(ನ್ಯೂಸ್ ಕಡಬ) newskadaba.com ಮಂಗಳೂರು, ಸೆ. 02. ಪ್ರಧಾನಿ ನರೇಂದ್ರ ಮೋದಿಯವರು ಶುಕ್ರವಾರದಂದು ಮಂಗಳೂರಿಗೆ ಆಗಮಿಸಲಿದ್ದು ಸ್ವಾಗತಕ್ಕೆ ಕರಾವಳಿ ನಗರ ಸಜ್ಜುಗೊಂಡಿದೆ.
ಈ ಸಂದರ್ಭದಲ್ಲಿ ಪ್ರಧಾನಿಯವರು ನವಮಂಗಳೂರು ಬಂದರು ಪ್ರಾಧಿಕಾರ ಹಾಗೂ ಎಂಆರ್‌ಪಿಎಲ್ ಒಳಗೊಂಡಂತೆ 3,800 ಕೋ.ರೂ. ಮೊತ್ತದ ವಿವಿಧ ಯೋಜನೆಗಳ ಲೋಕಾರ್ಪಣೆ ಹಾಗೂ ಶಿಲಾನ್ಯಾಸ ನೆರವೇರಿಸಿ ಸಮಾವೇಶದಲ್ಲಿ ಮಾತನಾಡುವರು. ಪ್ರಧಾನಿಯವರ ಕಾರ್ಯಕ್ರಮಕ್ಕೆ ಜಿಲ್ಲಾಡಳಿತ ಹಾಗೂ ನವಮಂಗಳೂರು ಬಂದರು ಪ್ರಾಧಿಕಾರದಿಂದ ಸರ್ವಸಿದ್ಧತೆ ನಡೆದಿದ್ದು, ಸಮಾವೇಶಕ್ಕೆ ಗೋಲ್ಡ್‌ಫಿಂಚ್ ಸಿಟಿ ಮೈದಾನವು ಸಜ್ಜುಗೊಂಡಿದೆ. ಪ್ರಧಾನಿಯವರ ಭೇಟಿ ಹಿನ್ನೆಲೆ ಎನ್‌ಎಂಪಿಎ ಪ್ರದೇಶ, ಸಮಾವೇಶ ತಾಣ ಹಾಗೂ ಅದರ ಸುತ್ತ ಬಿಗಿ ಬಂದೋಬಸ್ತ್ ಆಯೋಜಿಸಲಾಗಿದೆ. ಇಂದು ಮಧ್ಯಾಹ್ನ 1 ಗಂಟೆಗೆ ಕೊಚ್ಚಿಯಿಂದ ಮಂಗಳೂರು ವಿಮಾನ ನಿಲ್ದಾಣಕ್ಕೆ ಪ್ರಧಾನಿ ನರೇಂದ್ರ ಮೋದಿ ಆಗಮಿಸಲಿದ್ದು, ರಾಜ್ಯಪಾಲರು ಹಾಗೂ ಮುಖ್ಯಮಂತ್ರಿಯವರು ಬರಮಾಡಿಕೊಳ್ಳುವರು. ಬಳಿಕ ಹೆಲಿಕಾಪ್ಟರ್ ಮೂಲಕ ಎನ್‌ಎಂ ಪಿಎಗೆ ಬಂದು, ಅಲ್ಲಿಂದರಸ್ತೆ ಮಾರ್ಗವಾಗಿ ಸಮಾವೇಶ ಸ್ಥಳಕ್ಕೆ ಆಗಮಿಸುವರು. ಬಳಿಕ ಸಭಾಂಗಣದ ವೇದಿಕೆಯಲ್ಲಿ ವಿವಿಧ ಯೋಜನೆಗಳ ಲೋಕಾರ್ಪಣೆ ಹಾಗೂ ಶಿಲಾನ್ಯಾಸ ನೆರವೇರಿಸಿ ಸಮಾವೇಶವನ್ನುದ್ದೇಶಿಸಿ ಮಾತನಾಡುವರು.
ಮೊದಲ ಬಾರಿಗೆ ದೇಶೀಯವಾಗಿ ಕೊಚ್ಚಿ ಶಿಪ್‌ಯಾರ್ಡ್ ನಲ್ಲಿ ನಿರ್ಮಿಸಲಾದ ವಿಮಾನ ವಾಹಕ ನೌಕೆ “ಐಎನ್‌ಎಸ್ ವಿಕ್ರಾಂತ್’ ಅನ್ನು ಪ್ರಧಾನಿ ಮೋದಿ ಶುಕ್ರವಾರದಂದು ಸೇನೆಗೆ ಅರ್ಪಿಸುವರು. ಭಾರತೀಯ ನೌಕಾಪಡೆಯ ಹೊಸ ನಿಶಾನ್(ಧ್ವಜ)ವನ್ನೂ ಅನಾವರಣ ಮಾಡುವರು. ಗುರುವಾರವೇ ಪ್ರಧಾನಿ ಕೇರಳಕ್ಕೆ ಆಗಮಿಸಿ ಆದಿಶಂಕರಾಚಾರ್ಯರ ಜನ್ಮ ಸ್ಥಳ ಕಾಲಡಿಗೆ ಭೇಟಿ ನೀಡಿದರು. ಕೇರಳದ ಸಾಂಪ್ರದಾಯಿಕ ದಿರಿಸಿನಲ್ಲಿದ್ದ ಮೋದಿಯವರನ್ನು ದೇಗುಲದ ಆಡಳಿತಾಧಿಕಾರಿಗಳು ಸ್ವಾಗತಿಸಿದರು. ಅಲ್ಲಿ ಮೆಟ್ರೋ ಸೇರಿದಂತೆ ವಿವಿಧ ಯೋಜನೆಗಳಿಗೆ ಚಾಲನೆ ನೀಡಿದರು.