(ನ್ಯೂಸ್ ಕಡಬ) newskadaba.com ಸಂಪಾಜೆ, ಫೆ. 02. ಸಂಪಾಜೆ ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷರು, ಕೊಡುಗೈ ದಾನಿ ದಿವಂಗತ ಗಣಪಯ್ಯ ಗೌಡರ ಧರ್ಮಪತ್ನಿ, ಸಂಪಾಜೆ ಗ್ರಾಮ ಪಂಚಾಯತ್ ಮಾಜಿ ಸದಸ್ಯರು, ಮೂರು ದಶಕಗಳ ಕಾಲ ಆದರ್ಶ ಜೀವನವನ್ನು ನಡೆಸಿ ನಮ್ಮನ್ನಗಲಿದ ದಿವಂಗತ ಜಿ.ನೀಲಮ್ಮ ಗೂನಡ್ಕರವರಿಗೆ ಸಾರ್ವಜನಿಕ ಸಂತಾಪ ಸೂಚಕ ಸಭೆಯು ಗೂನಡ್ಕದ ನ್ಯಾಯಬೆಲೆ ಅಂಗಡಿಯ ಸಮೀಪ ಜರುಗಿತು.
ಸಂಪಾಜೆ ಪ್ರಾಥಮಿಕ ಕೃಷಿಪತ್ತಿನ ಸಹಕಾರಿ ಸಂಘದ ಅಧ್ಯಕ್ಷರಾದ ಸೋಮಶೇಖರ್ ಕೊಯಂಗಾಜೆಯವರ ಅಧ್ಯಕ್ಷತೆಯಲ್ಲಿ ಜರುಗಿದ ಕಾರ್ಯಕ್ರಮದಲ್ಲಿ ಸಂಪಾಜೆ ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷರಾದ ಮಹಮ್ಮದ್ ಕುಂಞ ಗೂನಡ್ಕರವರು ಪ್ರಾಸ್ತಾವಿಕವಾಗಿ ಮಾತನಾಡಿ ಸರ್ವರನ್ನೂ ಸ್ವಾಗತಿಸಿದರು. ಸುಳ್ಯ ವಾಲಿಬಾಲ್ ಅಸೋಸಿಯೇಶನ್ ನ ಮಾಜಿ ಅಧ್ಯಕ್ಷರಾದ ಜಯಪ್ರಕಾಶ್ ರೈಯವರು ಮಾತನಾಡಿ ವಾಲಿಬಾಲ್ ಕ್ರೀಡೆಗೆ ಜಿ.ಜಿ.ನೀಲಮ್ಮ ಅವರು ಕೊಟ್ಟಂತಹ ಕೊಡುಗೆಗಳನ್ನು ಸ್ಮರಿಸಿ ಹಲವು ಘಟನೆಗಳನ್ನು ಮೆಲುಕು ಹಾಕಿದರು. ಕರ್ನಾಟಕ ಸರ್ಕಾರದ ಕಾರ್ಮಿಕ ಇಲಾಖೆಯ ನಿವೃತ್ತ ಉಪಕಾರ್ಯದರ್ಶಿಗಳಾದ ಇಬ್ರಾಹಿಂ ಗೂನಡ್ಕರವರು ಮಾತನಾಡಿ ತಾವು ಹಾಗೂ ಜಿ.ಜಿ.ನೀಲಮ್ಮರವರ ಅವಿನಾಭಾವ ಸಂಬಂಧವನ್ನು ಮತ್ತು ಮಾತೃ ಸಮಾನರಾಗಿ ತಮಗೆ ವಿದ್ಯಾರ್ಥಿ ಜೀವನದಲ್ಲಿ ಮಾಡಿದಂತಹ ಹಲವು ಸಹಾಯಗಳ ನೆನಪುಗಳನ್ನು ಹಂಚಿಕೊಂಡರು, ಸುಳ್ಯ ಗಾಂಧಿನಗರ ಕೇಂದ್ರ ಜುಮಾ ಮಸೀದಿಯ ಅಧ್ಯಕ್ಷರಾದ ಕೆ.ಎಂ.ಮುಸ್ತಫಾರವರು ಮಾತನಾಡಿ, “ಒರ್ವ ಮಹಿಳೆಯಾಗಿದ್ದುಕೊಂಡು ಜಿ.ಜಿ.ನೀಲಮ್ಮರವರು ಮಾಡಿದ ಸೇವೆಯು ಎಲ್ಲರಿಗೂ ಮಾದರಿಯಾಗಿದೆ” ಎಂದು ಹೇಳಿದರು, ಸುಳ್ಯ ಶ್ರೀ ಶಾರದಾಂಬ ಸೇವಾ ಸಮಿತಿಯ ಅಧ್ಯಕ್ಷರಾದ ಗೋಕುಲ್ ದಾಸ್ ಮಾತನಾಡಿ” ತಾನು ಬಹಳ ವರ್ಷಗಳ ಹಿಂದೆ ಸುಳ್ಯದಲ್ಲಿ ವ್ಯಾಪಾರ ಮಾಡುತ್ತಿದ್ದ ವೇಳೆ ಜಿ.ಜಿ.ನೀಲಮ್ಮರವರು ಮಾಡುತ್ತಿದ್ದ ಮಾರ್ಗದರ್ಶನವನ್ನು ಸ್ಮರಿಸಿಕೊಂಡರು. ಬದ್ರಿಯಾ ಜುಮಾ ಮಸೀದಿ ಗೂನಡ್ಕ ಇದರ ಅಧ್ಯಕ್ಷರಾದ ಹಾಜಿ ಅಬ್ದುಲ್ಲ ಕೊಪ್ಪದಕಜೆಯವರು ಮಾತನಾಡಿ, “ಯಾವುದೇ ಹಬ್ಬ ಹರಿದಿನಗಳಾಗಲಿ ನಾವೆಲ್ಲರೂ ಜಿ.ಜಿ.ನೀಲಮ್ಮರವರ ಮನೆಗೆ ತೆರಳಿದಾಗ ಅವರು ನೀಡುತ್ತಿದ್ದ ಆತಿಥ್ಯವನ್ನು ಮರೆಯಲಾಗದ್ದು” ಎಂದರು.
ದಕ್ಷಿಣ ಕನ್ನಡ ಜಿಲ್ಲಾ ವಾಲಿಬಾಲ್ ಅಸೋಸಿಯೇಶನ್ ಉಪಾಧ್ಯಕ್ಷರಾದ ಎಸ್.ಸಂಶುದ್ದೀನ್ ಅವರು ಈ ವೇಳೆ ಗೌರವ ಉಪಸ್ಥಿತರಿದ್ದರು. ಗೂನಡ್ಕ ಶ್ರೀ ಶಾರದ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯೋಪಾಧ್ಯಾಯರಾದ ಹನುಮಂತಪ್ಪ, ನಿವೃತ್ತ ಶಿಕ್ಷಕರಾದ ಶಿವರಾಮ್ ಭಟ್, ಉದ್ಯಮಿ ಸಿಲ್ವಸ್ಟರ್ ಡಿ’ಸೋಜಾ, ಜಿ.ಜಿ.ನೀಲಮ್ಮರವರ ಪುತ್ರರಾದ ದಯಾನಂದ್, ಶಿವಪ್ರಸಾದ್, ಚಂದ್ರ ವಿಲಾಸ್, ಪುತ್ರಿಯರಾದ ಶರ್ಮಿಲಾ, ಚಂದ್ರಾವತಿ ಸೇರಿದಂತೆ ಅವರ ಸೊಸೆಯಂದಿರು, ಮೊಮ್ಮಕ್ಕಳು, ಗೂನಡ್ಕ ಬದ್ರಿಯಾ ಜುಮಾ ಮಸೀದಿ ಪ್ರಧಾನ ಕಾರ್ಯದರ್ಶಿ ಉಮ್ಮರ್ ದರ್ಖಾಸ್, ಕಾರ್ಯದರ್ಶಿಗಳಾದ ಎ.ಟಿ.ಅಶ್ರಫ್, ಮುನೀರ್ ಪ್ರಗತಿ, ಗೂನಡ್ಕ ಎಸ್.ವೈ.ಎಸ್.ಪ್ರಧಾನ ಕಾರ್ಯದರ್ಶಿ ಎಸ್.ಎಂ.ಅಬ್ದುಲ್ಲ, ಸಾಮಾಜಿಕ ಕಾರ್ಯಕರ್ತ ತಾಜುದ್ದೀನ್ ಟರ್ಲಿ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು. ಗೂನಡ್ಕದ ಯುವಕರ ತಂಡದ ರವಿಚಂದ್ರ (ಮುನ್ನ) ಗೂನಡ್ಕ, ವಿನಯ್ ಕುಮಾರ್, ಸಫ್ವಾನ್ ಗೂನಡ್ಕ, ಜಯಚಂದ್ರ, ಹೇಮನಾಥ್ ಕಾರ್ಯಕ್ರಮವನ್ನು ಬಹಳ ಅಚ್ಚುಕಟ್ಟಾಗಿ ಆಯೋಜಿಸಿದ್ದು, ಸಾರ್ವಜನಿಕ ಬಂಧುಗಳು ಈ ವೇಳೆ ಹೆಚ್ಚಿನ ಸಂಖ್ಯೆಯಲ್ಲಿ ಉಪಸ್ಥಿತರಿದ್ದರು. ಸಂಪಾಜೆ ಗ್ರಾಮ ಪಂಚಾಯತ್ ಸದಸ್ಯರಾದ ಶೌವಾದ್ ಗೂನಡ್ಕರವರು ಆಗಮಿಸಿ ಸರ್ವರಿಗೂ ವಂದನಾರ್ಪಣೆಯನ್ನು ಸಲ್ಲಿಸಿದರು.