(ನ್ಯೂಸ್ ಕಡಬ) newskadaba.com ಮಂಗಳೂರು, ಆ. 14. ದಕ್ಷಿಣ ಕನ್ನಡದ ಜಿಲ್ಲಾಧಿಕಾರಿ ಡಾ. ರಾಜೇಂದ್ರ ಕೆವಿ ಅಂಗಾಂಗ ದಾನ ಮಾಡುವುದಾಗಿ ಘೋಷಿಸಿದ್ದಾರೆ. ಈ ಮೂಲಕ ಅಂಗಾಂಗ ದಾನ ಮಾಡಲು ಇತರರಿಗೂ ಸ್ಪೂರ್ತಿಯಾಗಿದ್ದಾರೆ. ಮಂಗಳೂರಿನ ಐಎಂಎ ಭವನದಲ್ಲಿ ನಡೆದ ವಿಶ್ವ ಅಂಗಾಂಗ ದಾನ ದಿನಾಚರಣೆ ಕಾರ್ಯಕ್ರಮದಲ್ಲಿ ಅಧ್ಯಕ್ಷತೆ ವಹಿಸಿದ್ದ ಅವರು ಅಂಗಾಂಗ ದಾನ ಮಾಡುವುದಾಗಿ ಘೋಷಿಸಿದ್ದಾರೆ.
ಭಾರತೀಯ ರೆಡ್‌ಕ್ರಾಸ್ ಸಂಸ್ಥೆ ದ.ಕ. ಜಿಲ್ಲಾ ಶಾಖೆ, ಇಂಡಿಯನ್ ಮೆಡಿಕಲ್ ಅಸೋಸಿಯೇಷನ್, ಅಸೋಸಿಯೇಷನ್ ಆಫ್ ಮೆಡಿಕಲ್ ಕನ್ಸಲ್ಟೆಂಟ್ಸ್ ಮತ್ತು ಜೀವ ಸಾರ್ಥಕತೆ ವತಿಯಿಂದ ನಗರದ ಐಎಂಎ ಭವನದಲ್ಲಿ ನಡೆದ ವಿಶ್ವ ಅಂಗಾಂಗ ದಾನ ದಿನಾಚರಣೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಅವರು ಈ ಘೋಷಣೆ ಮಾಡಿದ್ದಾರೆ. ಅಲ್ಲದೇ ಅಂಗಾಂಗ ದಾನ ಮಾಡಿ ಅಗತ್ಯವಿರುವ ವ್ಯಕ್ತಿಯ ದೇಹಕ್ಕೆ ಕಸಿ ಮಾಡುವುದರಿಂದ ಜೀವದಾನ ನೀಡಿದಂತಾಗುತ್ತದೆ. ಸಾವಿನ ನಂತರವೂ ದೇಹದ ಒಂದು ಚಿಕ್ಕ ಭಾಗ ಇನ್ನೊಬ್ಬರ ದೇಹದಲ್ಲಿ ಬದುಕುಳಿಯಲು ಸಾಧ್ಯವಾಗುತ್ತದೆ. ಇದು ಮಾನವೀಯ ಸೇವೆಯಾಗಿದ್ದು, ಪ್ರತಿಯೊಬ್ಬರು ಅಂಗಾಂಗ ದಾನದ ಸಂಕಲ್ಪ ತಳೆಯಬೇಕು. ಅತ್ಯಂದ ದುಃಖದ ಸಮಯದಲ್ಲಿ ಪ್ರೀತಿ ಪಾತ್ರರ ಅಂಗಾಂಗ ದಾನ ಮಾಡುವ ಕಠಿಣ ನಿರ್ಧಾರ ಕೈಗೊಳ್ಳುವ ದಾನಿಗಳ ಕುಟುಂಬದ ತ್ಯಾಗವನ್ನು ನಾವು ಸದಾ ಗೌರವಿಸಬೇಕು ಎಂದರು.