73ನೇ ಗಣರಾಜ್ಯೋತ್ಸವ ಆಚರಣೆ- ಕೆಎಸ್ಸಾರ್ಟಿಸಿ ಪುತ್ತೂರು ವಿಭಾಗದ ಚಾಲಕರಿಗೆ ಚಿನ್ನದ ಪದಕ ವಿತರಣೆ ➤ ಕೃಷಿ, ಉದ್ಯಮ, ಸಂಸ್ಕೃತಿ ಸ್ನೇಹಿ ಜಿಲ್ಲೆಯನ್ನಾಗಿ ದ.ಕ. ಅಭಿವೃದ್ಧಿ- ಸಚಿವ ವಿ. ಸುನೀಲ್ ಕುಮಾರ್

(ನ್ಯೂಸ್ ಕಡಬ) newskadaba.com ಮಂಗಳೂರು, ಜ. 26. ಮುಂಬರುವ ದಿನಗಳಲ್ಲಿ ಕೃಷಿ, ಉದ್ಯಮ, ಪ್ರವಾಸೋದ್ಯಮ ಹಾಗೂ ಸಂಸ್ಕೃತಿ ಸ್ನೇಹಿ ಜಿಲ್ಲೆಯನ್ನಾಗಿ ದಕ್ಷಿಣ ಕನ್ನಡವನ್ನು ವಿಶಿಷ್ಟ ರೀತಿಯಲ್ಲಿ ಅಭಿವೃದ್ಧಿ ಪಡಿಸಲಾಗುವುದು ಎಂದು ಜಿಲ್ಲೆಗೆ ನೂತನವಾಗಿ ಉಸ್ತುವಾರಿ ವಹಿಸಿಕೊಂಡಿರುವ ಇಂಧನ ಮತ್ತು ಕನ್ನಡ ಹಾಗೂ ಸಂಸ್ಕೃತಿ ಸಚಿವರಾದ ಸುನೀಲ್ ಕುಮಾರ್ ಅವರು ಭರವಸೆ ನೀಡಿದರು.

ಅವರು ಇಂದು ನಗರದ ನೆಹರೂ ಮೈದಾನದಲ್ಲಿ ಗಣರಾಜ್ಯೋತ್ಸವದ ಅಂಗವಾಗಿ ರಾಷ್ಟ್ರ ಧ್ವಜಾರೋಹಣ ನೆರವೇರಿಸಿ, ಗೌರವ ವಂದನೆ ಸ್ವೀಕರಿಸಿ, ಸಂದೇಶ ನೀಡಿದರು. ಕೃಷಿ ಸ್ನೇಹಿ, ಉದ್ಯಮ ಸ್ನೇಹಿ, ಪ್ರವಾಸೋದ್ಯಮ ಸ್ನೇಹಿ ಹಾಗೂ ಸಂಸ್ಕೃತಿ ಸ್ನೇಹಿ ಎಂಬ ನಾಲ್ಕು ಸೂತ್ರಗಳನ್ನಿಟ್ಟುಕೊಂಡು ಆಯಾ ಕ್ಷೇತ್ರಗಳಲ್ಲಿ ವಿಶಿಷ್ಟ ರೀತಿಯಲ್ಲಿ ಅಭಿವೃದ್ದಿ ಚಟುವಟಿಕೆಗಳನ್ನು ಕೈಗೊಳ್ಳಲಾಗುವುದು. ಅದರ ಹೊಣೆಗಾರಿಕೆ ನನ್ನ ಮೇಲಿದೆ, ಬುದ್ದಿವಂತರ ಜಿಲ್ಲೆ ದಕ್ಷಿಣ ಕನ್ನಡ ಎಲ್ಲಾ ಕ್ಷೇತ್ರಗಳಲ್ಲಿಯೂ ದಾಪುಗಾಲಿಡುತ್ತಿದ್ದು, ಸಾಕಷ್ಟು ಅಭಿವೃದ್ದಿ ಪ್ರಕ್ರಿಯೆಗಳಲ್ಲಿ ಪ್ರಗತಿಯನ್ನು ಕಾಣುತ್ತಿದೆ ಎಂದು ಹೇಳಿದರು. ಕಳೆದ 20 ವರ್ಷಗಳಿಂದ ಜೀವಂತವಾಗಿರುವ ಡೀಮ್ಡ್ ಫಾರೆಸ್ಟ್ ಸಮಸ್ಯೆ ಪರಿಹರಿಸಲು ರಾಜ್ಯ ಸರ್ಕಾರ ಬದ್ದವಾಗಿದೆ. ಅದಕ್ಕಾಗಿ ಕಂದಾಯ ಹಾಗೂ ಅರಣ್ಯ ಇಲಾಖೆಗಳೊಂದಿಗೆ ಮಾತುಕತೆ ನಡೆಸಲಾಗುತ್ತಿದೆ, ಜಿಲ್ಲೆಯಲ್ಲಿ ಗುರುತಿಸಲಾಗಿರುವ 66,428 ಹೆಕ್ಟೇರ್ ಗೂ ಹೆಚ್ಚಿನ ಡೀಮ್ಡ್ ಫಾರೆಸ್ಟ್ ಭೂಮಿಯಲ್ಲಿ 34,000 ಹೆಕ್ಟೇರ್ ಭೂಮಿ ಕೈಬಿಡಲು ಸರ್ಕಾರವು ನಿರ್ಧರಿಸಿದೆ ಎಂದರು. ಕೋವಿಡ್ ಸಂಕ್ರಮಣದಲ್ಲಿ ಜಗತ್ತು ದೊಡ್ಡ ಪ್ರಮಾಣದಲ್ಲಿ ಆಘಾತಕ್ಕೆ ಒಳಗಾಗಿತ್ತು, ಅದರಂತೆ ದೇಶ ಹಾಗೂ ರಾಜ್ಯದಲ್ಲಿ ಆರಂಭದಲ್ಲಿ ಮಾಸ್ಕ್, ಸ್ಯಾನಿಟೈಜರ್ ಗೂ ಸಮಸ್ಯೆ ಎದುರಾಗಿತ್ತು. ಆದರೆ ಕಳೆದ ಎರಡು ವರ್ಷಗಳಲ್ಲಿ ಆರೋಗ್ಯ ಕ್ಷೇತ್ರಗಳಲ್ಲಿ ಸಾಕಷ್ಟು ಪ್ರಗತಿ ಸಾಧಿಸಲಾಗಿದೆ, ಕೋವಿಡ್ ಲಸಿಕೆಯನ್ನು 156 ಕೋಟಿಗೂ ಹೆಚ್ಚಿನ ಡೋಸ್ ನೀಡಲಾಗಿದೆ ಎಂದ ಸಚಿವರು, ಕೋವಿಡ್ ಮಹಾಮಾರಿಯ ವಿರುದ್ಧ ರಕ್ಷಿಸಿಕೊಳ್ಳಲು ಪ್ರತಿಯೊಬ್ಬರು ವ್ಯಾಕ್ಸಿನ್ ಪಡೆಯುವುದು ಅತೀ ಅವಶ್ಯಕವಾಗಿದೆ, ಇದುವರೆಗೆ ಜಿಲ್ಲೆಯಲ್ಲಿ ಶೇ.97ರಷ್ಟು ಮೊದಲ ಡೋಸ್ ಹಾಗೂ ಶೇ.81ರಷ್ಟು ಜನರು 2ನೇ ಡೋಸ್ ಪಡೆದಿದ್ದಾರೆ. ಈ ಪೈಕಿ ಲಸಿಕೆ ನೀಡಿಕೆಯನ್ನು ಯಶಸ್ವಿಯಾಗಿ ನಿರ್ವಹಿಸಲಾಗಿದೆ, ಬಾಕಿ ಇರುವ ಎಲ್ಲಾ ಅರ್ಹ ಫಲಾನುಭವಿಗಳು ಕೂಡಲೇ ಲಸಿಕೆ ಪಡೆಯುವಂತೆ ಅವರು ಮನವಿ ಮಾಡಿದರು.

 


ಜಿಲ್ಲೆಯ ಸರ್ಕಾರಿ ಹಾಗೂ ಹಲವಾರು ಸರ್ಕಾರೇತರ ಸಂಸ್ಥೆಗಳ ಸಹಭಾಗಿತ್ವದಲ್ಲಿ ಎಲ್ಲಾ ತಾಲೂಕುಗಳು, ಜಿಲ್ಲಾ ಕೇಂದ್ರದ ವೆನ್‍ಲಾಕ್ ಹಾಗೂ ಲೇಡಿಗೋಶನ್, 4 ತಾಲೂಕು ಆಸ್ಪತ್ರೆಗಳು, 7 ಸಮುದಾಯ ಆರೋಗ್ಯ ಕೇಂದ್ರಗಳು, ಉಳ್ಳಾಲ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಒಂದು ಸೇರಿದಂತೆ ಒಟ್ಟು ವೈದ್ಯಕೀಯ ಆಮ್ಲಜನಕ ಉತ್ಪಾದನಾ ಘಟಕಗಳನ್ನು 16 ಅಳವಡಿಸಲಾಗಿದ್ದು, ಆ ಮೂಲಕ ಜಿಲ್ಲೆಯಲ್ಲಿ ಶೇ. 80ರಷ್ಟು ವೈದ್ಯಕೀಯ ಆಮ್ಲಜನಕ ಉತ್ಪಾದನಾ ಸಾಮರ್ಥ್ಯದೊಂದಿಗೆ ಸ್ವಾವಲಂಬನೆ ಸಾಧಿಸಲಾಗಿದೆ ಎಂದು ಹೇಳಿದ ಸಚಿವರು, ವೆನ್‍ಲಾಕ್ ಆಸ್ಪತ್ರೆಯಲ್ಲಿ ದ್ರವ ಆಮ್ಲಜನಕ ಉತ್ಪಾದನೆಯ ಸಾಮಥ್ರ್ಯವನ್ನು ಹೆಚ್ಚು ಮಾಡಲು ಸರ್ಕಾರದಿಂದ ಈಗಿರುವ ಸಾಮರ್ಥ್ಯಕ್ಕೂ ಹೆಚ್ಚಿನ 13 ಕೆ.ಎಲ್. ಟ್ಯಾಂಕರನ್ನು ಸರ್ಕಾರ ಮಂಜೂರು ಮಾಡಿದೆ ಎಂದು ಹೇಳಿದರು. ಮುಖ್ಯಮಂತ್ರಿಗಳ ಮಹತ್ವಾಕಾಂಕ್ಷೆಯ ಅಮೃತ್ ಯೋಜನೆಯಡಿ 25 ಪ್ರಾಥಮಿಕ ಆರೋಗ್ಯ ಕೇಂದ್ರಗಳನ್ನು ಮೇಲ್ದರ್ಜೆಗೇರಿಸಲು ಈಗಾಗಲೇ ಅಗತ್ಯ ಕ್ರಮಗಳನ್ನು ವಹಿಸಲಾಗಿದೆ, ಜಿಲ್ಲಾ ಆಸ್ಪತ್ರೆಯ ಸಾಮರ್ಥ್ಯವನ್ನು ಹೆಚ್ಚಿಸಲು ಸ್ಮಾರ್ಟ್ ಸಿಟಿಯಿಂದ 35 ಬೆಡ್‍ಗಳ ಹಾಗೂ ಎನ್.ಡಿ.ಆರ್.ಎಫ್ ಅನುದಾನದಿಂದ 30 ಬೆಡ್‍ಗಳ ಉನ್ನತೀಕರಿಸಿದ ಐ.ಸಿ.ಯು ಗಳನ್ನು ಸ್ಥಾಪಿಸಲಾಗಿದೆ. ಆಯುಷ್ಮಾನ್ ಆರೋಗ್ಯ ಕರ್ನಾಟಕ ಯೋಜನೆಯಡಿ ಇದುವರೆಗೂ ಜಿಲ್ಲೆಯಲ್ಲಿ 8 ಲಕ್ಷಕ್ಕೂ ಹೆಚ್ಚು ಜನರಿಗೆ ಕಾರ್ಡ್ ವಿತರಿಸಲಾಗಿದೆ ಎಂದು ಮಾಹಿತಿ ನೀಡಿದರು.

Also Read  ಜಿಲ್ಲೆಯಲ್ಲಿ 8 ಕ್ಷೇತ್ರಗಳಿಗೆ 58 ಅಭ್ಯರ್ಥಿಗಳು ಅಂತಿಮ ಕಣದಲ್ಲಿ

 


ಜಿಲ್ಲೆಯಲ್ಲಿ ಅಡಿಕೆ, ತೆಂಗು, ಭತ್ತದ ಪ್ರದೇಶ ವರ್ಷದಿಂದ ವರ್ಷಕ್ಕೆ ವಿಸ್ತರಣೆಯಾಗುತ್ತಿದೆ, ಶೇ.97 ರೈತರು 11 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಕೃಷಿ ಚಟುವಟಿಕೆಗಳನ್ನು ನಡೆಸುತ್ತಿದ್ದಾರೆ, ಕೃಷಿ ಕ್ಷೇತ್ರದ ವಿಸ್ತರಣೆ ಮಾಡಲಾಗುವುದು, ರೈತರ ಆದಾಯ ದ್ವಿಗುಣಗೊಳಿಸುವ ಕೆಲಸವನ್ನು ಮುಂದಿನ ದಿನಗಳಲ್ಲಿ ಚಾಲನೆ ನೀಡಲಾಗುವುದು ಎಂದು ನುಡಿದರು. ಪ್ರಧಾನಮಂತ್ರಿ ಕಿಸಾನ್ ಸಮ್ಮನ್ ಯೋಜನೆಯಡಿ 1 ಲಕ್ಷದ 54 ಸಾವಿರ ರೈತರು ಸದುಪಯೋಗ ಪಡೆಯುತ್ತಿದ್ದು, ಅದಕ್ಕಾಗಿ 219 ಕೋಟಿ ಮೊತ್ತವನ್ನು ಈಗಾಗಲೇ ವಿನಿಯೋಗಿಸಲಾಗಿದೆ, ಮುಖ್ಯಮಂತ್ರಿ ರೈತ ವಿದ್ಯಾನಿಧಿ ಯೋಜನೆಯಡಿ 1,600 ರೈತಮಕ್ಕಳಿಗೆ ರೂ. 4.2 ಕೋಟಿ ವಿದ್ಯಾರ್ಥಿ ವೇತನವನ್ನು ಕೂಡ ಮಂಜೂರು ಮಾಡಲಾಗಿದೆ ಎಂದ ತಿಳಿಸಿದರು. ಜಿಲ್ಲೆಯ ನೀರಾವರಿ ಪ್ರಗತಿಗೂ ಸರ್ಕಾರ ಬದ್ದವಾಗಿದೆ, ಪಶ್ಚಿಮವಾಹಿನಿ ಯೋಜನೆಗೆ ಕಳೆದ ಸಾಲಿನಲ್ಲಿ 500 ಕೋಟಿ ರೂ.ಗಳನ್ನು ಮೀಸಲಿರಿಸಲಾಗಿತ್ತು, ಈ ಬಾರಿಯ ಮುಂದುವರಿಸಲಾಗುವುದು, ಜಿಲ್ಲೆಯ 3.28 ಸಾವಿರ ಕುಟುಂಬಗಳಿಗೆ ಮನೆಮನೆಗೆ ನೀರು ಸರಬರಾಜು ಮಾಡಲು ಜಲಜೀವನ್ ಮೀಷನ್‍ನಲ್ಲಿ 149 ಕೋಟಿ ರೂ.ಗಳನ್ನು ಕಳೆದ ವರ್ಷದಲ್ಲಿ 458 ಕಾಮಗಾರಿಗಳನ್ನು ಹಾಗೂ ಪ್ರಸಕ್ತ ಸಾಲಿನಲ್ಲಿ 198 ಕೋಟಿ ರೂ.ಗಳಲ್ಲಿ 126 ಕಾಮಗಾರಿಗಳನ್ನು ಕೈಗೊಳ್ಳಲಾಗಿದೆ ಎಂದು ಉಲ್ಲೇಖಿಸಿದರು.

ಅಮೃತ ಯೋಜನೆಯಡಿ 194.90 ಕೋಟಿ ರೂ.ಗಳ ಮೊತ್ತದಲ್ಲಿ ವಿವಿಧ ಯೋಜನೆಗಳನ್ನು ತೆಗೆದುಕೊಂಡಿದ್ದು ವಿವಿಧ ಕಾಮಗಾರಿಗಳನ್ನು ಅನುಷ್ಠಾನಗೊಳಿಸಲು ಕ್ರಮ ವಹಿಸಲಾಗುತ್ತಿದೆ, ಜಿಲ್ಲೆಗೊಂದು ಗೋಶಾಲೆ ತೆರೆಯುವ ನಿಟ್ಟಿನಲ್ಲಿ ಈಗಾಗಲೇ ಕಡಬ ತಾಲೂಕು ರಾಮಕುಂಜದಲ್ಲಿ 98 ಎಕರೆ ಜಾಗವನ್ನು ಗುರುತಿಸಲಾಗಿದ್ದು, ಮೊದಲ ಹಂತದಲ್ಲಿ ರೂ. 33 ಲಕ್ಷ ಅನುದಾನ ಬಿಡುಗಡೆಯಾಗಿರುತ್ತದೆ. ರಾಷ್ಟ್ರೀಯ ಸಾಮಾಜಿಕ ಭದ್ರತಾ ಯೋಜನೆಗಳಾದ ಪ್ರಧಾನಮಂತ್ರಿ ಜೀವನ್ ಜ್ಯೋತಿ ಭೀಮಾ ಯೋಜನೆ ಮತ್ತು ಪ್ರಧಾನ ಮಂತ್ರಿ ಸುರಕ್ಷಾ ಭೀಮಾ ಯೋಜನೆಯಾಡಿ 7 ಲಕ್ಷ ಖಾತೆದಾರರನ್ನು ವಿಮಾ ವ್ಯಾಪ್ತಿಗೆ ನೊಂದಣಿ ಮಾಡಲಾಗಿರುತ್ತದೆ ಎಂದರು. ಮಂಗಳೂರು ತಾಲೂಕಿನ ಕೊಣಾಜೆಯಲ್ಲಿ ಒಟ್ಟು 13 ಎಕರೆಯಲ್ಲಿ ವಸತಿ ಬಡಾವಣೆ ನಿರ್ಮಾಣಕ್ಕೆ ಸರ್ಕಾರ ಒಪ್ಪಿಗೆ ನೀಡಿದೆ, ಕೇಂದ್ರದಿಂದ ತಣ್ಣೀರು ಬಾವಿಯಲ್ಲಿ ಬ್ಯೂಪ್ಲಾಗ್ ಬೀಚ್ ಗುರುತಿಸಲಾಗಿದೆ, ರಾಜ್ಯ ಸರ್ಕಾರವು ಅದರ ಅಭಿವೃದ್ದಿಗೆ ಬದ್ದವಾಗಿದೆ, ಜಿಲ್ಲೆಯ ಪರಿಸರ ಸ್ನೇಹಿ ಪ್ರವಾಸೋದ್ಯಮಕ್ಕೆ ಜನಪ್ರತಿನಿಧಿಗಳಿಂದ ಯತ್ನಿಸಲಾಗುತ್ತಿದೆ, ರಸ್ತೆಗಳ ಅಭಿವೃದ್ದಿ ಸರ್ಕಾರದ ವಿಶೇಷ ಯತ್ನ ನೀಡುತಿದ್ದು, ಅದಕ್ಕಾಗಿ ರಾಜ್ಯ ಹೆದ್ದಾರಿಗೆ ವಿಶೇಷ ಅನುದಾನ ನೀಡಲಾಗಿದೆ, 3500 ಕೋಟಿ ರೂ.ಗಳ ವೆಚ್ಚದಲ್ಲಿ ಇಡೀ ರಾಜ್ಯದ ಹೆದ್ದಾರಿ ನವೀಕರಣ ಮಾಡಲಾಗುತ್ತಿದೆ, 873 ಕಿ.ಮೀ. ಗ್ರಾಮೀಣ ರಸ್ತೆಗಳನ್ನು ಜಿಲ್ಲಾ ರಸ್ತೆಯನ್ನಾಗಿ ಹಾಗೂ 237 ಕಿ.ಮೀ ಜಿಲ್ಲಾ ರಸ್ತೆಯನ್ನು ರಾಜ್ಯ ಹೆದ್ದಾರಿಯನ್ನಾಗಿ ಮೇಲ್ದರ್ಜೆಗೇರಿಸಲಾಗುತ್ತಿದೆ ಎಂದು ವಿವರ ನೀಡಿದರು.

Also Read  ಕಡಬ: ಹಾಲಿಗೆಂದು ತೆರಳಿದ ಯುವತಿ ನಾಪತ್ತೆ

ಅಮೃತ್ ಯೋಜನೆಯಲ್ಲಿ ಮೂಲಭೂತ ಸೌಕರ್ಯಕ್ಕೆ 27 ಗ್ರಾಮ ಪಂಚಾಯತ್‍ಗಳ ಆಯ್ಕೆಯಾಗಿವೆ, 5196 ಬೀದಿ ಬದಿ ವ್ಯಾಪಾರಿಗಳಿಗೆ ಸಾಲ ಸೌಲಭ್ಯ ನೀಡಿ ಅವರಿಗೆ ಆರ್ಥಿಕ ಭದ್ರತೆ ನೀಡಲಾಗುತ್ತಿದೆ, ಕಳೆದ ಮಾರ್ಚ್‍ನಿಂದ ಉಚಿತ ಪಡಿತರ ನೀಡಲಾಗುತ್ತಿದೆ, 2,47,000 ಬಿಪಿಎಲ್ ಕುಟುಂಬಗಳು ಹಾಗೂ 23,500 ಅಂತ್ಯೋದಯ ಕುಟುಂಬಗಳಿಗೆ ಉಚಿತ ಅಕ್ಕಿ ನೀಡಲಾಗುತ್ತಿದೆ, ಅವರಿಗೆ ಪಡಿತರ ತಲುಪಿಸಲಾಗುತ್ತಿದೆ ಯಾವ ಬಡವರಿಗೂ ತೊಂದರೆಯಾಗಬಾರದು ಎಂಬುದು ಸರ್ಕಾರದ ಆಶಯ, ಉದ್ಯಮ ಸ್ನೇಹಿ ಜಿಲ್ಲೆಯನ್ನಾಗಿಸಲು ಹಲವು ಕ್ರಮಗಳನ್ನು ರೂಪಿಸಲಾಗುತ್ತಿದೆ, ಉದ್ಯೋಗ ಸೃಷ್ಟಿ, ಆರ್ಥಿಕತೆಯ ಸಬಲೀಕರಣಕ್ಕೆ ಹಿಂದಿನಿಂದಲೂ ಯತ್ನಿಸಲಾಗುತ್ತಿದೆ, ಪ್ಲಾಸ್ಟಿಕ್ ಪಾರ್ಕ್‍ಗೆ ಕೇಂದ್ರ ಸರ್ಕಾರ ಒಪ್ಪಿಗೆ ನೀಡಿ ಅನುದಾನವನ್ನು ಬಿಡುಗಡೆ ಮಾಡಿದೆ ಎಂದು ಅವರು ಹೇಳಿದರು.

ಸಾಮಾನ್ಯ ಶಿಕ್ಷಕನ ಮಗ ಇಂದು ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಆಗಲು ಡಾ. ಬಿ.ಆರ್. ಅಂಬೇಡ್ಕರ್ ಅವರು ರಚಿಸಿದ ಸಂವಿಧಾನವೇ ಕಾರಣ. ಸಂವಿಧಾನವನ್ನು ಗಟ್ಟಿ ಗೊಳಿಸುವ ನಡವಳಿಕೆ, ಚಟುವಟಿಕೆ ಅನಿವಾರ್ಯ. ತುರ್ತು ಪರಿಸ್ಥಿತಿ, ಭಯೋತ್ಪಾದನೆ, ನಕ್ಸಲ್ ಚಟುವಟಿಕೆ ಮೂಲಕ ಸಂವಿಧಾನವನ್ನು ದುರ್ಬಲಗೊಳಿಸುವ ಕಾರ್ಯ ನಿರಂತರವಾಗಿ ನಡೆಯುತ್ತಿದ್ದರೂ ಅದನ್ನು ಯಶಸ್ವಿಯಾಗಿ ಹತ್ತಿಕ್ಕುವ ಮೂಲಕ ಸಂವಿಧಾನವೇ ಶ್ರೇಷ್ಠ ಎನ್ನುವುದನ್ನು ಸಾಬೀತು ಪಡಿಸಲಾಗುತ್ತಿದೆ ಎಂದು ಸಚಿವ ಸುನಿಲ್ ಕುಮಾರ್ ಹೇಳಿದರು. ಈ ಸಂದರ್ಭದಲ್ಲಿ ಶಾಸಕರಾದ ವೇದವ್ಯಾಸ ಕಾಮತ್, ಡಾ. ಭರತ್ ಶೆಟ್ಟಿ, ವಿಧಾನ ಪರಿಷತ್ ಸದಸ್ಯರಾದ ಪ್ರತಾಪಸಿಂಹ ನಾಯಕ್, ಮಂಗಳೂರು ಮೇಯರ್ ಪ್ರೇಮಾನಂದ ಶೆಟ್ಟಿ, ಕರ್ನಾಟಕ ಮೀನುಗಾರಿಕೆ ಅಭಿವೃದ್ದಿ ಮಂಡಳಿ ಅಧ್ಯಕ್ಷ ನಿತಿನ್ ಕುಮಾರ್, ಮೈಸೂರು ಎಲೆಕ್ಟ್ರಿಕಲ್ ಇಂಡಸ್ಟ್ರೀಸ್ ಲಿ. ಬೆಂಗಳೂರಿನ ಅಧ್ಯಕ್ಷ ಸಂತೋಷ್ ರೈ ಬೋಳಿಯಾರ್, ತುಳು ಸಾಹಿತ್ಯ ಅಕಾಡೆಮಿ ಅಧ್ಯಕ್ಷ ದಯಾನಂದ ಕತ್ತಲ್‍ಸಾರ್, ಕೊಂಕಣಿ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಡಾ. ಜಗದೀಶ್ ಪೈ, ಬ್ಯಾರಿ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ರಹೀಂ ಉಚ್ಚಿಲ ಸೇರಿದಂತೆ ವಿವಿಧ ನಿಗಮ ಮಂಡಳಿಗಳ ಅಧ್ಯಕ್ಷರು, ಜಿಲ್ಲಾಧಿಕಾರಿ ಡಾ. ರಾಜೇಂದ್ರಕೆ.ವಿ., ನಗರ ಪೊಲೀಸ್ ಆಯುಕ್ತ ಶಶಿಕುಮಾರ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಋಷಿಕೇಶ್ ಭಗವಾನ್ ಸೋನಾವಣೆ, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ. ಕುಮಾರ್, ವಿವಿಧ ಜನಪ್ರತಿನಿಧಿಗಳು, ಅಧಿಕಾರಿಗಳು, ಪದ್ಮಶ್ರೀ ಪ್ರಶಸ್ತಿ ವಿಜೇತರಾದ ಹರೇಕಳ ಹಾಜಬ್ಬ ಹಾಗೂ ಅಮೈ ಮಹಾಲಿಂಗ ನಾಯಕ್ ಹಾಗೂ ಸಾರ್ವಜನಿಕರು ಉಪಸ್ಥಿತರಿದ್ದರು.

Also Read  ಮಗಳ ವಿವಾಹ ದಿನದಂದೇ ತಂದೆ ಹೃದಯಾಘಾತದಿಂದ ಮೃತ್ಯು

ಕೆ.ಎಸ್.ಆರ್.ಟಿ.ಸಿ ಚಾಲಕರಿಗೆ ಸನ್ಮಾನ:
ಇದೇ ಸಂದರ್ಭದಲ್ಲಿ ಕರ್ನಾಟಕ ರಸ್ತೆ ಸಾರಿಗೆ ನಿಗಮದ 2016 ಮತ್ತು 2017ನೇ, 2017-18 ಸಾಲಿನ ಮುಖ್ಯಮಂತ್ರಿಗಳ ಚಿನ್ನದ ಪದಕಕ್ಕೆ ಆಯ್ಕೆಯಾದ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ ಪುತ್ತೂರು ವಿಭಾಗದ ಚಾಲನಾ ಸಿಬ್ಬಂದಿಗಳಿಗೆ ಚಿನ್ನದ ಪದಕ ಮತ್ತು ಪ್ರಶಸ್ತಿ ಪತ್ರವನ್ನು ಜಿಲ್ಲಾ ಉಸ್ತುವಾರಿ ಸಚಿವರಾದ ವಿ. ಸುನೀಲ್ ಕುಮಾರ್ ಹಾಗೂ ಜನಪ್ರತಿನಿಧಿಗಳು ನೀಡಿ ಗೌರವಿಸಿದರು.
ಪ್ರಶಸ್ತಿ ಪುರಸ್ಕೃತರ ವಿವರ ಇಂತಿದೆ:
ಹರಿಶ್ಚಂದ್ರ ಕೆ ಪುತ್ತೂರು, ಎಸ್ ಉಮೇಶ್ ಧರ್ಮಸ್ಥಳ, ಪ್ರವೀಣ ಸಾಲಿಯಾನ್, ಎಚ್.ಪಿ ರಾಜು ಧರ್ಮಸ್ಥಳ, ವಸಂತ ಬಂಗೇರ ಧರ್ಮಸ್ಥಳ, ಬಿ. ಕೇಶವ ಪುತ್ತೂರು, ನಂದಕುಮಾರ್ ಪುತ್ತೂರು, ಟಿ. .ಯು ಸತೀಶ ಮಡಿಕೇರಿ, ಕೆ.ಪಿ ಮಹಮ್ಮದ್ ಸುಳ್ಯ, ಎಲ್ ಗೋಪಾಲ ಕೃಷ್ಣ ಮಡಿಕೇರಿ ಹಾಗೂ ಪಿ.ಎ. ಶಿವರಾಮ್ ಸುಳ್ಯ.

 

 

error: Content is protected !!
Scroll to Top