(ನ್ಯೂಸ್ ಕಡಬ) newskadaba.com ಮಂಗಳೂರು, ಜ. 20. ದ.ಕ ಜಿಲ್ಲೆಯ ಬಿಳಿನೆಲೆ ಸಮೀಪದ ಕಿದುವಿನಲ್ಲಿರುವ ಸಿಪಿಸಿಆರ್ ಐ- ಐಸಿಎಆರ್ ಅಂತರಾಷ್ಟ್ರೀಯ ತೆಂಗು ಜೀನ್ ಬ್ಯಾಂಕ್ ಸಂಶೋಧನಾ ಕೇಂದ್ರವನ್ನು ಸ್ಥಳಾಂತರಿಸುವ ಯಾವುದೇ ಪ್ರಸ್ತಾಪ ಕೇಂದ್ರ ಸರಕಾರದ ಮುಂದಿಲ್ಲ. ಈ ಕುರಿತು ಕೇಂದ್ರ ಕೃಷಿ ಸಚಿವ ಹಾಗೂ ರೈತರ ಕಲ್ಯಾಣ ಸಚಿವ ನರೇಂದ್ರ ಸಿಂಗ್ ತೋಮರ್ ಅವರು ಸಂಸದ ನಳಿನ್ ಕುಮಾರ್ ಕಟೀಲು ಅವರಿಗೆ ಬರೆದ ಪತ್ರದಲ್ಲಿ ತಿಳಿಸಿದ್ದಾರೆ.
ಸದ್ಯ ಕಿದು ಸಂಶೋಧನಾ ಕೇಂದ್ರದಲ್ಲಿ ಇಬ್ಬರು ವಿಜ್ಞಾನಿಗಳು, ಐವರು ತಾಂತ್ರಿಕ ಸಿಬ್ಬಂದಿ, ಓರ್ವ ಸಹಾಯಕ ಆಡಳಿತಾಧಿಕಾರಿ, ಓರ್ವ ಆಡಳಿತ ಸಿಬ್ಬಂದಿ ಹಾಗೂ ಹದಿನಾರು ಪರಿಣತ ಸಹಾಯಕ ಸಿಬ್ಬಂದಿ ಕಾರ್ಯನಿರ್ವಹಿಸುತ್ತಿದ್ದಾರೆ. ಕಿದು ಕೇಂದ್ರದ ಲೀಸ್ ನವೀಕರಣಕ್ಕೆ ವಿಧಿಸಲಾದ ಎನ್ ಪಿವಿ ಪಾವತಿಯ ಬಗ್ಗೆ ರಿಯಾಯಿತಿಗೆ ಸಂಬಂಧಿಸಿದಂತಹ ಪ್ರಸ್ತಾಪಗಳು ಸರ್ವೋಚ್ಛ ನ್ಯಾಯಾಲಯದ ಪರಿಗಣನೆಯಲ್ಲಿದ್ದುದರಿಂದ ಅದರ ಪ್ರಕಾರ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದ್ದಾರೆ. ಕಿದು ಅಂತರಾಷ್ಟ್ರೀಯ ತೆಂಗು ಜೀನ್ ಬ್ಯಾಂಕ್ ಕೇಂದ್ರವನ್ನು ಯಾವುದೇ ಕಾರಣಕ್ಕೂ ಸ್ಥಳಾಂತರಿಸದೇ ಕಿದುವಿನಲ್ಲೇ ಮುಂದುವರಿಸುವ ಕುರಿತು ನಳಿನ್ ಕುಮಾರ್ ಕಟೀಲ್ ಅವರು ಈ ಹಿಂದೆ ಕೃಷಿ ಸಚಿವರಿಗೆ ಪತ್ರ ಬರೆದ ಹಿನ್ನೆಲೆ ಸಚಿವರು ಈ ಪತ್ರ ಬರೆದಿದ್ದಾರೆ.