(ನ್ಯೂಸ್ ಕಡಬ) newskadaba.com ಮಂಗಳೂರು, ಫೆ. 17. 2030ರ ಹೊತ್ತಿಗೆ ದೇಶ ಕ್ಷಯ ರೋಗ ಮುಕ್ತವಾಗಲು ವೈದ್ಯರು ಹಾಗೂ ರೋಗಿಗಳ ಸಹಕಾರ ಅಗತ್ಯ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಕಿಶೋರ್ ಕುಮಾರ್ ಅವರು ಅಭಿಪ್ರಾಯಪಟ್ಟರು.
ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ಕ್ಷಯ ರೋಗ ನಿರ್ಮೂಲನಾಧಿಕಾರಿಗಳ ಕಚೇರಿ ಹಾಗೂ ಮಂಗಳೂರಿನ ರಾಮಕೃಷ್ಣ ರಿಜಿಸ್ಟ್ರಾರ್ ಕೋಆಪರೇಟಿವ್ ಹಾಗೂ ಸೊಸೈಟಿಯ ಸಂಯುಕ್ತಾಶ್ರಯದಲ್ಲಿ ಜಿಲ್ಲಾ ಕ್ಷಯ ರೋಗ ನಿಯಂತ್ರಣಾಧಿಕಾರಿಗಳ ಕಚೇರಿಯಲ್ಲಿ ಹಮ್ಮಿಕೊಳ್ಳಲಾಗಿದ್ದ ಕ್ಷಯ ರೋಗ ಕುರಿತ ಮಾಹಿತಿ ಕಾರ್ಯಾಗಾರ ಮತ್ತು ಪೌಷ್ಟಿಕಾಹಾರ ಪೊಟ್ಟಣಗಳನ್ನು ರೋಗಿಗಳಿಗೆ ವಿತರಿಸಿ ಅವರು ಮಾತನಾಡಿದರು. ಪೌಷ್ಟಿಕಾಂಶಯುಕ್ತ ಆಹಾರ ಸೇವನೆಯು ಕ್ಷಯ ರೋಗಕ್ಕೆ ರಾಮಬಾಣವಿದ್ದಂತೆ. ರೋಗಿಗಳು ಅದನ್ನು ಸೇವಿಸಿದರೆ ಕ್ಷಯ ಗಣನೀಯವಾಗಿ ಇಳಿಕೆಯಾಗುತ್ತದೆ. ಆ ಕಾರಣದಿಂದಾಗಿ ಸರ್ಕಾರ ಮತ್ತು ಸ್ಥಳಿಯ ಸಂಘಸಂಸ್ಥೆಗಳ ಸಹಕಾರದೊಂದಿಗೆ ಆರೋಗ್ಯ ಇಲಾಖೆಯು ಹಲವು ಕಾರ್ಯಗಾರಗಳನ್ನು ಆಯೋಜಿಸಿ ರೋಗಿಗಳಿಗೆ ಪೌಷ್ಟಿಕ ಆಹಾರ ಪೊಟ್ಟಣಗಳನ್ನು ಹಂಚುತ್ತಿದೆ. ಇದರ ಮೂಲ ಉದ್ದೇಶ ಭಾರತವು 2030ರ ಹೊತ್ತಿಗೆ ಕ್ಷಯರೋಗ ಮುಕ್ತ ರಾಷ್ಟ್ರವಾಗಬೇಕು ಎಂಬುದಾಗಿದೆ ಇದು ಪ್ರಧಾನಿಯವರ ಕನಸು ಆಗಿದೆ ಎಂದು ಹೇಳಿದರು. ಈ ಸಂಧರ್ಭದಲ್ಲಿ ರಾಮಕೃಷ್ಣ ಕೋಆಪರೇಟಿವ್ ಸೊಸೈಟಿಯ ಅಧ್ಯಕ್ಷ ಕೆ.ಜಯರಾಮ್ ರೈ, ಜಿಲ್ಲಾ ಕ್ಷಯ ರೋಗ ನಿರ್ಮೂಲನಾಧಿಕಾರಿ ಡಾ. ಬದ್ರುದ್ದೀನ್ ಎಮ್.ಎನ್, ಜಿಲ್ಲಾ ವೈದ್ಯಕೀಯ ಸಲಹೆಗಾರರಾದ ಡಾ.ದೇವಿ ಗಣೇಶ್, ಫಲಾನುಭವಿಗಳು ಮತ್ತು ಆಸ್ಪತ್ರೆಗಳ ಸಿಬ್ಬಂದಿಗಳು ಉಪಸ್ಥಿತರಿದ್ದರು.