(ನ್ಯೂಸ್ ಕಡಬ) newskadaba.com ಸುಳ್ಯ, ಜ. 24. ಬೆಳ್ಳಿ ಆಭರಣಕ್ಕೆ ಚಿನ್ನದ ಕೋಟಿಂಗ್ ಮಾಡಿಸಲು ಜ್ಯುವೆಲ್ಲರಿ ಶಾಪ್ ಗೆ ಹೋದ ವ್ಯಕ್ತಿ ಹಾಗೂ ಜ್ಯುವೆಲ್ಲರಿ ಶಾಪ್ ಮಾಲಕರ ನಡುವೆ ಪರಸ್ಪರ ಹಲ್ಲೆ ನಡೆದು ಓರ್ವ ಆಸ್ಪತ್ರೆಗೆ ದಾಖಲಾದ ಘಟನೆ ಸುಳ್ಯದಲ್ಲಿ ನಡೆದಿದೆ.
ಜಾಲ್ಸೂರಿನ ವಿಮಲೇಶ್ ಜ್ಯುವೆಲರಿ ಶಾಪ್ ಮಾಲಕ ಗೋಪಾಲ್ ಶೇಟ್ ಎಂಬವರು ಸುಳ್ಯದ ರಾಮ್ ಬಾರ್ ಸಮೀಪವಿರುವ ಜ್ಯುವೆಲ್ಲರಿ ಅಂಗಡಿಗೆ ಹೋಗಿ ಅಲ್ಲಿನ ಮಾಲಕ ಉತ್ತಮ್ ಶೇಟ್ ಜೊತೆ ಬೆಳ್ಳಿಗೆ ಚಿನ್ನದ ಕೋಟಿಂಗ್ ಮಾಡಲು ಕೊಟ್ಟಿದ್ದು ಅಲ್ಲದೇ ತಕ್ಷಣವೇ ಕೋಟಿಂಗ್ ಮುಗಿಸಿಕೊಡುವಂತೆ ತಿಳಿಸಿದ್ದರು. ಈ ವಿಷಯವಾಗಿ ಇಬ್ಬರ ನಡುವೆ ಮಾತಿಗೆ ಮಾತು ಬೆಳೆದು ಉತ್ತಮ ಶೇಟ್ ಅವರು ಗೋಪಾಲ ಶೇಟ್ ಅವರಿಗೆ ರಾಡ್ ನಿಂದ ಹೊಡೆದು ಹಲ್ಲೆ ನಡೆಸಿದ್ದರೆನ್ನಲಾಗಿದೆ. ಘಟನೆಯಿಂದ ಗೋಪಾಲ ಶೇಟ್ ಅವರ ಕೈ ಪ್ರಾಕ್ಚರ್ ಆಗಿದ್ದು, ಕೈ ಬೆರಳು ಹಾಗೂ ತುಟಿಗೆ ಗಾಯಗಳಾಗಿವೆ. ಅವರನ್ನು ಸುಳ್ಯ ಸರಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಈ ಕುರಿತು ಪ್ರತಿಕ್ರಿಯಿಸಿದ ಉತ್ತಮ ಶೇಟ್, ಗೋಪಾಲ ಶೇಟ್ ಅವರು ನನ್ನ ಅಂಗಡಿಗೆ ಕೋಟಿಂಗ್ ಕೆಲಸಕ್ಕಾಗಿ ಬಂದ ಸಂದರ್ಭ ಬೇರೆ ಇಬ್ಬರು ಮಹಿಳೆಯರು ಚೈನ್ ಖರೀದಿಗಾಗಿ ಬಂದಿದ್ದು, ಈ ವೇಳೆ ನಾನು ಗೋಪಾಲ ಶೇಟ್ ರವರಿಗೆ ಸ್ವಲ್ಪ ಪಕ್ಕದಲ್ಲಿ ಕುಳಿತುಕೊಳ್ಳಿ, ಮಹಿಳೆಯರಿಗೆ ಚೈನ್ ನೀಡಿದ ಬಳಿಕ ಕೊಟಿಂಗ್ ಕೆಲಸ ಮಾಡಿಕೊಡುವುದಾಗಿ ಹೇಳಿದ್ದೆ. ಈ ವೇಳೆ ಇಬ್ಬರ ಮಧ್ಯೆ ಮಾತಿಗೆ ಮಾತು ಬೆಳೆದು, ಗೋಪಾಲ ಶೇಟ್ ಅವರು ಅವಾಚ್ಯ ಶಬ್ದಗಳಿಂದ ಬೈದು ನನ್ನ ಕೆನ್ನೆಗೆ ಬಲವಾಗಿ ಹೊಡೆದರು. ಆ ವೇಳೆ ನಾನು ಕೆಳಗೆ ಬಿದ್ದೆ. ಅವರು ನನ್ನ ಮೇಲೆ ಮುಗಿಬೀಳುವ ಸಂದರ್ಭ ಪ್ರತಿರೋಧ ವ್ಯಕ್ತಪಡಿಸಿ, ಅವರಿಗೂ ನಾನು ಹೊಡೆದೆ. ಬಳಿಕ ನಾನು ಸುಳ್ಯ ಪೊಲೀಸ್ ಠಾಣೆಗೆ ತೆರಳಿ ಗೋಪಾಲ ಶೇಟ್ ಅವರ ಮೇಲೆ ದೂರು ನೀಡಿದ್ದೇನೆ ಎಂದು ಉತ್ತಮ್ ಶೇಟ್ ತಿಳಿಸಿದ್ದಾರೆ.