(ನ್ಯೂಸ್ ಕಡಬ) newskadaba.com ಮಂಗಳೂರು, ಆ. 06. ಎನ್ಐಟಿಕೆ ಸುರತ್ಕಲ್ ಅಕ್ರಮ ಟೋಲ್ ಗೇಟ್ ತೆರವಿಗೆ ಸಂಸದರು ನೀಡಿದ ಜೂನ್ 22ರ ಅಂತಿಮ ಗಡುವು ದಾಟಿ ತಿಂಗಳುಗಳೇ ಕಳೆದಿವೆ. ಆದರೆ, ಇದೀಗ ಆ. 15ರ ಮೊದಲು ಸುರತ್ಕಲ್ ಟೋಲ್ ತೆರವುಗೊಳಿಸಿ, ಜನತೆಯನ್ನು ಟೋಲ್ ಲೂಟಿಯಿಂದ ಮುಕ್ತಗೊಳಿಸಬೇಕೆಂದು ಟೋಲ್ ವಿರೋಧಿ ಹೋರಾಟ ಸಮಿತಿಯು ನಳಿನ್ ಕುಮಾರ್ ಕಟೀಲ್ ಹಾಗೂ ಸಚಿವ ಸುನಿಲ್ ಕುಮಾರ್ ಅವರನ್ನು ಆಗ್ರಹಿಸಿದೆ.
ಈ ಕುರಿತು ಸಮಿತಿ ಸಂಚಾಲಕ ಮುನೀರ್ ಕಾಟಿಪಳ್ಳ ಅವರು ಪ್ರಕಟಣೆ ನೀಡಿದ್ದು, 6 ವರ್ಷಗಳ ಸತತ ಹೋರಾಟದ ಹೊರತು ತಾತ್ಕಾಲಿಕ ನೆಲೆಯಲ್ಲಿ ಸ್ಥಾಪನೆಗೊಂಡಿರುವ ಸುರತ್ಕಲ್ ಟೋಲ್ ಗೇಟ್ ಅಕ್ರಮವಾಗಿ ಮುಂದುವರಿಯುತ್ತಿದೆ. ಇದರ ನಡುವೆ ಸಂಸದ ನಳಿನ್ ಕುಮಾರ್, ಶಾಸಕ ಭರತ್ ಶೆಟ್ಟಿ ಟೋಲ್ ತೆರವು ಮಾಡುವುದಾಗಿ ಭರವಸೆ ನೀಡುತ್ತಾ ಬಂದಿದ್ದಾರೆ. ಹೆಜಮಾಡಿ ನವಯುಗ್ ಟೋಲ್ ಪ್ಲಾಝಾದೊಂದಿಗೆ ವಿಲೀನಗೊಳಿಸುವ ಕುರಿತು 2018ರಲ್ಲಿ ಅಧಿಕೃತ ನಿರ್ಧಾರ ಆಗಿದ್ದರೂ ಅದು ಇಲ್ಲಿಯವರೆಗೆ ಜಾರಿಯಾಗಿಲ್ಲ. ಈ ನಡುವೆ 2022 ರ ಆರಂಭದ ತಿಂಗಳುಗಳಲ್ಲಿ ಹೋರಾಟ ತೀವ್ರಗೊಂಡಾಗ ಮಂಗಳೂರು ಬಂದರಿನ ಒಳಭಾಗಕ್ಕೆ ಸ್ಥಳಾಂತರಿಸುವ ನಿರ್ಧಾರವನ್ನು ಸಂಸದ ನಳಿನ್ ಕುಮಾರ್ ಕಟೀಲ್ ಪ್ರಕಟಿಸಿದ್ದರು. ಮಾರ್ಚ್ 22 ರಂದು ಸ್ವತಃ ಹೆದ್ದಾರಿ ಸಚಿವ ನಿತಿನ್ ಗಡ್ಕರಿಯವರು ಅಕ್ರಮ ಟೋಲ್ ಗೇಟ್ ಜೂನ್ 22 ಕ್ಕೆ ತೆರವಾಗಲಿದೆ ಎಂದು ಹೇಳಿಕೆ ನೀಡಿದ್ದರು. ಆದರೆ ಇದುವರೆಗೂ ತೆರವಾಗದ ಕಾರಣ ಕೂಡಲೇ ತೆರವಿಗೆ ಕ್ರಮ ಕೈಗೊಳ್ಳಬೇಕು. ಇಲ್ಲದೇ ಹೋದಲ್ಲಿ ಮುಂದಿನ ದಿನಗಳಲ್ಲಿ ಘೇರಾವ್, ಸುಂಕ ಸಂಗ್ರಹಕ್ಕೆ ತಡೆ, ಟೋಲ್ ಗೇಟ್ ಮುಂಭಾಗ ಸಾವಿರಾರು ಜನರ ಸಾಮೂಹಿಕ ಧರಣಿಯಂತಹ ತೀವ್ರತರದ ಹೋರಾಟಗಳು ನಡೆಯಲಿವೆ ಎಂದು ಸಮಿತಿ ಎಚ್ಚರಿಕೆ ನೀಡುತ್ತಿದೆ ಎಂದು ಹೇಳಿದ್ದಾರೆ.