ಪುತ್ತೂರು: ತಮ್ಮನ ಕೊಲೆಗೈದು ಪರಾರಿಯಾಗಿದ್ದ ಆರೋಪಿ ಅರೆಸ್ಟ್

(ನ್ಯೂಸ್ ಕಡಬ) newskadaba.com ಪುತ್ತೂರು, ಡಿ. 07. ಕೆಮ್ಮಿಂಜೆ ಗ್ರಾಮದ ಮುಕ್ರಂಪಾಡಿಯಲ್ಲಿ ನಿರ್ಮಾಣ ಹಂತದ ಕಟ್ಟಡದ ಶೆಡ್ ನಲ್ಲಿ ಒಡಹುಟ್ಟಿದ ತಮ್ಮನನ್ನು ಕೊಲೆಗೈದು ಪರಾರಿಯಾಗಿದ್ದ ಆರೋಪಿ ಅಣ್ಣನನ್ನು ಪುತ್ತೂರು ನಗರ ಠಾಣಾ ಪೊಲೀಸರು ಹಾವೇರಿ ಜಿಲ್ಲೆಯಲ್ಲಿ ಬಂಧಿಸಿದ್ದಾರೆ.

ಬಂಧಿತ ಆರೋಪಿಯನ್ನು ನಿಂಗನ ಗೌಡ ಯಾನೆ ನಿಂಗಪ್ಪ ಗೌಡ ಎಂದು ಗುರುತಿಸಲಾಗಿದೆ. ತಮ್ಮ ಮಹಾದೇವ ಕೊಲೆಗೀಡಾದ ದುರ್ದೈವಿ. ಮುಕ್ರಂಪಾಡಿಯ ನಿರ್ಮಾಣ ಹಂತದ ಕಟ್ಟವೊಂದರಲ್ಲಿ ಗಾರೆ ಕೆಲಸ ಮಾಡುತ್ತಿದ್ದ ಇವರ ನಡುವೆ, ಡಿ. 01ರಂದು ರಾತ್ರಿ ಹೊತ್ತು ಕಟ್ಟಡದ ಶೆಡ್ ನಲ್ಲಿ ಹಣಕಾಸಿನ ವಿಚಾರವಾಗಿ ಮಾತಿನ ಚಕಮಕಿ ನಡೆದು ನಿಂಗನ ಗೌಡ ರವರು ತಮ್ಮ ಮಹಾದೇವ ಅವರ ತಲೆಗೆ ರಾಡ್ ನಲ್ಲಿ ಹಲ್ಲೆ ನಡೆಸಿದ್ದರು. ಹಲ್ಲೆಯಿಂದ ಗಂಭೀರ ಗಾಯಗೊಂಡ ಮಹಾದೇವ ಅವರು ಮೃತಪಟ್ಟಿದ್ದು, ಇತ್ತ ಆರೋಪಿ ಅಣ್ಣ ನಿಂಗನ ಗೌಡ ಸ್ಥಳದಿಂದ ಪರಾರಿಯಾಗಿದ್ದರು. ಈ ಕುರಿತು ಪುತ್ತೂರು ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಇದಕ್ಕೆ ಸಂಬಂಧಿಸಿ ಆರೋಪಿಯ ಪತ್ತೆಗಾಗಿ ದ.ಕ ಜಿಲ್ಲಾ ಪೊಲೀಸ್ ಅಧೀಕ್ಷಕ ಋಷಿಕೇಶ್ ಸೋನಾವಣೆ, ಹೆಚ್ಚುವರಿ ಅಧೀಕ್ಷಕ ಕುಮಾರಚಂದ್ರ ಅವರ ನಿರ್ದೇಶನದಲ್ಲಿ ಪುತ್ತೂರು ಡಿವೈಎಸ್ಪಿ ವೀರಯ್ಯ ಹಿರೇಮಠ್ ಅವರ ಮಾರ್ಗದರ್ಶನದಲ್ಲಿ ತನಿಖೆ ನಡೆಸಿದ ವಿಶೇಷ ಪೊಲೀಸರ ತಂಡವು ಕಾರ್ಯಾಚರಣೆ ನಡೆಸಿ, ಡಿ. 06ರಂದು ಹಾವೇರಿ ಜಿಲ್ಲೆಯ ಕನಕಾಪುರ ಎಂಬಲ್ಲಿ ಆರೋಪಿಯನ್ನು ವಶಕ್ಕೆ ಪಡೆದು, ಠಾಣೆಗೆ ತಂದು ಬಳಿಕ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ. ನ್ಯಾಯಾಲಯವು ಆರೋಪಿಗೆ ನ್ಯಾಯಾಂಗ ಬಂಧನ ವಿಧಿಸಿದೆ.

error: Content is protected !!
Scroll to Top