(ನ್ಯೂಸ್ ಕಡಬ) newskadaba.com ಸವಣೂರು, ಡಿ. 10. ರಜಾ ದಿನಗಳ ಶಾಲಾ ಮಕ್ಕಳ ಬಿಸಿಯೂಟದ ಪದಾರ್ಥಗಳನ್ನು ಸರಿಯಾಗಿ ವಿತರಿಸದೇ ಶಾಲಾ ಆಡಳಿತ ಮಂಡಳಿ ಮತ್ತು ಶಿಕ್ಷಕರು ರಾತ್ರಿ ವೇಳೆ ಸಾಗಾಟ ಮಾಡುತ್ತಿದ್ದರು ಎಂದು ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ ಘಟನೆ ತಾಲೂಕಿನ ಹಿರೇಮುಗದೂರ ಗ್ರಾಮದ ಟಿಎಂಎಇ ಹೈಸ್ಕೂಲ್ ನಲ್ಲಿ ನಡೆದಿದೆ.
ತಾಲೂಕು ಅಕ್ಷರ ದಾಸೋಹ ಸಮಿತಿ ವತಿಯಿಂದ ಕೊರೋನಾ ಹಿನ್ನೆಲೆ ಶಾಲಾ ರಜಾ ದಿನಗಳಾದ ಎಪ್ರಿಲ್ ತಿಂಗಳ ಹದಿನೈದು ದಿನ, ಜುಲೈ ತಿಂಗಳ ಇಪ್ಪತ್ತಾರು ದಿನ ಹಾಗೂ ಆಗಸ್ಟ್ ತಿಂಗಳ 26 ದಿನದ ಒಟ್ಟು 14 ಕ್ವಿಂಟಾಲ್ ಅಕ್ಕಿ ಸೇರಿದಂತೆ ವಿವಿಧ ಪದಾರ್ಥಗಳನ್ನು ಶಾಲೆಗೆ ನೀಡಿತ್ತು. ಆದರೆ ಎಸ್ಡಿಎಂಸಿ ಹಾಗೂ ಶಿಕ್ಷಕರು ಸುತ್ತೋಲೆಯ ಪ್ರಕಾರ ವಿದ್ಯಾರ್ಥಿಗಳಿಗೆ ಕಡಿಮೆ ಪ್ರಮಾಣದಲ್ಲಿ ಅಕ್ಕಿ ವಿತರಿಸಿ ಉಳಿದ ಸುಮಾರು ಎಂಟು ಕ್ವಿಂಟಾಲ್ ಅಕ್ಕಿಯನ್ನು ಸಾಗಾಣೆ ಮಾಡುವ ಪ್ರಯತ್ನ ನಡೆದಿದೆ ಎಂದು ಗ್ರಾಮಸ್ಥರು ಆರೋಪಿಸಿದ್ದಲ್ಲದೇ, ಉಳಿದ ಅಕ್ಕಿಯನ್ನು ವಿದ್ಯಾರ್ಥಿಗಳಿಗೆ ವಿತರಿಸುವಂತೆ ಆಗ್ರಹಿಸಿದರು. ಬಳಿಕ ಶಾಲಾ ಮುಖ್ಯ ಶಿಕ್ಷಕ ವಿ.ಎಸ್. ಹಿರೇಮಠ ಅವರನ್ನು ಸಂಪರ್ಕಿಸಿದ ಅಕ್ಷರ ದಾಸೋಹ ತಾಲೂಕು ನಿರ್ದೇಶಕ ಕಲ್ಮೇಶ ಸುಳದೊಳ್ಳಿ ಉಳಿದ ಆಹಾರ ಪದಾರ್ಥಗಳನ್ನು ವಿತರಿಸಲು ಸೂಚಿಸಿದ್ದು, ಅದರಂತೆಯೇ ವಿತರಿಸಲಾಯಿತು.