(ನ್ಯೂಸ್ ಕಡಬ) newskadaba.com ಉಪ್ಪಿನಂಗಡಿ, ಆ. 26. ಸರಕಾರಿ ಮೀಸಲು ರಕ್ಷಿತಾರಣ್ಯದಿಂದ ಮರ ಕಡಿದು ಅಲ್ಲೇ ತುಂಡುಗಳನ್ನಾಗಿ ಮಾಡಿ ಸಾಗಾಟಕ್ಕೆ ಸಿದ್ಧತೆ ಮಾಡಿಕೊಂಡಿದ್ದ ಪ್ರಕರಣವನ್ನು ಪತ್ತೆಹಚ್ಚಿದ ಉಪ್ಪಿನಂಗಡಿ ವಲಯ ಅರಣ್ಯ ಇಲಾಖಾ ಸಿಬ್ಬಂದಿಗಳು, ಬೆಳೆಬಾಳುವ ದಿಮ್ಮಿ ಸಹಿತ ಮೂವರು ಆರೋಪಿಗಳನ್ನು ವಶಕ್ಕೆ ಪಡೆದ ಘಟನೆ ವರದಿಯಾಗಿದೆ.
ಬಂಧಿತ ಆರೋಪಿಗಳನ್ನು ಪದ್ಮುಂಜ ನಿವಾಸಿಗಳಾದ ದಿನೇಶ್, ಉಮೇಶ್ ಗೌಡ ಹಾಗೂ ಹೇಮಂತ್ ಎಂದು ಗುರುತಿಸಲಾಗಿದೆ. ಬಂಧಿತರು ಕಣಿಯೂರು ಗ್ರಾಮದ ಮಲೆಂಗಲ್ಲು ಎಂಬಲ್ಲಿರುವ ಸರಕಾರಿ ಮೀಸಲು ರಕ್ಷಿತಾರಣ್ಯದಿಂದ ಬೃಹತ್ ಗಾತ್ರದ ಕಲ್ಬಾಜಿ ಮರವನ್ನು ಕಡಿಯುತ್ತಿರುವ ಬಗ್ಗೆ ಉಪ್ಪಿನಂಗಡಿ ವಲಯ ಅರಣ್ಯಾಧಿಕಾರಿ ಮಧುಸೂದನ್ರವರಿಗೆ ಬಂದ ಖಚಿತ ಮಾಹಿತಿಯ ಮೇರೆಗೆ ದಾಳಿ ನಡೆಸಿದ ಅರಣ್ಯ ಸಿಬ್ಬಂದಿ ಮರದ ದಿಮ್ಮಿ ಸಮೇತ ಮೂವರನ್ನು ಬಂಧಿಸಿದ್ದಾರೆ. ಆರೋಪಿಗಳು ಮರವನ್ನು ಯಂತ್ರದ ಮೂಲಕ ಉರುಳಿಸಿ, ಬಳಿಕ ಕಾಡಿನ ಒಳಗಡೆ ಅವುಗಳನ್ನು ದಿಮ್ಮಿಗಳನ್ನಾಗಿ ಮಾಡಿ ಸಾಗಾಟ ಮಾಡಲು ತಯಾರಿ ನಡೆಸಿಕೊಂಡಿದ್ದು, ದಾಳಿ ನಡೆಸಿದ ಅರಣ್ಯ ಇಲಾಖೆ ಅಧಿಕಾರಿಗಳು ಯಂತ್ರಗಳ ಸಹಿತ ಮರಗಳ ದಿಮ್ಮಿಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ.