ಕಡಬದ ಚಾಲಕನ ಕೈಯಲ್ಲಿ ಮೂಡಿ ಬರುತ್ತಿದೆ ಅಡಿಕೆ ಹಿಂಗಾರದ ಹೂಮಾಲೆ..! ➤ ಅಪರೂಪದ ಕಲಾವಿದನ ಕೈಚಳಕಕ್ಕೆ ವ್ಯಾಪಕ ಪ್ರಶಂಸೆ

(ನ್ಯೂಸ್ ಕಡಬ) newskadaba.com ಕಡಬ, ಡಿ. 11. ಪ್ರಾಕೃತಿಕವಾಗಿ ದೊರೆಯುವ ಹೂವುಗಳನ್ನು, ತನ್ನ ಭಾವನೆಗೆ ತಕ್ಕಂತೆ ಜೋಡಿಸಿ ಅಂದದ ಹೂಮಾಲೆ ಕಟ್ಟುವ ಕಲೆಯನ್ನು ಕರಗತ ಮಾಡಿಕೊಂಡಿರುವ ಕಡಬ ಗ್ರಾಮದ ಪಿಜಕಳ ನಂದೋಳಿ ನಿವಾಸಿ ನೋಣಪ್ಪ ಗೌಡರ ಅಪರೂಪದ ಪ್ರತಿಭೆಯು ಇದೀಗ ಎಲ್ಲರ ಗಮನ ಸೆಳೆಯುತ್ತಿದೆ.

ವೃತ್ತಿಯಲ್ಲಿ ಚಾಲಕರಾದ ನೋಣಪ್ಪ ಗೌಡರು, ಪ್ರವೃತ್ತಿಯಲ್ಲಿ ಹೂಮಾಲೆ ಕಟ್ಟುವ ಹವ್ಯಾಸ ಬೆಳೆಸಿಕೊಂಡಿದ್ದು, ಬಿಡುವಿನ ವೇಳೆ ಮನೆಯಲ್ಲಿ ಹೂಮಾಲೆ ಕಟ್ಟಿ ಸ್ಥಳೀಯ ದೇವಸ್ಥಾನಗಳಿಗೆ, ಶುಭ ಸಮಾರಂಭಗಳಿಗೆ, ಸಭಾ ವೇದಿಕೆಗಳ ಅಲಂಕಾರಕ್ಕೆ , ಉದ್ಘಾಟನಾ ಕಾರ್ಯಕ್ರಮದ ದೀಪ ಅಲಂಕಾರಕ್ಕೆ ಹೂವಿನ ಅಥವಾ ಅಡಿಕೆ ಹಿಂಗಾರದ ಮಾಲೆಯನ್ನು ಕಟ್ಟಿ ಉಚಿತವಾಗಿ ನೀಡುತ್ತಾರೆ. ತನ್ನ ಚಿಕ್ಕ ಮನೆಯಲ್ಲಿ ಪತ್ನಿ ಲಲಿತಾ ಹಾಗೂ ಮಕ್ಕಳಾದ ರಕ್ಷಿತ್ ಹಾಗೂ ರಶ್ಮಿತಾ ಒಳಗೊಂಡ ಪುಟ್ಟ ಸಂಸಾರವು ನೋಣಪ್ಪ ಗೌಡರ ಚಾಲಕ ವೃತ್ತಿಯಿಂದಲೇ ಜೀವನ ಸಾಗಿಸುತ್ತಿದ್ದಾರೆ. ಬೇರೆ ಯಾವುದೇ ಅದಾಯದ ಮೂಲಗಳು ಇವರಿಗಿಲ್ಲವಾದರೂ ತನ್ನ ಹೂಮಾಲೆ ಕಟ್ಟುವ ಹವ್ಯಾಸವನ್ನು ಸೇವೆಯ ರೂಪದಲ್ಲಿ ನೀಡುವುದು ಇವರ ವಿಶೇಷ. ಪ್ರಕೃತಿಯಲ್ಲಿ ದೊರೆಯುವ ಕೇಪುಳು ಹೂ, ತುಳಸಿ ಎಲೆ ಹಾಗೂ ಅಡಿಕೆಯ ಹಿಂಗಾರ ಮೊದಲಾದವುಗಳನ್ನು ಬಾಳೆಗಿಡದ ಬಳ್ಳಿ, ದರ್ಬೆ ಗಿಡವನ್ನು ದಾರದ ರೂಪದಲ್ಲಿ ಮಾಡಿ ಹೂವುಗಳನ್ನು ಪೋಣಿಸುತ್ತಾರೆ. ಅಂದ ಹೆಚ್ಚಿಸಲು ಕೆಲವೊಂದು ಬಾರಿ ಬಣ್ಣದ ದಾರವನ್ನೂ ಉಪಯೋಗಿಸುತ್ತಾರೆ. ಅತ್ಯಂತ ಸೂಕ್ಷ್ಮವಾಗಿರುವ ಈ ಕೆಲಸಕ್ಕೆ ತಾಳ್ಮೆ ಮತ್ತು ಸಮಯ ಅವಶ್ಯಕವಾಗಿದೆ.

Also Read  ಕಾಲೇಜುಗಳಲ್ಲಿ ಪ್ರಾಮಾಣಿತ ಕಾರ್ಯಚರಣೆ ವಿಧಾನದ(ಎಸ್.ಓ.ಪಿ) ಪಾಲನೆ ಕಡ್ಡಾಯ ➤ ದ.ಕ ಜಿಲ್ಲಾಧಿಕಾರಿ ಡಾ ರಾಜೇಂದ್ರ ಕೆ.ವಿ

ಹಲವು ವರ್ಷಗಳಿಂದ ಈ ಹವ್ಯಾಸವನ್ನು ಬೆಳೆಸಿಕೊಂಡಿರುವ ಇವರು ಹೂಮಾಲೆ ರಚನಾ ವಿಷಯದಲ್ಲಿ ಯಾರ ಬಳಿಯೂ ತರಬೇತಿ ಪಡೆದವರಲ್ಲ. ತನ್ನ ಯೋಚನಾ ಶಕ್ತಿಯನ್ನು ಬಳಸಿ ವಿವಿಧ ರೂಪಗಳ ಹೂಮಾಲೆಗಳನ್ನು ಕಟ್ಟುತ್ತಾರೆ. ಕಿರೀಟ ಮಾಲೆ, ಕನ್ನಡಿ ಮಾಲೆ, ಮದುವೆ ಹಾರಗಳು, ದೈವದ ರೂಪಕ್ಕೆ ಹೊಂದಿಕೊಳ್ಳುವ ಹೂಮಾಲೆ ಇವರ ಕೈಚಳಕದಿಂದ ಮೂಡಿ ಬರುತ್ತಿವೆ. “ಈ ಹಿಂದೆ ಶುಭ ಕಾರ್ಯಕ್ರಮವೊಂದರಲ್ಲಿ ಅಲಂಕಾರಿಕವಾಗಿಟ್ಟ ತನ್ನ ಹೂಮಾಲೆಯನ್ನು ನೋಡಿ ಮಂಗಳೂರಿನ ದೇವಸ್ಥಾನವೊಂದರ ಮುಖ್ಯಸ್ಥರು ತಮಗೂ ಈ ತರಹದ ಹಾರಗಳನ್ನು
ಮಾಡಿಕೊಡುವಂತೆ ಬೇಡಿಕೆಯಿಟ್ಟಿದ್ದರು ಅದನ್ನು ಪೂರೈಸಿದ್ದೇನೆ. ಪ್ರಾಕೃತಿಕವಾಗಿ ಸಿಗುವ ಕಚ್ಚಾ ವಸ್ತುಗಳನ್ನು ನೀಡಿದ್ದಲ್ಲಿ, ಸ್ಥಳೀಯವಾಗಿ ಯಾವುದೇ ಕಾರ್ಯಕ್ರಮಕ್ಕೆ ಹೂವಿನ ಹಾಗೂ ಹಿಂಗಾರದ ಮಾಲೆಗೆ ಬೇಡಿಕೆ ಬಂದರೆ ಹಾಗೂ ಮದುವೆ ದಿನದಂದು ಗಂಡು-ಹೆಣ್ಣು ಹಾಕುವ ಹಾರವನ್ನು ಅವರ ಬೇಡಿಕೆಗೆ ತಕ್ಕಂತೆ ರಚಿಸಿ ಯಾವುದೇ ಫಲಾಪೇಕ್ಷೆಯಿಲ್ಲದೆ ನೀಡಲು ತಾನು ಸಿದ್ದ ಎನ್ನುತ್ತಾರೆ ನೋಣಪ್ಪ ಗೌಡರು. ಪಿಜಕಳ ಶ್ರೀ ಮಹಾವಿಷ್ಣು ದೇವಸ್ಥಾನಕ್ಕೆ, ಕಡಬ ಶ್ರೀ ದುರ್ಗಾಂಬಿಕಾ ದೇವಸ್ಥಾನ ಮೊದಲಾದ ಸ್ಥಳಿಯ ದೇವಸ್ಥಾನಕ್ಕೆ ವಿಶೇಷ ಹಬ್ಬದ ದಿನಗಳಲ್ಲಿ ಹೂಮಾಲೆಯನ್ನು ದೇವರಿಗೆ ಅರ್ಪಿಸುತ್ತಾರೆ. ಶುಭಕಾರ್ಯಗಳಲ್ಲಿ ಬಳಕೆ ಮಾಡುವ ಕಳಸದಲ್ಲಿಡುವ ತೆಂಗಿನ ಕಾಯಿಯ ಮೇಲೆ ಸುಂದರ ಕಲಾಕೃತಿಗಳನ್ನು ರಚಿಸುವ ನೈಪುಣ್ಯತೆಯೂ ಇವರಿಗೆ ಕರಗತವಾಗಿದೆ.

Also Read  7, 8, 9ನೇ ತರಗತಿ ವಿದ್ಯಾರ್ಥಿಗಳು ಪರೀಕ್ಷೆ ಇಲ್ಲದೇ ಪಾಸ್, ಎಸೆಸೆಲ್ಸಿ ಪರೀಕ್ಷೆ ವೇಳಾಪಟ್ಟಿ ಎ.14ರ ನಂತರ ತೀರ್ಮಾನ: ಸಚಿವ ಸುರೇಶ್ ಕುಮಾರ್

 

error: Content is protected !!
Scroll to Top