(ನ್ಯೂಸ್ ಕಡಬ) newskadaba.com ಉಡುಪಿ, ಜ. 10. ಮೆಸೇಂಜರ್ ಮೂಲಕ ಪರಿಚಯವಾದ ವ್ಯಕಿಯೋರ್ವ ಮಹಿಳೆಗೆ ಲಕ್ಷಾಂತರ ರೂ. ವಂಚಿಸಿರುವ ಕುರಿತು ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ದುಬೈನಲ್ಲಿ ವಾಸವಾಗಿರುವ ಗುಂಡಿಬೈಲು ಮೂಲದ ಕ್ಲೊಟಿಲ್ಡಾ ಡಿಕೋಸ್ತಾ ಎಂಬ ಮಹಿಳೆ ಊರಿಗೆ ಮರಳಿದ್ದು, ಇವರಿಗೆ ಡಿ. 2ರಂದು ಮೆಸೇಂಜರ್ ಮೂಲಕ ರೊಮನಿಯಾ ದೇಶದ ಇಂಗ್ಲೆಂಡ್ ನಲ್ಲಿ ವೈದ್ಯಕೀಯ ವೃತ್ತಿ ಮಾಡಿಕೊಂಡಿರುವುದಾಗಿ ಹೇಳಿಕೊಂಡು ಫಿಲಿಪ್ ಜೇಮ್ಸ್ ಎಂಬಾತನ ಪರಿಚಯವಾಗಿತ್ತು. ಡಿ. 20ರಂದು ಫಿಲಿಪ್ ಜೇಮ್ಸ್, ತನ್ನನ್ನು ದೆಹಲಿ ವಿಮಾನ ನಿಲ್ದಾಣದಲ್ಲಿ ಕಸ್ಟಮ್ಸ್ ಅಧಿಕಾರಿಗಳು ಹಿಡಿದಿಟ್ಟಿದ್ದಾರೆ. ನನಗೆ ಡಾಲರ್ ನ್ನು ಇಂಡಿಯನ್ ಕರೆನ್ಸಿಗೆ ಬದಲಾಯಿಸಲು ಸಾಧ್ಯವಿಲ್ಲ ಎಂದು ಕ್ಲೊಟಿಲ್ಡಾ ಡಿಕೋಸ್ತಾ ಅವರನ್ನು ನಂಬಿಸಿ, ಅವರಿಂದ ಹಂತಹಂತವಾಗಿ 13,70,042 ರೂ. ಹಣವನ್ನು ತನ್ನ ಖಾತೆಗೆ ಹಾಕಿಸಿ ಬಳಿಕ ಯಾವುದೇ ಕರೆಯನ್ನು ಸ್ವೀಕರಿಸದೇ ವಂಚಿಸಿದ್ದಾನೆ ಎಂದು ದೂರಲಾಗಿದೆ.