(ನ್ಯೂಸ್ ಕಡಬ) newskadaba.com ಗೌರಿಬಿದನೂರು, ಜೂ. 27. ಇಲಿಗಳ ಕಾಟದಿಂದ ಹೈರಾಣಾದ ಗೌರಿಬಿದನೂರು ವೃತ್ತ ನಿರೀಕ್ಷಕರೋರ್ವರು ಠಾಣೆಯಲ್ಲೇ ಬೆಕ್ಕು ಸಾಕಾಣಿಕೆ ಮಾಡಿ, ದಾಖಲೆಗಳನ್ನು ರಕ್ಷಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಠಾಣೆಯಲ್ಲಿ ಇಲಿಗಳ ಕಾಟ ಹೆಚ್ಚಳದಿಂದಾಗಿ ಕಡತಗಳು, ಹಣ, ಸಮವಸ್ತ್ರ, ಮಹತ್ವದ ದಾಖಲೆಗಳನ್ನು ತಿಂದು ಹಾಕುತ್ತಿದ್ದವು. ಅಲ್ಲದೇ ಸೆಲ್, ಇನ್ಸ್‌ಪೆಕ್ಟರ್, ಸಿಬ್ಬಂದಿ ಕೊಠಡಿ, ಕಪಾಟುಗಳಲ್ಲಿ ಇಲಿಗಳು ಸೇರಿಕೊಂಡು, ಆಗಾಗ ಸದ್ದು ಮಾಡುತ್ತಿದ್ದವು. ಇದರಿಂದ ಪೊಲೀಸರು ಸಾಕಷ್ಟು ಕಿರಿಕಿರಿ ಅನು ಭವಿಸುವಂತಾಗಿತ್ತು. ಇಲಿಗಳಿಂದ ದಾಖಲೆ ಕಾಪಾಡಿಕೊಳ್ಳುವುದೇ ಪೊಲೀಸರಿಗೆ ದೊಡ್ಡ ತಲೆನೋವಾಗಿತ್ತು. ಇದಕ್ಕೆ ಸೂಕ್ತ ಉಪಾಯವೆಂಬಂತೆ ವೃತ್ತ ನಿರೀಕ್ಷಕರ ಕಚೇರಿಯ ಸಿಬ್ಬಂದಿ ಗಂಗರಾಜು ಬೆಕ್ಕಿನ ಮರಿಯನ್ನು ತಂದು ಸಾಕಿದ್ದು, ಈಗಾಗಲೇ ಬೆಕ್ಕಿನ ಮರಿ ದೊಡ್ಡದಾಗಿ ಇಲಿಗಳನ್ನು ಹಿಡಿಯಲು ಶುರು ಮಾಡಿದೆ. ಬೆಕ್ಕಿನ ಧ್ವನಿ ಕೇಳಿ ಇಲಿಗಳು ಪರಾರಿಯಾಗುತ್ತಿದ್ದು ಎರಡು ತಿಂಗಳಿಂದ ಕಚೇರಿಯ ಯಾವುದೇ ಕಡತ, ಸಮವಸ್ತ್ರವಾಗಲೀ ನಾಶವಾಗುತ್ತಿಲ್ಲ ಎಂದೆನ್ನಲಾಗಿದೆ.