಂಧ ಈಗಾಗಲೇ ಹಲವು ಬಾರಿ ಅಧಿಕಾರಿಗಳಿಗೆ ದೂರು ನೀಡಲಾಗಿದೆ. ವಾರ್ಡ್ ಸಮಿತಿ ಸಭೆಗಳಲ್ಲಿ ಈ ಬಗ್ಗೆ ಪ್ರಸ್ತಾಪಿಸಿದರೂ ಸಮಸ್ಯೆ ಬಗೆಹರಿದಿಲ್ಲ ಎಂದು ಇಲ್ಲಿನ ನಿವಾಸಿಗಳು ಬೇಸರ ವ್ಯಕ್ತಪಡಿಸಿದ್ದಾರೆ.
ವರ್ತೂರಿನ ನಿವಾಸಿ, ವರ್ತೂರು ರೈಸಿಂಗ್ ಸದಸ್ಯ ಜಗದೀಶ್ ರೆಡ್ಡಿ ಮಾತನಾಡಿ, ಈ ಸಮಸ್ಯೆ ಆರಂಭವಾಗಿ 9 ತಿಂಗಳುಗಳಾಗಿದೆ. ಟ್ರಕ್ ಅನ್ನು ರಾತ್ರಿಯಲ್ಲಿ ನಿಲ್ಲಿಸಲಾಗುತ್ತಿದ್ದು, ಬೆಳಿಗ್ಗೆ ವರೆಗೂ ಸೇತುವೆಯ ಮೇಲೆಯೇ ಇರಿಸಲಾಗುತ್ತದೆ, ಈ ಸಮಯದಲ್ಲಿ ಸೋರಿಕೆಯಾಗುವ ಎಲ್ಲಾ ಕೊಳಕು ದ್ರವವು ರಸ್ತೆಗೆ ಬಂದು ಕೆರೆಗೆ ಸೇರುತ್ತಿದೆ ಎಂದು ಹೇಳಿದ್ದಾರೆ.
ಘನತ್ಯಾಜ್ಯ ನಿರ್ವಹಣೆಯ ನಿಗದಿತ ನಿಯಮಗಳ ಪ್ರಕಾರ, ಕಾಂಪ್ಯಾಕ್ಟರ್‌ಗಳು ಮತ್ತು ಟ್ರಕ್‌ಗಳನ್ನು ಸುರಕ್ಷಿತ ಸ್ಥಳಗಳಲ್ಲಿ ಮತ್ತು ಕೆರೆಗಳು, ವಸತಿ ಪ್ರದೇಶಗಳು, ಶಾಲೆಗಳು ಮತ್ತು ಆಸ್ಪತ್ರೆಗಳಿಂದ ದೂರದಲ್ಲಿ ನಿಲ್ಲಿಸಬೇಕೆಂದು ತಿಳಿಸಲಾಗಿದೆ. ಆಟೊ ಟಿಪ್ಪರ್‌ಗಳು ‘ಟ್ರಾನ್ಸ್‌ಫರ್ ಪಾಯಿಂಟ್’ ಎಂಬ ನಿಗದಿತ ಸ್ಥಳಕ್ಕೆ ಬಂದು ಸಂಗ್ರಹವಾದ ತ್ಯಾಜ್ಯವನ್ನು ಖಾಲಿ ಮಾಡಬೇಕು.
ತ್ಯಾಜ್ಯ ಲಾರಿಗಳು ಸ್ಥಳವನ್ನು ತೊರೆದ ನಂತರ, ಸೋಂಕು ಹರಡುವುದನ್ನು ತಡೆಯಲು ಆ ಪ್ರದೇಶಕ್ಕೆ ಬ್ಲೀಚಿಂಗ್ ಪೌಡರ್‌ನಂತಹ ರಾಸಾಯನಿಕಗಳಿಂದ ಸ್ವಚ್ಛಗೊಳಿಸಬೇಕು. ಆದರೆ, ಈ ಪ್ರಕ್ರಿಯೆಗಳು ಎಲ್ಲಿಯೂ ನಡೆಯುತ್ತಿಲ್ಲ. ಈ ಸ್ವಚ್ಛತೆಗಾಗಿ ಪ್ರತಿ ತಿಂಗಳು ರೂ.1.5 ಹಣವನ್ನು ಮಂಜೂರು ಮಾಡಲಾಗುತ್ತಿದೆ. ಆದರೆ, ಆದಾವುದೂ ಆಗುತ್ತಿಲ್ಲ ಎಂದು ರೆಡ್ಡಿ ತಿಳಿಸಿದ್ದಾರೆ.