ಮರ್ಧಾಳ: ಶ್ರೀ.ಕ್ಷೇ.ಧ.ಗ್ರಾ. ಯೋಜನೆ ಬಿಳಿನೆಲೆ ವಲಯದ ಪ್ರಗತಿಬಂಧು ಸ್ವಸಹಾಯ ಸಂಘಗಳ ಒಕ್ಕೂಟದ ಪದಗ್ರಹಣ

(ನ್ಯೂಸ್ ಕಡಬ) newskadaba.com ಕಡಬ, ಆ. 10. ಗ್ರಾಮೀಣ ಜನತೆಯು ದುಶ್ಚಟಗಳಿಗೆ ಮಾರುಹೋಗಿ ಅಸಂಘಟಿತವಾಗಿ ಪರಾವಲಂಬಿ ಬದುಕು ನಡೆಸುತ್ತಿದ್ದಾಗ ಅನೇಕ ಸವಾಲುಗಳನ್ನು ಮೆಟ್ಟಿ ನಿಂತು ಗ್ರಾಮೀಣ ಜನತೆಗೆ ಅರ್ಥಪೂರ್ಣ ಬದುಕು ರೂಪಿಸುವಲ್ಲಿ ಗ್ರಾಮೀಣಾಭಿವೃದ್ಧಿ ಯೋಜನೆ ಪಾತ್ರ ಮಹತ್ವದ್ದಾಗಿದೆ ಎಂದು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಯೋಜನೆ ಬಿ.ಸಿ ಟ್ರಸ್ಟ್ (ರಿ.) ಮೈಸೂರು ವಿಭಾಗದ ಪ್ರಾದೇಶಿಕ ನಿರ್ದೇಶಕರಾದ ಶ್ರೀಯುತ ಜಯರಾಮ ನೆಲ್ಲಿತ್ತಾಯ ನುಡಿದರು.

 

ಅವರು ಮರ್ಧಾಳ ಶ್ರೀ ಅಯ್ಯಪ್ಪ ಭಜನಾ ಮಂದಿರದಲ್ಲಿ ನಡೆದ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಯೋಜನೆ ಬಿ.ಸಿ. ಟ್ರಸ್ಟ್‌ (ರಿ.) ಬಿಳಿನೆಲೆ ವಲಯ ಇದರ ಪ್ರಗತಿಬಂಧು ಸ್ವಸಹಾಯ ಸಂಘಗಳ ಬಂಟ್ರ 102ನೇ ನೆಕ್ಕಿಲಾಡಿ, ಐತ್ತೂರು ‘ಎ’, ಕೊಣಾಜೆ, ಬೊಳ್ಳೂರು, ಕೋಡಿಂಬಾಳ ಒಕ್ಕೂಟಗಳ ಪದಗ್ರಹಣ ಸಮಾರಂಭ ಹಾಗೂ ಸಾಮೂಹಿಕ ಶ್ರೀ ಸತ್ಯನಾರಾಯಣ ಪೂಜಾ ಕಾರ್ಯಕ್ರಮದಲ್ಲಿ ಮಾತನಾಡಿ ಪೂಜ್ಯ ಖಾವಂದರ ಆಶಯದಂತೆ ಗ್ರಾಮೀಣಾಭಿವೃದ್ಧಿ ಯೋಜನೆಯು ಗ್ರಾಮೀಣ ಜನತೆಯನ್ನು ದುಶ್ಚಟಗಳಿಂದ ಮುಕ್ತಗೊಳಿಸಿ ಸಂಘಟಿತವಾಗಿ ಇಂದು ಗ್ರಾಮೀಣ ಜನತೆಯ ಬದುಕು ಮಾತ್ರವಲ್ಲದೇ ಗ್ರಾಮದ ದೇವಾಲಯ, ಭಜನಾ ಮಂದಿರ, ಶಾಲೆಗಳು ಧಾರ್ಮಿಕ ಕೇಂದ್ರಗಳು ಅಭಿವೃದ್ಧಿಯಾಗಿದೆ. 22 ಜನರಿಂದ ಆರಂಭವಾದ ಯೋಜನೆ ಇಂದು ರಾಜ್ಯಾದ್ಯಂತ ವಿಸ್ತರಿಸಿ 45ಲಕ್ಷಕ್ಕೂ ಹೆಚ್ಚು ಸದಸ್ಯರನ್ನು ಹೊಂದಿರುವುದು ಗ್ರಾಮ ಗ್ರಾಮಗಳ ಅಭಿವೃದ್ಧಿಯ ಸಂಕೇತವಾಗಿದೆ ಎಂದರು.

ವಿಶೇಷ ಅಭಾಗತ್ಯರಾದ ನಟ ನಿರ್ಮಾಪಕ ಶ್ರೀ ತಮ್ಮಣ್ಣ ಶೆಟ್ಟಿ ಶಂಭೂಗ ಮಾಣಿಕ್ಯ ಬೀಡು ಮಾತನಾಡಿ, ಗ್ರಾಮೀಣ ಜನತೆಗೆ ವಿಶೇಷ ಆಚರಣೆ, ಸಂಸ್ಕೃತಿ ಪರಂಪರೆಯ ಹೆಸರಿದ್ದರೂ ಆಧುನಿಕತೆಯ ಭರಾಟೆಯಲ್ಲಿ ಹಿರಿಯರ ಆಚರಣೆಗಳು ನಾಶವಾಗುತ್ತಿದೆ. ಇದನ್ನು ಮುಂದಿನ ಪೀಳಿಗೆಗೆ ಉಳಿಸಿ ಬೆಳೆಸುವ ಕೆಲಸವಾಗಬೇಕಿದೆ. ಅಂದು ಗ್ರಾಮೀಣ ಪ್ರದೇಶದಲ್ಲಿ ಬೆವರು ಹರಿಸಿ ದುಡಿಮೆ ನಡೆಸುತ್ತಿದ್ದವರು ಪ್ರಸ್ತುತ ದಿನಗಳಲ್ಲಿ ಧರ್ಮಾಂಧತೆಗೆ ರಕ್ತ ಹರಿಯುವ ಕೆಲಸವಾಗುತ್ತಿರುವುದು ಅತ್ಯಂತ ಅಪಾಯಕಾರಿ ಎಂದರು. ಮುಖ್ಯ ಅತಿಥಿಯಾದ ಮರ್ಧಾಳ ಸೈಂಟ್ ಮೇರೀಸ್ ಪ್ರೌಢ ಶಾಲಾ ಮುಖ್ಯಗುರುಗಳಾದ ಈಶೋ ಫಿಲಿಪ್ ಮಾತನಾಡಿ, ಗಾಂಧೀಜಿಯವರ ಹಳ್ಳಿಗಳ ಉದ್ಧಾರವೇ ದಿಲ್ಲಿಯ ಉದ್ಧಾರ ಎಂಬ ಕಲ್ಪನೆಗೆ ಗ್ರಾಮಾಭಿವೃದ್ಧಿ ಯೋಜನೆ ಪೂರಕವಾಗಿ ಕಾರ್ಯವಹಿಸುತ್ತಿದ್ದು, ಗ್ರಾಮದ ಜನತೆಯು ಸ್ವಾವಲಂಬಿ ಬದುಕಿನ ಜೊತೆಗೆ ಅಧಿಕಾರದ ವಿಕೇಂದ್ರೀಕರಣಕ್ಕೆ ಮಹತ್ವದ ಕೊಡುಗೆ ನೀಡಿದೆ. ನೂತನ ಪದಾಧಿಕಾರಿಗಳು ತನಗೆ ದೊರೆತಿರುವುದು ಅಧಿಕಾರ ಎಂದು ಭಾವಿಸದೆ ಪ್ರಾಮಾಣಿಕವಾಗಿ ಸೇವಾ ಮನೋಭಾವದಿಂದ ದುಡಿದಾಗ ಸಮಾಜದಲ್ಲಿ ಗುರುತಿಸಲ್ಪಡುವಂತಹ ಕಾರ್ಯವಾಗುತ್ತದೆ ಎಂದರು. ಕಡಬ ಸಿ.ಎ.ಬ್ಯಾಂಕ್ ಅಧ್ಯಕ್ಷರಾದ ರಮೇಶ್ ಭಟ್ ಕಲ್ಪುರೆ ಮಾತನಾಡಿ, ಇಂದಿನ ಯುವಜನತೆ ಸಿನಿಮಾ ನಟರನ್ನು ಆದರ್ಶವಾಗಿ ನೋಡುವ ಬದಲು ಪೂಜ್ಯ ಖಾವಂದರನ್ನು ಆದರ್ಶವಾಗಿ ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ಭಾರತವನ್ನು ವಿಶ್ವಗುರು ಆಗಿಸುವ ಕನಸಿಗೆ ಪೂರಕವಾದ ಪ್ರಗತಿಯನ್ನು ಖಾವಂದರು ಗ್ರಾಮೀಣಾಭಿವೃದ್ಧಿ ಯೋಜನೆ ಮೂಲಕ ಹಮ್ಮಿಕೊಂಡಿದ್ದಾರೆ. ಪ್ರಧಾನಿ ಮೋದಿಯವರ ಜೊತೆಗೆ ಸಂಸತ್ತಿಗೆ ಸದಸ್ಯನಾಗಿ ನಾಮ ನಿರ್ದೇಶನವಾಗಿರುವುದು ಭಾರತ ವಿಶ್ವಮಾನ್ಯತೆಯ ಗೌರವಕ್ಕೆ ದಿಕ್ಸೂಚಿಯಾಗಿದೆ ಎಂದರು.

Also Read  Новое казино 1Win для игры на деньги - Акции и бонусы казино


ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನ ವ್ಯವಸ್ಥಾಪನಾ ಸಮಿತಿ ಸದಸ್ಯರಾದ ಮನೋಹರ ರೈ, ಕಡಬ ಶ್ರೀ ದುರ್ಗಾಂಬಿಕಾ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷರಾದ ಸೀತರಾಮ ಗೌಡ ಪೊಸವಳಿಕೆ, ಮರ್ಧಾಳ ಶ್ರೀ ಅಯ್ಯಪ್ಪ ಭಜನಾ ಮಂಡಳಿ ಅಧ್ಯಕ್ಷರಾದ ನಾರಾಯಣ ಶೆಟ್ಟಿ ಅತ್ಯಡ್ಕ, ಮರ್ಧಾಳ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಹರೀಶ್ ಕೋಡಂದೂರು, ಕೊಣಾಜೆ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಶಿವಪ್ಪ ಗೌಡ ಕಡ್ಯ ಕೊಣಾಜೆ, ಜನಜಾಗೃತಿ ವೇದಿಕೆ ಬಿಳಿನೆಲೆ ವಲಯ ಅಧ್ಯಕ್ಷರಾದ ತಮ್ಮಯ್ಯ ಗೌಡ ಸುಳ್ಯ, ಎಪಿಎಂಸಿ ನಿರ್ದೇಶಕರಾದ ಮೇದಪ್ಪ ಗೌಡ ಡೆಪ್ಪುಣಿ, ಕೋಡಿಂಬಾಳ ಶ್ರೀರಾಮ ಭಜನಾ ಮಂಡಳಿ ಅಧ್ಯಕ್ಷರಾದ ಸಂಜೀವ ನಾಯ್ಕ್ ನೂತನ ಪದಾಧಿಕಾರಿಗಳಿಗೆ ಶುಭಹಾರೈಸಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಬಿಳಿನೆಲೆ ವಲಯಾಧ್ಯಕ್ಷರಾದ ಸತೀಶ್ ಎರ್ಕ ವಹಿಸಿದ್ದರು. ವೇದಿಕೆಯಲ್ಲಿ ನಿರ್ಗಮಿತ ಒಕ್ಕೂಟದ ಅಧ್ಯಕ್ಷರುಗಳಾದ ರಾಮಚಂದ್ರ ಮಂಡೆಕರ, ಗಣಪಯ್ಯ ಗೌಡ ಪಂಜೋಡಿ, ರಘುರಾಮ ಭಟ್, ಪುಂಡರೀಕ್ಷ, ಕುಸುಮ ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ನೂತನ ಒಕ್ಕೂಟದ ಪದಾಧಿಕಾರಿಗಳಿಗೆ ಅಧಿಕಾರ ಹಸ್ತಾಂತರಿಸಲಾಯಿತು. ಗಣಪಯ್ಯ ಗೌಡ ಪಂಜೋಡಿ, ಕುಸುಮ ಅನಿಸಿಕೆ ವ್ಯಕ್ತಪಡಿಸಿದರು. ಕಡಬ ತಾಲೂಕು ಯೋಜನಾಧಿಕಾರಿ ಮೇದಪ್ಪ ಗೌಡ ನಾವೂರು ಸ್ವಾಗತಿಸಿ, ಬಿಳಿನೆಲೆ ವಲಯದ ಮೇಲ್ಚಿಚಾರಕರಾದ ಆನಂದ ವಂದಿಸಿದರು‌. ಕಡಬ ವಲಯ ಮೇಲ್ವಿಚಾರಕರಾದ ರವಿಪ್ರಸಾದ್ ಕಾರ್ಯಕ್ರಮ ನಿರೂಪಿಸಿದರು.

Also Read  ಆ್ಯಸಿಡ್ ದಾಳಿ: ದುಷ್ಕರ್ಮಿಗಳು ಪರಾರಿ

error: Content is protected !!
Scroll to Top